- ರಾಘವೇಂದ್ರ ಅಡಿಗ ಎಚ್ಚೆನ್.
ಜನ್ಮದಿನದಂದೇ ಬಿಡುಗಡೆಯಾದ ಚಿತ್ರ – ನವತಿ ಸಂಭ್ರಮದ ಸಮಾರೋಪವೂ ವೈಭವದಿಂದ ಸಂಪನ್ನ
ಶತಮಾನ ಕಂಡ ಪ್ರಖಾಂಡ ವಿದ್ವಾಂಸ, ಪ್ರಸಿದ್ಧ ವಾಗ್ಮಿ, ಪ್ರವಚನಕಾರ, ಲೇಖಕ, ಚಿಂತಕ, ವೇದಾಂತಿ, ಭಾರತೀಯ ತತ್ತ್ವಶಾಸ್ತ್ರಜ್ಞ, ದೇಶ-ವಿದೇಶಗಳಲ್ಲಿ ಅಪಾರ ಶಿಷ್ಯವೃಂದವನ್ನು ಹೊಂದಿರುವ ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಜೀವನವನ್ನು ಆಧರಿಸಿದ ‘ಇಂದು ಏನೆಗೆ ಗೋವಿಂದ’ ಬಯೋಪಿಕ್ ಇಂದು ಅವರ ಜನ್ಮದಿನದ ಅಂಗವಾಗಿ ಭವ್ಯವಾಗಿ ಬಿಡುಗಡೆಯಾಯಿತು.
ಚಿತ್ರದ ಪ್ರಥಮ ಪ್ರದರ್ಶನದಲ್ಲಿ ಆಹ್ವಾನಿತ ಅಭಿಮಾನಿಗಳು, ಶಿಷ್ಯರು ಹಾಗೂ ಗಣ್ಯರು ಭಾಗವಹಿಸಿ ಚಿತ್ರವನ್ನು ವೀಕ್ಷಿಸಿ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು. ಬನ್ನಂಜೆ ಗೋವಿಂದಾಚಾರ್ಯರ ಅದ್ಭುತ ವ್ಯಕ್ತಿತ್ವ, ಅವರ ಅಪಾರ ಶಾಸ್ತ್ರಪಾಂಡಿತ್ಯ, ಭಾರತೀಯ ಸಂಸ್ಕೃತಿ ಹಾಗೂ ವೇದಾಂತ ಪ್ರಚಾರಕ್ಕಾಗಿ ಅವರು ಸಲ್ಲಿಸಿರುವ ಅಪ್ರತಿಮ ಸೇವೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರದಲ್ಲಿ ನಿರೂಪಿಸಲಾಗಿದೆ ಎಂದು ಎಲ್ಲರೂ ಪ್ರಶಂಸಿಸಿದರು.

ಚಿತ್ರದ ವಿಶೇಷ ಪ್ರದರ್ಶನಕ್ಕೆ ಪರಮಪೂಜ್ಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಮೂಡಬಿದಿರೆಯ ಜೈನ ಮಠದ ಜಾರುಕಿರ್ತಿ ಭಟ್ಟಾರಕ ಸ್ವಾಮೀಜಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಪಾದರುಗಳು, “ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಭಾರತೀಯ ಜ್ಞಾನಪರಂಪರೆಯ ಮಹೋನ್ನತ ಪ್ರತಿನಿಧಿಗಳು. ವೇದ, ವೇದಾಂತ, ಭಾರತೀಯ ತತ್ತ್ವಶಾಸ್ತ್ರ ಮತ್ತು ಸನಾತನ ಸಂಸ್ಕೃತಿಯ ಪ್ರಚಾರಕ್ಕಾಗಿ ಅವರು ಸಲ್ಲಿಸಿರುವ ಸೇವೆ ಅನನ್ಯವಾಗಿದೆ. ಇಂತಹ ಮಹನೀಯರ ಜೀವನವನ್ನು ಚಿತ್ರರೂಪದಲ್ಲಿ ದಾಖಲಿಸಿರುವುದು ಸಮಾಜಕ್ಕೆ ಶಾಶ್ವತ ಪ್ರೇರಣೆಯಾಗಲಿದೆ. ವಿಶೇಷವಾಗಿ ಯುವಜನತೆ ಈ ಚಿತ್ರವನ್ನು ನೋಡಿ ಭಾರತೀಯ ಶಾಸ್ತ್ರ, ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಅಭಿಮಾನ ಬೆಳೆಸಿ, ಸಮಾಜಮುಖಿ ಜೀವನಕ್ಕೆ ಸ್ಫೂರ್ತಿ ಪಡೆಯಲಿ” ಎಂದು ಹಾರೈಸಿದರು.

ಇದೇ ದಿನ ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆದ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ನವತಿ ಸಂಭ್ರಮದ ಸಮಾರೋಪ ಸಮಾರಂಭವೂ ಅತ್ಯಂತ ವೈಭವದಿಂದ ನೆರವೇರಿತು.





