- ರಾಘವೇಂದ್ರ ಅಡಿಗ ಎಚ್ಚೆನ್.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇದೀಗ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅವರು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಬೆಂಗಾಲಿ ಆವೃತ್ತಿಗೆ ಹೋಸ್ಟ್ ಆಗಿ ಆಯ್ಕೆಯಾಗಿದ್ದು, ಶೀಘ್ರದಲ್ಲೇ ಸ್ಟಾರ್ ಜಲ್ಶಾ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ಭಾರತದಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದೊಡ್ಡ ಜನಪ್ರಿಯತೆ ಇದೆ. ವಿವಿಧ ಭಾಷೆಗಳಲ್ಲಿ ಈ ಶೋವನ್ನು ಸಲ್ಮಾನ್ ಖಾನ್, ಕಮಲ್ ಹಾಸನ್, ನಾಗಾರ್ಜುನ, ಕಿಚ್ಚ ಸುದೀಪ್ ಹಾಗೂ ವಿಜಯ್ ಸೇತುಪತಿ ಮೊದಲಾದ ಸ್ಟಾರ್‌ಗಳು ನಿರೂಪಿಸಿದ್ದಾರೆ. ಆದರೆ ಕ್ರಿಕೆಟ್ ಕ್ಷೇತ್ರದ ಹಿನ್ನೆಲೆ ಹೊಂದಿರುವ ವ್ಯಕ್ತಿಯೊಬ್ಬರು ಈ ಶೋ ನಿರೂಪಣೆ ಮಾಡುವುದು ಇದೇ ಮೊದಲ ಬಾರಿಗೆ ಎನ್ನುವುದು ವಿಶೇಷವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ವಿಭಿನ್ನ ಸ್ವಭಾವದ ಸ್ಪರ್ಧಿಗಳನ್ನು ನಿರ್ವಹಿಸುವುದು ಸುಲಭ ಕೆಲಸವಲ್ಲ. ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಶೈಲಿಗೆ ಪ್ರಸಿದ್ಧರಾದ ಸೌರವ್ ಗಂಗೂಲಿ ಅವರು ಈ ಶೋವನ್ನು ಸಮರ್ಥವಾಗಿ ನಡೆಸಿಕೊಡಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕನ್ನಡ, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯುತ್ತಿದೆ. ಕನ್ನಡದಲ್ಲಿ ಮೊದಲ ಸೀಸನ್ 2013ರಲ್ಲಿ ಆರಂಭಗೊಂಡಿದ್ದು, ಈಗಾಗಲೇ 12 ಸೀಸನ್‌ಗಳು ಪೂರ್ಣಗೊಂಡಿವೆ. ಬೆಂಗಾಲಿ ಭಾಷೆಯಲ್ಲೂ ಮೊದಲ ಸೀಸನ್ 2013ರಲ್ಲಿ ಪ್ರಸಾರವಾಗಿದ್ದು, ಅದನ್ನು ಮಿಥುನ್ ಚಕ್ರವರ್ತಿ ನಿರೂಪಿಸಿದ್ದರು. ಎರಡನೇ ಸೀಸನ್ 2016ರಲ್ಲಿ ಪ್ರಸಾರವಾಗಿದ್ದು, ಅದಕ್ಕೆ ಜೀತ್ ಹೋಸ್ಟ್ ಆಗಿದ್ದರು.
ಆದರೆ ಮೊದಲ ಎರಡು ಸೀಸನ್‌ಗಳು ನಿರೀಕ್ಷಿತ ಯಶಸ್ಸು ಕಾಣದ ಕಾರಣ ಶೋ ನಿಲ್ಲಿಸಲಾಗಿತ್ತು. ಇದೀಗ ಸುಮಾರು 10 ವರ್ಷಗಳ ಬಳಿಕ ಬಿಗ್ ಬಾಸ್ ಬೆಂಗಾಲಿ ಆವೃತ್ತಿ ಮತ್ತೆ ಆರಂಭವಾಗುತ್ತಿದ್ದು, ಸೌರವ್ ಗಂಗೂಲಿ ಹೋಸ್ಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ ಗಮನ ಸೆಳೆದಿದೆ.





