ಶರತ್ ಚಂದ್ರ.
ಕೆಲವು ದಿನಗಳ ಹಿಂದೆ ವೇದಿಕೆಯಲ್ಲಿ ಎರಡು ಹಳೆಯ ಜೋಡಿಗಳ ಸಮಾಗಮವಾಗಿದೆ.
ಬೆಂಗಳೂರಿನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಕೇಡಿ ಚಿತ್ರದ ಟೀಸರ್ ಲಾಂಚ್ ಇವೆಂಟ್ ನಲ್ಲಿ ಅನೇಕ ವರ್ಷಗಳ ನಂತರ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಜೊತೆಯಾಗಿ ಜೋಡಿ ಕಾಣಿಸಿಕೊಂಡಿದ್ದಾರೆ. ಕೇಡಿ ಚಿತ್ರದಲ್ಲಿ ಇವರಿಬ್ಬರ ಕಾಂಬಿನೇಷನ್ ಇಲ್ಲದಿದ್ದರೂ ಕೂಡ ಒಂದೇ ಚಿತ್ರದಲ್ಲಿ ಇಬ್ಬರು ಮತ್ತೆ ಕಾಣಿಸಿಕೊಂಡಿದ್ದಾರೆ. ಪ್ರೀತ್ಸೋದ್ ತಪ್ಪಾ ಚಿತ್ರದ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಇಬ್ಬರು ಮೆಲುಕು ಹಾಕಿ ಡ್ಯಾನ್ಸ್ ಮಾಡಿ ಹಳೆಯ ದಿನಗಳತ್ತ ಕರೆದುಕೊಂಡು ಹೋಗಿದ್ದರು.
ಒಂದು ಕಾಲದಲ್ಲಿ ಬೊಮ್ಮರಿಲ್ಲು ಚಿತ್ರದ ಮೂಲಕ ಮೋಡಿ ಮಾಡಿ ದಕ್ಷಿಣ ಭಾರತದ ಜನಪ್ರಿಯ ನಾಯಕ ನಟಿ ಎನಿಸಿಕೊಂಡಿದ್ದ ಜೆನಲಿಯಾ ಡಿಸೋಜ ಮತ್ತೆ ದಕ್ಷಿಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿ ಬಿಡುಗಡೆಗೆ ಸಿದ್ಧವಾಗಿರುವ ಜೂನಿಯರ್ ಚಿತ್ರದ ಪ್ರಿ ರಿಲೀಸ್ ಈವೆಂಟಿಗೆ ಬೆಂಗಳೂರಿಗೆ ಬಂದಾಗ, 2008 ಇಸವಿ ಯಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಸತ್ಯ ಇನ್ ಲವ್ ಚಿತ್ರದ ನಾಯಕ ಶಿವರಾಜ್ ಕುಮಾರ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.
ವೇದಿಕೆಯಲ್ಲಿ ಜೇನಿಲಿಯ,ಸತ್ಯ ಇನ್ ಲವ್ ನಂತರ ಶಿವಣ್ಣ ಯಾವುದೇ ಚಿತ್ರಕ್ಕೆ ನನ್ನನ್ನು ನಾಯಕಿಯಾಗಿ ಕರೆದಿಲ್ಲ ಎಂದು ಕಂಪ್ಲೇಂಟ್ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿ ಸದ್ಯದಲ್ಲೇ ಮತ್ತೆ ನಿಮ್ಮನ್ನು ನಾಯಕಿ ಯಾಗಿ ತಮ್ಮ ಚಿತ್ರದಲ್ಲಿ ಹಾಕಿಕೊಂಡು ಕನ್ನಡ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತೇನೆ ಎಂದು ವೇದಿಕೆಯಲ್ಲಿ ಆಶ್ವಾಸನೆ ನೀಡಿದರು. ಇಬ್ಬರು ತಾವು ನಟಿಸಿದ ಚಿತ್ರದ ಚಿತ್ರೀಕರಣದ ಅನುಭವವನ್ನು ಎಲ್ಲರ ಸಮಕ್ಷಮ ದಲ್ಲಿ ಹಂಚಿಕೊಂಡಿದ್ದರು.
ಇತ್ತೀಚೆಗೆ ತೆರೆಯ ಮೇಲೆ ಇನ್ನೆರಡು ಜನಪ್ರಿಯ ಜೋಡಿಗಳ ಸಮಾಗಮವಾಗಿದೆ. ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿಗಳಾದ ಅನಂತ್ ನಾಗ್ ಮತ್ತು ಲಕ್ಷ್ಮಿ ನಟಿಸಿರುವ ಶರಣ್ ನಾಯಕನಾಗಿ ನಟಿಸಿರುವ ದೇಶದ್ರೋಹಿ ಎಂಬ ಚಿತ್ರ ಬಿಡುಗಡೆ ಸಿದ್ಧವಾಗಿದೆ. ತುಂಬಾ ವರ್ಷಗಳ ಹಿಂದೆ ಆರಂಭವಾದ ಈ ಚಿತ್ರ ಈಗ ಸಂಪೂರ್ಣಗೊಂಡಿದ್ದು ತರೆ ಮೇಲೆ ಬರಲು ಸಿದ್ಧವಾಗಿದೆ.
ಮನೆದೇವ್ರು ಚಿತ್ರದ ಮೂಲಕ ಮೋಡಿ ಮಾಡಿದ ರವಿಚಂದ್ರನ್ ಮತ್ತು ಸುಧಾರಾಣಿ ಜೋಡಿ ಕೂಡ ಜೂನಿಯರ್ ಚಿತ್ರದ ಮೂಲಕ ಮತ್ತೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅವರು ನಾಯಕ ನ ತಂದೆಯಾಗಿ ಪ್ರಮುಖ ಪಾತ್ರ ದಲ್ಲಿ ಅಭಿನಯಿಸಿದ್ದು, ಸುಧಾರಾಣಿಯವರ ಪಾತ್ರ ತೆರೆಯ ಮೇಲೆ ಕೆಲವೇ ನಿಮಿಷಗಳಲ್ಲಿ ಬರುವ ಪಾತ್ರ ವಾಗಿದ್ದರೂ ಕೂಡ ಇವರಿಬ್ಬರನ್ನು ಮತ್ತೆ ಜೊತೆಗೆ ನೋಡುವ ಅವಕಾಶ ಸಿನಿಪ್ರೇಕ್ಷಕ ರದ್ದಾಗಿದೆ.
ಮೇಲೆ ತಿಳಿಸಿದ ಎರಡು ಜೋಡಿಗಳು ಪೋಷಕ ಪಾತ್ರಗಳನ್ನು ನಿಭಾಯಿಸುತ್ತಿದ್ದರೂ ಕೂಡ ಇವರನ್ನು ಮತ್ತೆ ತೆರೆಯ ಮೇಲೆ ನೋಡಿ ಅವರ ಅಭಿಮಾನಿಗಳು ಖುಷಿ ಪಡುವುದಂತೂ ಸತ್ಯ.