- ರಾಘವೇಂದ್ರ ಅಡಿಗ ಎಚ್ಚೆನ್.
TBY ಕ್ರಿಯೇಷನ್ಸ್ ಮತ್ತು ಶ್ರಿ ಆದಿಶಿವ ಕ್ರಿಯೇಷನ್ಸ್ ಬ್ಯಾನರ್ ಅಡಿ ಬ್ರಿಜ್ ಯಾದವ್ ಮತ್ತು ನಾಗವೇಣಿ ನಿರ್ಮಿಸಿರುವ, ತಾರುಶ್ ನಿರ್ದೇಶನದ ‘ಜಾಲಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು. ‘ರಾಬರ್ಟ್’ ಮತ್ತು ‘ಮದಗಜ’ ಚಿತ್ರಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಿರ್ಮಾಪಕರಿಗೆ ಮೊದಲು ಗೌರವ ಸಿಗಬೇಕು, ಇಂಡಸ್ಟ್ರಿ ಪರಿಸ್ಥಿತಿ: ವರ್ಷಕ್ಕೆ 300 ರಿಂದ 400 ಸಿನಿಮಾಗಳು ಬರುತ್ತವೆ. ಆದರೆ ಶೋಕಿಗಾಗಿ ಸಿನಿಮಾ ಮಾಡದೆ, ಕಥೆ ಮತ್ತು ಬಜೆಟ್ ಸ್ಪಷ್ಟತೆಯೊಂದಿಗೆ ಜವಾಬ್ದಾರಿಯಿಂದ ಮಾಡಬೇಕು ಮೊಬೈಲ್, OTT, Instagram ಹಾಗೂ ಬಿಗ್‌ಬಾಸ್‌ಗಳ ಕಾರಣದಿಂದ ಜನರಿಗೆ ಬೆರಳ ತುದಿಯಲ್ಲೇ ಎಂಟರ್‌ಟೈನ್‌ಮೆಂಟ್ ಸಿಗುತ್ತಿದೆ. ಹೀಗಾಗಿ ಜನರನ್ನು ಥಿಯೇಟರ್‌ಗೆ ಕರೆತರುವುದು ದೊಡ್ಡ ಸವಾಲು ಎಂದು ಉಮಾಪತಿ ಅವರು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಮತ್ತು ಸಂಬಂಧಗಳಲ್ಲಿ ತಪ್ಪುತಿಳುವಳಿಕೆಗಳಿಂದ ಏನೆಲ್ಲಾ ಆಗುತ್ತದೆ ಎಂಬುದರ ಕುರಿತು ಕಥೆ ಹೆಣೆಯಲಾಗಿದ್ದು, ಕೊನೆಯಲ್ಲಿ ಪರಿಹಾರ ಮತ್ತು ಸಂದೇಶವನ್ನು ನೀಡಲಾಗಿದೆಯಂತೆ. ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗಾಗಿ ಒಂದು ವಿಶೇಷವಾದ ಸರ್ಪ್ರೈಸ್ ಇದೆಯಂತೆ.

ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ತಾರುಶ್ ಕಾಣಿಸಿಕೊಂಡಿದ್ದಾರೆ. ನಾಯಕ ಹಾಗೂ ನಿರ್ದೇಶಕ ತಾರುಶ್ ಅವರು ಸುಮಾರು 12 ವರ್ಷಗಳ ಕಾಲ ರಂಗಭೂಮಿ, ನಾಟಕ ಮತ್ತು ಕಿರುಚಿತ್ರಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಈ ಹಂತಕ್ಕೆ ಬಂದಿದ್ದಾರೆ. ಈ ಚಿತ್ರದ ಎಡಿಟಿಂಗ್ ಹಾಗೂ ಕೆಲವು ಹಾಡುಗಳ ಸಾಹಿತ್ಯವನ್ನೂ ತಾವೇ ಬರೆದಿದ್ದಾರೆ.

ಚಿತ್ರದಲ್ಲಿ ಆರು ಹಾಡುಗಳಿವೆ. ಯೋಗರಾಜ್ ಭಟ್, ಕಿನ್ನಲ್ ರಾಜ್ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ನಿತಿನ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ತಾರುಶ್ ಜೊತೆಗೆ ರೇಖಾ ದಾಸ್, ಶೋಭರಾಜ್ ಮುಂತಾದವರು ನಟಿಸಿದ್ದು, ಚಿತ್ರ ಜುಲೈ 31ರಂದು ಬಿಡುಗಡೆ ಆಗುತ್ತಿದೆ. ಕನ್ನಡ ಚಿತ್ರರಂಗವನ್ನು ಮತ್ತು ಹೊಸ ಪ್ರತಿಭೆಗಳನ್ನು ಉಳಿಸಿ ಬೆಳೆಸಲು ಪ್ರೇಕ್ಷಕರು ತಿಂಗಳಿಗೆ ಕನಿಷ್ಠ ಒಂದು ಅಥವಾ ಎರಡು ಸಿನಿಮಾವನ್ನು ಥಿಯೇಟರ್‌ಗೆ ಬಂದು ನೋಡಬೇಕೆಂದು ಇಡೀ ಚಿತ್ರತಂಡ ಮನವಿ ಮಾಡಿದೆ.





