Sj*
ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ವಿಶಿಷ್ಟ ನಟ ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಕುತೂಹಲ ಮೂಡಿಸಿದೆ. ಜೆಬಿ ಮೋಷನ್ ಪಿಕ್ಚರ್ಸ್‌ನ ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲಾ ಅವರ ಸಹಯೋಗದೊಂದಿಗೆ ಪೂರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರದ ಹೊಸ ಗ್ಲಿಂಪ್ಸ್ ಬಿಡುಗಡೆಯಾಗಿದೆ.
ಇತ್ತೀಚೆಗಷ್ಟೇ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಖ್ಯಾತ ನಟಿ ಟಬು ಅವರ ಲುಕ್ ಗ್ಲಿಂಪ್ಸ್‌ಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದ್ದ ಬೆನ್ನಲ್ಲೇ, ಇದೀಗ ವಿಜಯ್ ಸೇತುಪತಿಯವರ ತಾಯಿ ‘ಜುಬೇದಾ’ ಪಾತ್ರವನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗಿದೆ.
ಚಿತ್ರದಲ್ಲಿ ತಾಯಿಯ ಪಾತ್ರಕ್ಕೆ ಹಿರಿಯ ನಟಿ ಝರೀನಾ ವಹಾಬ್ ಜೀವ ತುಂಬಿದ್ದು, ಬಿಡುಗಡೆಯಾಗಿರುವ ಗ್ಲಿಂಪ್ಸ್ ಅತ್ಯಂತ ಭಾವನಾತ್ಮಕವಾಗಿ ಮೂಡಿಬಂದಿದೆ. ರೈಲ್ವೆ ನಿಲ್ದಾಣದಲ್ಲಿ ಬದುಕು ಕೊನೆಗೊಳಿಸಲು ನಿರ್ಧರಿಸಿದ ಸಂದರ್ಭದಲ್ಲಿ ಅತಿಯಾದ ಹಸಿವು ತಾಳಲಾರದೆ ಅನಿವಾರ್ಯವಾಗಿ ಭಿಕ್ಷೆ ಬೇಡಬೇಕಾಗಿ ಬಂದ ಘಟನೆಯನ್ನು ‘ಜುಬೇದಾ’ ನೆನಪಿಸಿಕೊಳ್ಳುವ ಈ ಸನ್ನಿವೇಶ ಪ್ರೇಕ್ಷಕರ ಕಣ್ಣಂಚುಗಳನ್ನು ತೇವಗೊಳಿಸುವಂತಿದೆ. ಬದುಕುಳಿಯುವ ತೀವ್ರ ಹೋರಾಟ, ಸ್ವಾಭಿಮಾನ ಹಾಗೂ ತಾಯಿಯೊಬ್ಬಳ ನೋವಿನ ಪಯಣವನ್ನು ತೆರೆದಿಟ್ಟಿರುವ ಈ ದೃಶ್ಯವು ಭಿಕ್ಷುಕರ ಬದುಕಿನ ಕಟು ವಾಸ್ತವವನ್ನು ಕಟ್ಟಿಕೊಡುವ ಜೊತೆಗೆ ಚಿತ್ರದ ಕಥೆಯ ಮೂಲ ಭಾವನೆಯನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಿದೆ.
ಸಾಮಾನ್ಯವಾಗಿ ತಮ್ಮ ಹೈ-ವೋಲ್ಟೇಜ್ ಹಾಗೂ ಮಾಸ್ ನಿರೂಪಣೆಗೆ ಹೆಸರಾಗಿರುವ ಪೂರಿ ಜಗನ್ನಾಥ್, ಆಳವಾದ ಭಾವನೆಗಳನ್ನು ಕಾವ್ಯಮಯವಾಗಿ ತೆರೆಯ ಮೇಲೆ ತರುವುದರಲ್ಲಿಯೂ ಸೈ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ. ಝರೀನಾ ವಹಾಬ್ ಅವರ ಪ್ರಬುದ್ಧ ನಟನೆ ಇಡೀ ಸನ್ನಿವೇಶಕ್ಕೆ ಅಪಾರ ತೂಕ ತಂದುಕೊಟ್ಟಿದ್ದು, ಚಿತ್ರಕಥೆಗೆ ಭಾವನಾತ್ಮಕ ಬೆಂಬಲ ನೀಡಿದೆ. ಈ ಗ್ಲಿಂಪ್ಸ್‌ನಲ್ಲಿ ವಿಜಯ್ ಸೇತುಪತಿ ಸೇರಿದಂತೆ ಇತರ ಪ್ರಮುಖ ಪಾತ್ರಗಳು ಕೂಡ ಗಮನಸೆಳೆಯುತ್ತವೆ. ಚಿತ್ರದಲ್ಲಿ ಸಂಯುಕ್ತಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸ್ಯಾಂಡಲ್‌ವುಡ್‌ನ ದುನಿಯಾ ವಿಜಯ್, ಬ್ರಹ್ಮಾಜಿ ಹಾಗೂ ವಿಟಿವಿ ಗಣೇಶ್ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸ್ಯಾಮ್ ಕೆ. ನಾಯ್ಡು ಅವರ ಛಾಯಾಗ್ರಹಣ, ಹರ್ಷವರ್ಧನ್ ರಾಮೇಶ್ವರ್ ಅವರ ಸಂಗೀತ ಸಂಯೋಜನೆ ಮತ್ತು ಸಂತೋಷ್ ನೂಜಿಲ್ಲಾ ಅವರ ಸಂಕಲನವಿದೆ. ವಿಶು ರೆಡ್ಡಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅನಿಲ್ ಪಡೂರಿ ವಿಎಫ್‌ಎಕ್ಸ್ ಜವಾಬ್ದಾರಿ ಹೊತ್ತಿದ್ದಾರೆ. ಸಂಪೂರ್ಣ ಆಕ್ಷನ್-ಡ್ರಾಮಾ ಶೈಲಿಯ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಶೀಘ್ರದಲ್ಲೇ ಬೆಳ್ಳಿಪರದೆಯ ಮೇಲೆ ಅಪ್ಪಳಿಸಲಿದೆ.





