- ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್‌ವುಡ್ ಶಾಕುಂತಲೆ ಐಶಾನಿ ಶೆಟ್ಟಿ ಇದೀಗ ನಟನೆಯಿಂದ ನಿರ್ದೇಶನದತ್ತ ಹೊರಟಿದ್ದಾರೆ. ತಾವೇ ಬರೆದ ಕಥೆಯನ್ನು ದೃಶ್ಯ ರೂಪದಲ್ಲಿ ತೋರಿಸಲು ಸಜ್ಜಾಗಿದ್ದಾರೆ. ಈ ಮೂಲಕ ನಟಿ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ.
‘ವಾಸ್ತು ಪ್ರಕಾರ’ ಸಿನಿಮಾದ ನಟಿ ಐಶಾನಿ ಶೆಟ್ಟಿಗೆ ತಾವು ಬಹುದಿನಗಳಿಂದ ನಿರ್ದೇಶಕಿ ಆಗಬೇಕು ಎಂಬ ಕನಸಿತ್ತು. ಈಗ ಆ ಕನಸಿನತ್ತ ಹೆಜ್ಜೆ ಇಡ್ತಿದ್ದಾರೆ. ಅದಕ್ಕಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ. ಎರಡು ವರ್ಷಗಳ ಹಿಂದೆ ಹೊಳೆದ ಕಥೆಯ ಮೇಲೆ ಕೆಲಸ ಮಾಡಿ ಈಗ ನಟನೆಯ ಜೊತೆಗೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ
ಈ ಹಿಂದೆ ಐಶಾನಿ ‘ಕಾಜಿ’ ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದರು. ಅದು ಹಲವು ಚಿತ್ಸೋತ್ಸವದಲ್ಲಿ ಆಯ್ಕೆಯಾಗಿ, ಮೆಚ್ಚುಗೆ ಕೂಡ ಪಡೆಯಿತು. ಈಗ ಮೊದಲ ಚಲನಚಿತ್ರ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

ತಮ್ಮ ಮೊದಲ ಚಿತ್ರಕ್ಕೆ "ಕಾಜಾಣ" ಎಂದು ಹೆಸರಿಡುವ ಮೂಲಕ ಕುತೂಹಲ ಹುಟ್ಟಿಸಿದ ನಟಿ ಈ ಹಕ್ಕಿ ಅದ್ಬುತ ಹಾಡುಗಾರ,ವಿಭಿನ್ನ ಸ್ವರ ಸಂಯೋಜನೆಯೊಂದಿಗೆ ಕಾಡಿನಲ್ಲಿ ಸಂಗೀತದ ಹೊಳೆಯನ್ನೇ ಹರಿಸುತ್ತದೆ - ಕಾಜಾಣ ಎಂದು ಸಾಮಾಜಿಕ ತಾಣಗಳಲ್ಲಿ ಬರೆದಿದ್ದಾರೆ.
ಶಕುಂತಲೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ, ಐಶಾನಿ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ , ವಿಶ್ವಜಿತ್ ರಾವ್ ಛಾಯಾಗ್ರಹಣ ಇರಲಿದೆ.

'ವಾಸ್ತು ಪ್ರಕಾರ’ ಸಿನಿಮಾದ ಮೂಲಕ ಪರಿಚಿತರಾದ ಐಶಾನಿ, ಪ್ಲಸ್, ರಾಕೇಟ್, ನಡುವೆ ಅಂತರವಿರಲಿ, ನಮ್ ಗಣಿ ಬಿಕಾಂ ಪಾಸ್, ಧರಣಿ ಮಂಡಲ ಮಧ್ಯದೊಳಗೆ, ಹೊಂದಿಸಿ ಬರೆಯಿರಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.





