ಬಾಲಿವುಡ್‌ನಲ್ಲಿ ತಮ್ಮ ಮೊದಲ ಚಿತ್ರ `ದೇವ್ ಡೀ'ಯಿಂದ ಕೆರಿಯರ್ ಆರಂಭಿಸಿದ ಕಲ್ಕಿ, ಅದರಲ್ಲಿ ಆಧುನಿಕ ಚಂದ್ರಮುಖಿಯ ಪಾತ್ರದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಳು. ನಂತರ `ಝಿಂದಗಿ ನ ಮಿಲೇಗಿ ದೋಬಾರಾ' ಚಿತ್ರದಲ್ಲಿ ಒಂದು ಶ್ರೀಮಂತ ಮನೆತನದ ತಲೆಕೆಟ್ಟ ಹುಡುಗಿಯಾಗಿ, ವಿಭಿನ್ನ ಗೆಟಪ್‌ನಲ್ಲಿ ರಂಜಿಸಿ ಸೈ ಎನಿಸಿದ್ದಳು. `ಶಾಂಫೈ' ಚಿತ್ರದಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ ಪಾತ್ರ ವಹಿಸಿದ್ದಳು. ಇದಾದ ನಂತರ `ಹ್ಯಾಪಿ ಎಂಡಿಂಗ್' ಚಿತ್ರದಲ್ಲಿ ಪ್ರೇಮಿಯ ಪ್ರೀತಿಗಾಗಿ ಹುಚ್ಚಳಂತಾಡುವ ಹುಡುಗಿಯಾಗಿ ಕಾಣಿಸಿಕೊಂಡಳು. ವಿಡಂಬನೆ ಎಂದರೆ ವಾಸ್ತವ ಜೀವನದಲ್ಲೂ ಈಕೆ ನಿರ್ದೇಶಕ ಅನುರಾಗ್‌ಕಶ್ಯಪ್‌ರನ್ನು ಮದುವೆಯಾಗಿ, ಮುರಿದ ದಾಂಪತ್ಯದಿಂದ ನೊಂದು ಬೇರಾಗಿ, `ಹ್ಯಾಪಿ ಎಂಡಿಂಗ್' ಚಿತ್ರದ ವಿಶಾಖಾಳಂತೆಯೇ ಒದ್ದಾಡಿಬಿಟ್ಟಳು.
ಕಲ್ಕಿ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ?:
ಇಲ್ಲಿಯವರೆಗೂ ನೀವು ನಟಿಸಿದ ಚಿತ್ರಗಳಲ್ಲಿ ಯಾವ ಪಾತ್ರ ನಿರ್ವಹಣೆ ನಿಮ್ಮಲ್ಲಿನ ಕಲಾವಿದೆಗೆ ತೃಪ್ತಿ ತಂದಿದೆ?
ನನಗೆ `ಮಾರ್ಗರೀಟಾ ವಿತ್ ಎ ಸ್ಟ್ರಾ' ಚಿತ್ರದಲ್ಲಿನ ಪಾತ್ರ ಹೆಚ್ಚಿನ ಆನಂದ, ತೃಪ್ತಿ ತಂದುಕೊಟ್ಟಿದೆ. ಈ ಚಿತ್ರದ ನಿರ್ದೇಶಕಿ ಸೋನಾಲಿ ಬೋಸ್ ನಿಜಕ್ಕೂ ಬಹಳ ಇಂಟೆಲಿಜೆಂಟ್‌ಎಮೋಶನ್. ಈ ಚಿತ್ರ ಇತ್ತೀಚಿನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಬಹಳ ಪ್ರಶಂಸೆಗೆ ಒಳಪಟ್ಟಿತು.
`ಮಾರ್ಗರಿಟಾ ವಿತ್ ಎ ಸ್ಟ್ರಾ' ಚಿತ್ರದಲ್ಲಿ ನಿಮ್ಮ ಪಾತ್ರದ ಕುರಿತು ಸ್ವಲ್ಪ ವಿವರವಾಗಿ ಹೇಳ್ತೀರಾ?
ಈ ಚಿತ್ರದಲ್ಲಿ ನನ್ನದು ಲೈಲಾಳ ಪಾತ್ರ, ಇಂಥ ವಿಕಲಚೇತನ ಪಾತ್ರ ನಿಜಕ್ಕೂ ಬಹಳ ಛಾಲೆಂಜಿಂಗ್ ಅನ್ಸುತ್ತೆ. ಅವಳು ದೆಹಲಿ ಯೂನಿವರ್ಸಿಟಿಯ ವಿದ್ಯಾರ್ಥಿನಿ. ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ದಾಖಲಾತಿ ಪಡೆದ ನಂತರ, ತನ್ನ ತಾಯಿಯ ಜೊತೆಗೆ ಅಮೆರಿಕಾಗೆ ಹೋಗುತ್ತಾಳೆ. ಅಲ್ಲಿ ಅವಳು ಖಾನುಮ್ (ಸಯಾನಿ ಗುಪ್ತಾ) ಳನ್ನು ಪ್ರೇಮಿಸುತ್ತಾಳೆ, ಮುಂದೆ ಅವರಿಬ್ಬರಲ್ಲಿ ಲೈಂಗಿಕ ಸಂಬಂಧ ಬೆಳೆಯುತ್ತದೆ. ಈ ಚಿತ್ರದಲ್ಲಿ ಲೈಲಾ ಹಲವು ಬಗೆಯ ಎಮೋಶನ್ ಹಂತಗಳನ್ನು ಹಾದುಹೋಗುತ್ತಾಳೆ. ಅವಳು ಈ ಚಿತ್ರದಲ್ಲಿ ಬಹಳಷ್ಟು ಗ್ಲಾಮರಸ್ ಸೆಕ್ಸಿಯಾಗಿ ಕಾಣಿಸುತ್ತಾಳೆ. ಅವಳ ಉಡುಗೆಗಳು ಅಲ್ಟ್ರಾಪಾಷ್ ಆಗಿದ್ದು, ಈ ಚಿತ್ರದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬೋಲ್ಡ್ ಸೀನ್ಸ್ ಇವೆ. ಮಡಿವಂತರು ಆಕ್ಷೇಪಿಸುವಂತೆಯೇ ಇವೆ. ನಮ್ಮ ಸೆನ್ಸಾರ್ ಬೋರ್ಡ್ ಏನೆಲ್ಲ ಆಕ್ಷೇಪಿಸಲಿದೋ ಗೊತ್ತಿಲ್ಲ. ಲೈಲಾಳಂಥ ಗೇ ಗರ್ಲ್ ಆಗಿ ನ್ಯೂಡ್ ಸೀನ್ಸ್ ನಲ್ಲಿ ನಟಿಸಲು ನಾನು ಮಾನಸಿಕವಾಗಿ ಬಹಳ ಸಿದ್ಧಳಾಗಬೇಕಾಯ್ತು.
ಲೈಲಾಳ ಪಾತ್ರ ನಿರ್ವಹಿಸಲು ಏನಾದರೂ ವಿಶೇಷ ಟ್ರೇನಿಂಗ್ ಪಡೆಯಬೇಕಾಯ್ತೇ?
ವಿಶೇಷ ಅಂತ ಅಲ್ಲ, ಆದರೂ ನಿರ್ದೇಶಕರ ಸಲಹೆಯ ಅನುಸಾರ ಹಲವು ಕೌನ್ಸೆಲಿಂಗ್ ಕ್ಲಾಸಸ್, ಸೆಮಿನಾರ್, ವರ್ಕ್ ಶಾಪ್ ಇತ್ಯಾದಿಗಳಿಗೆ ಹೋಗಿದ್ದೆ. ಲೈಲಾಳಂಥ ಬೋಲ್ಡ್ ಪಾತ್ರಕ್ಕೆ ನನ್ನಿಂದ ಅನ್ಯಾಯ ಆಗಬಾರದು ಎಂದು ನನ್ನ ಒಳಮನದಲ್ಲಿತ್ತು. ವಿಕಲಚೇತನಳಾದ ಲೈಲಾ ಅಂಥವರ ಪ್ರತಿನಿಧಿಯಾಗಿದ್ದಳು. ಅಂಥವರನ್ನು ಯಾವ ವಿಧದಲ್ಲೂ ತಪ್ಪು ಎಂದು ತೋರಿಸುವ ಉದ್ದೇಶ ನಮ್ಮದಾಗಿರಲಿಲ್ಲ. ಚಿತ್ರದ ನಿರ್ದೇಶಕಿ ಸೋನಾಲಿಯವರ ತಂಗಿ ಮನಾಲಿ ಸಹ ಅಂಗೈಕಲ್ಯಕ್ಕೆ ಗುರಿಯಾದರು. ಈ ಚಿತ್ರಕ್ಕಾಗಿ ಅವರೊಂದಿಗೆ ಬಹಳ ಓಡಾಡಿದೆ. ಆಕೆಯ ಮನೆಗೆ ಹೋಗಿ, 1-2 ದಿನ ಜೊತೆಯಲ್ಲೇ ಕಳೆದು, ಹೊರಗೆಲ್ಲ ಸುತ್ತಾಡಿದೆ. ಇತರರು ಆಕೆ ಜೊತೆ ಹೇಗೆ ವ್ಯವಹರಿಸುತ್ತಾರೆ ಎಂದು ಗುರುತಿಸಿಕೊಂಡೆ.