ಭಾರತ ಪಾಕಿಸ್ತಾನ ಗಡಿಯಲ್ಲಿ ಯುದ್ಧ ಶುರುವಾಗಿದೆ. ಪಾಕಿಸ್ತಾನದ ಕಡೆಯಿಂದ ಸತತ ದಾಳಿ ನಡೆಯುತ್ತಲೇ ಇದೆ. ಅದ್ಯಾವಾಗ ಭಾರತೀಯ ಸೇನೆ ಭಯೋತ್ಪಾದಕರ ನೆಲೆಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಧ್ವಂಸಗೊಳಿಸಿತೋ ಆ ಕ್ಷಣದಿಂದಲೇ ಪಾಕಿಸ್ತಾನ ಭಾರತದ ಮೇಲೆ ಉರಿದು ಬೀಳುತ್ತಿದೆ. ಅದಕ್ಕೆ ತಕ್ಕಂತೆ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠವನ್ನೇ ಕಲಿಸುತ್ತಿದೆ. ಎಲ್ಒಸಿಯಲ್ಲೇ ನಿಂತು ಪಾಕ್ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ಭಾರತದ ರಕ್ಷಣೆಗೆ ಸೈನಿಕರು ಟೊಂಕ ಕಟ್ಟಿ ನಿಂತಿದ್ದಾರೆ..
ಇಡೀ ಶತಕೋಟಿ ಭಾರತೀಯರೂ ಕೂಡ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನೇ ಕಲಿಸಬೇಕು ಅಂತಾ ಮನವಿ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇನೇ ಸಂಭ್ರಮಾಚರಣೆಯ ಕಾರ್ಯಕ್ರಮಗಳಿದ್ದರೂ ಅವೆಲ್ಲವನ್ನೂ ಬದಿಗೊತ್ತಿ ಆಪರೇಷನ್ ಸಿಂಧೂರ ಯಶಸ್ವಿಗೆ ಪ್ರಾರ್ಥಿಸುತ್ತಿದ್ದಾರೆ. ಇಂಥಾ ಹೊತ್ತಿನಲ್ಲಿ ಭಾರತೀಯ ಚಿತ್ರರಂಗವೂ ಕೂಡ ಸಾಥ್ ಕೊಡ್ತಿದೆ. ಕೆಲ ನಿರ್ಮಾಪಕರು ತಮ್ಮ ಚಿತ್ರಗಳ ಶೂಟಿಂಗ್ನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲ, ಕೆಲ ಚಿತ್ರಗಳ ಬಿಡುಗಡೆಯನ್ನೂ ಕೂಡ ಮುಂದಕ್ಕೆ ಹಾಕಿದ್ದಾರೆ. ಇದರ ಮಧ್ಯೆ ದಕ್ಷಿಣ ಭಾರತದ ಖ್ಯಾತ ನಟ, ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ಕೂಡ ತಮ್ಮ ಸಿನಿಮಾ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ.
‘ದೇಶದ ಗಡಿ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ದೇಶದಾದ್ಯಂತ ಇರುವ ಹೈ ಅಲರ್ಟ್ ಅನ್ನು ಗಮನಿಸಿ ಮೇ 16 ರಂದು ನಿಗದಿಯಾಗಿದ್ದ ನಮ್ಮ ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮುಂದೂಡುತ್ತಿದ್ದೇವೆ. ನಮ್ಮ ಸೈನಿಕರು ದೇಶದ ಗಡಿಯಲ್ಲಿ ಶೌರ್ಯದಿಂದ ನಿಂತು ತಾಯ್ನಾಡಿಗಾಗಿ ಹೋರಾಡುತ್ತಿರುವ ಈ ಸನ್ನಿವೇಶದಲ್ಲಿ ಒಗ್ಗಟ್ಟು ಮತ್ತು ಬೆಂಬಲದ ಅವಶ್ಯಕತೆ ಇದೆ. ಅಲ್ಲದೆ ಇದು ವೈಯಕ್ತಿಕ ಸಂಭ್ರಮಾಚರಣೆ ಮಾಡುವ ಸಮಯ ಅಲ್ಲ. ಹಾಗಾಗಿ ಕಾರ್ಯಕ್ರಮ ಮುಂದೂಡಲಾಗಿದ್ದು, ಸೂಕ್ತ ಸಮಯ ನೋಡಿಕೊಂಡು ಮುಂದಿನ ದಿನಾಂಕ ಪ್ರಕಟಿಸಲಾಗುವುದು’ ಅಂತಾ ಕಮಲ್ ಹಾಸನ್ ತಮ್ಮ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
‘ಈ ಸಮಯದಲ್ಲಿ ನಮ್ಮಗಳ ರಕ್ಷಣೆಗಾಗಿ ಶೌರ್ಯದಿಂದ ಹೋರಾಡುತ್ತಿರುವ ನಮ್ಮ ಸೈನಿಕರು ಹಾಗೂ ಅವರ ಕುಟುಂಬಕ್ಕೆ ನಮ್ಮ ಪ್ರಾರ್ಥನೆಗಳು. ಇಂಥಹಾ ಸಮಯದಲ್ಲಿ ದೇಶವಾಸಿಗಳಾಗಿ ನಾವು ನಮ್ಮ ಸೈನ್ಯದ ಪರ ನಿಲ್ಲಬೇಕು ಹಾಗೂ ಒಗ್ಗಟ್ಟು ಪ್ರದರ್ಶಿಸಬೇಕು’ ಅಂತಾ ಭಾರತೀಯ ಸೇನೆಯ ಸಾಹಸ ಮತ್ತು ದಿಟ್ಟತನದ ಉತ್ತರವನ್ನು ಶ್ಲಾಘಿಸಿದ್ದಾರೆ.
‘ಥಗ್ ಲೈಫ್’ ಸಿನಿಮಾದಲ್ಲಿ ನಟಿಸಿರುವ ಕಮಲ್ಹಾಸನ್ ಜೊತೆ ತ್ರಿಷಾ ಕೃಷ್ಣನ್, ಸಿಂಭು ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಸಿನಿಮಾಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.