ಜಾಗೀರ್ದಾರ್*
ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ಅವರು ನಿರ್ಮಿಸುತ್ತಿರುವ, ಡಾ||ವಿ.ನಾಗೇಂದ್ರಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯನ್ನೂ ಮಾಡುತ್ತಿರುವ, ವಿ.ಎಂ.ರಾಜು ಮತ್ತು ನೀಲ್ ಕೆಂಗಾಪುರ ಜಂಟಿಯಾಗಿ ನಿರ್ದೇಶಿಸುತ್ತಿರುವ ಹಾಗೂ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ನಾಯಕನಾಗಿ ನಟಿಸುತ್ತಿರುವ ‘ಕನಕರಾಜ’ ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್ ನ ಪ್ರಸನ್ನ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ಎಂ ರೇವಣ್ಣ ಆರಂಭ ಫಲಕ ತೋರಿದರು. ಕರ್ನಾಟಕ ರಾಜ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಕ್ಯಾಮೆರಾ ಚಾಲನೆ ಮಾಡಿದರು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಸೇರಿದಂತೆ ಮುಂತಾದ ಚಿತ್ರರಂಗದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಇಂದಿನ ಸಮಾರಂಭಕ್ಕೆ ಆಗಮಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ನಿರ್ಮಾಪಕ ಸನತ್ ಕುಮಾರ್, " ಕನಕರಾಜ" ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಆರನೇ ಚಿತ್ರ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ "ಕನಕರಾಜ" ಚಿತ್ರದಲ್ಲೂ ಯುವಜನತೆಗೆ ಉತ್ತಮ ಸಂದೇಶವಿದೆ. ನಮ್ಮ ರಾಜ್ಯದ ವಿವಿಧ ಊರುಗಳಲ್ಲಿ, ಪಕ್ಕದ ರಾಜ್ಯಗಳಲ್ಲಿ ಹಾಗೂ ವಿದೇಶದಲ್ಲೂ ಈ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ಸನತ್ ಕುಮಾರ್(ಮೀನಾಕ್ಷಿ ಕಾಫಿ ಬಾರ್) ತಿಳಿಸಿದರು.
ನಾವು ಸಾಮಾನ್ಯವಾಗಿ ಯವಜನತೆ ರಾಜಕೀಯಕ್ಕೆ ಬರಬೇಕು. ರಾಜಕಾರಣಿಯಾಗಬೇಕು ಅಂತ ಹೇಳುತ್ತಿರುತ್ತೇವೆ. ಈ ಮಾತನ್ನೇ ಪ್ರಮುಖವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಚಿತ್ರದ ನಾಯಕ ವಕೀಲನಾಗಿದರೂ ರಾಜಕೀಯದಲ್ಲೂ ಸಕ್ರಿಯ. ಜೊತೆಗೆ ಮುಖ್ಯಮಂತ್ರಿಗಳ ಅಭಿಮಾನಿಯೂ ಹೌದು. ಹಾಗಾಗಿ ನಮ್ಮ "ಕನಕರಾಜ" ಚಿತ್ರಕ್ಕೆ "fan of cm" ಎಂಬ ಅಡಿಬರಹವಿದೆ ಎಂದು ಚಿತ್ರದ ಕಥೆಗಾರರೂ ಆಗಿರುವ ಸಂಗೀತ ನಿರ್ದೇಶಕ ಡಾ||ವಿ.ನಾಗೇಂದ್ರಪ್ರಸಾದ್ ಹೇಳಿದರು.
ನಿರ್ಮಾಪಕರೂ ಹೇಳಿದ ಹಾಗೆ ನಮ್ಮ ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಪಕ್ಕದ ರಾಜ್ಯಗಳು ಹಾಗೂ ವಿದೇಶದಲ್ಲೂ ಚಿತ್ರೀಕರಣ ನಡೆಯಲಿದೆ. ರಮೇಶ್ ಕೊಯಿರ ಛಾಯಾಗ್ರಹಣ, ಹಾಗೂ ಲಕ್ಷ್ಮಣ್ ರೆಡ್ಡಿ ಸಂಕಲನವಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳಿರುತ್ತದೆ ಎಂದರು ನಿರ್ದೇಶಕರಲ್ಲೊಬ್ಬರಾದ ವಿ.ಎಂ.ರಾಜು.
ಮುಹೂರ್ತ ಸಮಾರಂಭಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯಾವಾದ. ನಾನು ಈ ಚಿತ್ರದಲ್ಲಿ ಲಾಯರ್ ಪಾತ್ರ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಅಭಿಮಾನಿಯೂ ಹೌದು. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಾಯಕ ಅನೂಪ್ ರೇವಣ್ಣ ಹೇಳಿದರು.
"ಕನಕರಾಜ" ಚಿತ್ರದ ಕಥೆ ಹಾಗೂ ನನ್ನ ಪಾತ್ರ ಚೆನ್ನಾಗಿದೆ ಎಂದು ನಾಯಕಿ ನಿಮಿಷ ತಿಳಿಸಿದರು.