ಮಕ್ಕಳ ಉತ್ತಮ ವಿಕಾಸಕ್ಕಾಗಿ ಬ್ಯಾಲೆನ್ಸ್ಡ್ ಡಯೆಟ್ ಇರಬೇಕಾದುದು ಅತ್ಯಗತ್ಯ, ಈ ಕುರಿತು ತಜ್ಞರ ಅಭಿಪ್ರಾಯ ತಿಳಿಯೋಣವೇ.......?
ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿ ಪ್ರೋಟೀನ್, ವಿಟಮಿನ್, ಮಿನರಲ್ಸ್, ಕಾರ್ಬೊಹೈಡ್ರೇಟ್, ಕೊಬ್ಬು, ಕಬ್ಬಿಣಾಂಶ, ಫೈಬರ್, ಕ್ಯಾಲ್ಶಿಯಂ ಇತ್ಯಾದಿ ಎಲ್ಲಾ ಪೋಷಕಾಂಶಗಳ ಅಗತ್ಯವಿರುತ್ತದೆ. ಇವೆಲ್ಲ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಲ್ಲದೆ, ಮಕ್ಕಳ ಎತ್ತರ ಹೆಚ್ಚಲಿಕ್ಕೂ ಸಹಾಯಕ. ಹೀಗಾಗಿ ಪ್ರತಿ ಮಗುವಿನ ದೈನಂದಿನ ಆಹಾರದಲ್ಲಿ ಈ ಅಂಶಗಳೆಲ್ಲ ಇರಲೇಬೇಕು.
ಲಾಭಕರ ಆಹಾರ
ಮಕ್ಕಳ ಬೆಳವಣಿಗೆಗೆ ಪೂರಕ ಆಗುವಂಥ ಹಾಲು, ಹಣ್ಣು, ಕಡಿಮೆ ಕೊಬ್ಬಿನಾಂಶದ ಮೊಸರು, ಬೆಣ್ಣೆ, ಮೊಟ್ಟೆ, ಮಾಂಸ (ವೈಟ್ ಮೀಟ್ ಬೆಟರ್), ತಾಜಾ ಹಸಿ ತರಕಾರಿ, ಹಸಿರು ಸೊಪ್ಪು, ಮೊಳಕೆ ಕಟ್ಟಿದ ಕಾಳು, ಡ್ರೈ ಫ್ರೂಟ್ಸ್ ಇತ್ಯಾದಿಗಳ ಜೊತೆಗೆ ಸಾವಯವ ತರಕಾರಿ ಕೊಡುವುದೂ ಅಷ್ಟೇ ಮುಖ್ಯ. ಸಾಧ್ಯವಾದಷ್ಟೂ ಮಕ್ಕಳಿಗೆ ನೀಡುವ ಎಲ್ಲಾ ತರಕಾರಿ, ಹಣ್ಣು, ಆಹಾರ ಪದಾರ್ಥಗಳು ಆಗ್ಯಾರ್ನಿಕ್ ಆಗಿರುವಂತೆ ನೋಡಿಕೊಳ್ಳಿ. ಇದು ಅವರ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ ಬೇಕು.
ಈ ಕುರಿತು ತಜ್ಞವೈದ್ಯರ ಅಭಿಪ್ರಾಯ ಎಂದರೆ, ಮಕ್ಕಳ ಉತ್ತಮ ಬೆಳವಣಿಗೆಗಾಗಿ, ಅವರ ಆಹಾರಾಭ್ಯಾಸ (ಡಯೆಟ್)ದತ್ತ ತೀಕ್ಷ್ಣ ನಿಗಾ ವಹಿಸಿರಿ. ಸಣ್ಣ ವಯಸ್ಸಿನ ಮಕ್ಕಳ ಆಹಾರ ಎಂದೂ ಫ್ಯಾನ್ಸಿ ಆಗದಿರಲಿ. ಮಕ್ಕಳ ಬೆಳಗಿನ ಉಪಾಹಾರ, ಅವರ ಶಾಲೆಯ ಟಿಫನ್ ಬಾಕ್ಸಿಗೆ ತಯಾರಿಸುವ ಆಹಾರದಲ್ಲೂ ಪ್ರೋಟೀನ್, ಇಡಿಯಾದ ಕಾಳು, ಬೇಳೆ, ತರಕಾರಿ, ಹಾಲು, ಹಣ್ಣು, ಹಾಲಿನ ಪದಾರ್ಥಗಳು (ಚೀಸ್, ಪನೀರ್ ಇತ್ಯಾದಿ) ಅಡಗಿರುವಂಥ ಸ್ಯಾಂಡ್ ವಿಚ್, ಇಡ್ಲಿ, ದೋಸೆ, ರೊಟ್ಟಿಗಳನ್ನು ಮಾಡಿಕೊಡಿ. ಜೊತೆಗೆ ಸೇಬು, ದಾಳಿಂಬೆ, ದ್ರಾಕ್ಷಿ, ಕಿತ್ತಳೆ, ಬಾಳೆಹಣ್ಣು ಇತ್ಯಾದಿ ಪೌಷ್ಟಿಕ ಆಹಾರ ಕೊಡುವುದೇ ಸರಿ.
ಮಕ್ಕಳ ಆಹಾರದಲ್ಲಿ ಪ್ರೋಟೀನ್
ಮಕ್ಕಳ ಆಹಾರದಲ್ಲಿ ಸದಾ ಪ್ರೋಟೀನಿನ (ಸಸಾರಜನಕ) ಅಂಶ ಹೆಚ್ಚಾಗಿರುವಂತೆ ನೋಡಿಕೊಳ್ಳಿ. ಅವರ ಪೋಷಣೆಗೆ ಇದು ಅತ್ಯಗತ್ಯ. ಹಾಲು, ಬೇಳೆ, ಮೊಳಕೆ ಕಟ್ಟಿದ ಕಾಳು, ಮೊಸರು, ಮೊಟ್ಟೆ, ಹಸಿ ಕಡಲೆಕಾಯಿ, ಪನೀರ್, ನಾನ್ ವೆಜ್, ಬಾದಾಮಿ ಇತ್ಯಾದಿ ಬಳಸಿಕೊಳ್ಳಿ. ನಿಮ್ಮ ಮಗು ಊಟ ಮಾಡಲು ರಚ್ಚೆ ಹಿಡಿಯುತ್ತದೆಯೇ? ಆಗ ನೀವು ಅದಕ್ಕೆ ಇಷ್ಟವಾಗುವಂಥ ರೀತಿಯಲ್ಲಿ ಈ ಪ್ರೋಟೀನ್ ಅಂಶಗಳನ್ನು ಆಹಾರದಲ್ಲಿ ಬೆರೆತುಕೊಳ್ಳುವಂತೆ ಮಾಡಿ. ನೀವು ಬೇಕ್ಡ್ ಚಿಕನ್, ಮೊಸರು, ಪನೀರ್, ತಾಜಾ ತರಕಾರಿಗಳ ತುಂಡುಗಳೊಂದಿಗೆ ಮಕ್ಕಳಿಗೆ ರಿಚ್ ಗ್ರಾಂಡ್ ಆದ, ಸತ್ವಯುತ, ಸ್ವಾದಿಷ್ಟ ಸ್ನಾಕ್ಸ್ ತಯಾರಿಸಬಹುದು. ಇದಕ್ಕಾಗಿ ಫಿಶ್ ಫಿಂಗರ್ ಸಹ ಟ್ರೈ ಮಾಡಿ ನೋಡಿ. ಮೀನಿನ ಮುಳ್ಳನ್ನು ತೆಗೆದ ನಂತರವೇ ಮಕ್ಕಳಿಗೆ ಕೊಡಬೇಕೆಂದು ನೆನಪಿರಲಿ. ಇದು ಒಮೇಗಾ-3 ಅಂಶದಿಂದ ತುಂಬಿರುತ್ತದೆ.
ಇದರ ಜೊತೆಗೆ ನೀವು ಮಕ್ಕಳಿಗೆ ಬ್ರೌನ್ ಬ್ರೆಡ್ ಗೆ ಪೀನಟ್ ಬಟರ್ ಸವರಿ ಟೋಸ್ಟ್ ಮಾಡಿ ಕೊಡಬಹುದು. ಇನ್ನಿತರ ಮೂಲಗಳೆಂದರೆ ಬಟರ್, ಸೂರ್ಯಕಾಂತಿ ಬೀಜ, ಬಾದಾಮಿ, ಗೋಡಂಬಿಗಳನ್ನು ಆಗಾಗ ಬಳಸುತ್ತಿರಿ. ಅಪರೂಪಕ್ಕೆ ಕೆಲವು ಮಕ್ಕಳಿಗೆ ಪೀನಟ್ ಅಲರ್ಜಿ ಆಗಬಹುದು, ಅಂಥವರಿಗೆ ಪೀನಟ್ ಬಟರ್ ಕೊಡಬೇಡಿ. ಪ್ರೋಟೀನ್ ಅಂಶದ ಕೊರತೆ ಆದರೆ ಮಕ್ಕಳ ಮೂಳೆಯ ಬೆಳವಣಿಗೆ ಸರಿಹೋಗದು ಎಂಬುದನ್ನು ನೆನಪಿಡಿ.





