ಜಾಗೀರ್ದಾರ್*
ಮೇಘಶ್ರೀ ರಾಜೇಶ್ ನಿರ್ಮಾಣದ, ಜೆ.ವಿ.ಆರ್ ದೀಪು ನಿರ್ದೇಶನದ ಹಾಗೂ "ಫ್ರೆಂಚ್ ಬಿರಿಯಾನಿ" ಖ್ಯಾತಿಯ ಮಹಾಂತೇಶ್ ಹಿರೇಮಠ ನಾಯಕನಾಗಿ ನಟಿಸಿರುವ ಗ್ರಾಮೀಣ ಸೊಗಡಿನ ಕಾಮಿಡಿ ಕಥಾಹಂದರ ಹೊಂದಿರುವ "ಅರಸಯ್ಯನ ಪ್ರೇಮ ಪ್ರಸಂಗ" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಯುವ ರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮಸಾಲ ಜಯರಾಮ್, ಸುಬ್ರಹ್ಮಣ್ಯ, ರೂಪಾಲಿ,ನಿರ್ಮಾಪಕರಾದ ನವರಸನ್, ರಮೇಶ್, ಸುರೇಶ್, ನಟಿ ಕಾರುಣ್ಯ ರಾಮ್ ಹಾಗೂ ನಿರ್ದೇಶಕರಾದ ಗುರು ದೇಶಪಾಂಡೆ, ಜಡೇಶ್ ಕೆ ಹಂಪಿ, ಎಸ್ ಗೋವಿಂದ್,ಸುಕೇಶ್ ಶೆಟ್ಟಿ, ದೇವನೂರು ಚಂದ್ರು, ಜಾಕಿ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ತಮ್ಮ ಪ್ರೋತ್ಸಾಹದ ನುಡಿಗಳ ಮೂಲಕ ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಯುವ ರಾಜಕುಮಾರ್ ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಪ್ರತಿಯೊಬ್ಬ ಗಣ್ಯರಿಗೂ ಧನ್ಯವಾದ. ನನಗೆ ದೊಡ್ಮನೆಯವರಿಂದ ಟ್ರೇಲರ್ ಅನಾವರಣ ಮಾಡಿಸುವ ಆಸೆಯಿತ್ತು. ನಮ್ಮ ಚಿತ್ರದ ಶೀರ್ಷಿಕೆಯನ್ನು ರಾಘವೇಂದ್ರ ರಾಜಕುಮಾರ್ ಅವರು ಬಿಡುಗಡೆ ಮಾಡಿಕೊಟ್ಟಿದ್ದರು. ಇಂದು ಯುವ ರಾಜಕುಮಾರ್ ಟ್ರೇಲರ್ ಅನಾವರಣ ಮಾಡಿದ್ದು ಬಹಳ ಖುಷಿಯಾಗಿದೆ. ಇಡೀ ಚಿತ್ರತಂಡದ ಶ್ರಮದಿಂದ ಒಂದೊಳ್ಳೆ ಮನೋರಂಜನೆಯ ಚಿತ್ರ ಇದೇ ಸೆಪ್ಟೆಂಬರ್ 19ರಂದು ನಿಮ್ಮ ಮುಂದೆ ಬರಲಿದೆ ಎಂದು ನಿರ್ಮಾಪಕ ರಾಜೇಶ್ ಗೌಡ ತಿಳಿಸಿದರು.
ನಾನು ಲೂಸಿಯಾ ಪವನ್ ಕುಮಾರ್ ಅವರ ಬಳಿ ಕೆಲಸ ಮಾಡಿದ್ದೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ನಮ್ಮ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 19 ರಂದು ತೆರೆಗೆ ಬರಲಿದೆ ಎಂದರು ನಿರ್ದೇಶಕ ಜೆ.ವಿ.ಆರ್ ದೀಪು.
ನಾನು ಜನರಿಗೆ ಪರಿಚಯವಾಗಿದ್ದೆ ಪುನೀತ್ ರಾಜಕುಮಾರ್ ಅವರ ನಿರ್ಮಾಣದ "ಫ್ರೆಂಚ್ ಬಿರಿಯಾನಿ" ಚಿತ್ರದ ಮೂಲಕ. ಇಂದು ಪುನೀತ್ ಅವರ ಕುಟುಂಬದ ಯುವ ರಾಜಕುಮಾರ್ ನಾನು ನಾಯಕನಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿದ್ದು ಸಂತೋಷವಾಗಿದೆ. ಇನ್ನೂ ನಾವು ಕೆಲವು ಸ್ನೇಹಿತರು ಸೇರಿ ಈ ಸಿನಮಾದ ಕುರಿತು ಆಲೋಚಿಸುತ್ತಿದ್ದಾಗ, ನಾನು ಈ ಚಿತ್ರದ ನಾಯಕ ಅಂತ ನಿರ್ಧಾರವಾಗಿರಲಿಲ್ಲ. ನಂತರ ಎಲ್ಲರೂ ನೀನೇ ಈ ಪಾತ್ರ ಮಾಡು ಎಂದರು. ನಂತರ ನಮ್ಮ ಚಿತ್ರದ ನಿರ್ಮಾಣಕ್ಕೆ ರಾಜೇಶ್ ಅವರು ಮುಂದಾದರು. ಒಳ್ಳೆಯ ಕಲಾವಿದರ ಹಾಗೂ ತಂತ್ರಜ್ಞರ ತಂಡ ದೊರಕಿದ್ದು, ಚಿತ್ರ ಚೆನ್ನಾಗಿ ಮೂಡಿಬರಲು ಪ್ರಮುಖ ಕಾರಣ. ನನ್ನ ಸಿನಿಜೀವನದ ಆರಂಭದ ದಿನದಿಂದಲೂ ತಾವು ನೀಡುತ್ತಿರುವ ಬೆಂಬಲ ಈ ಚಿತ್ರದಲ್ಲೂ ಮುಂದುವರೆಯಲಿ ಎಂದರು ನಾಯಕ ಮಹಾಂತೇಶ್ ಹಿರೇಮಠ.
ನಾಯಕಿ ರಶ್ಮಿತ R ಗೌಡ ಛಾಯಾಗ್ರಾಹಕ ಗುರುಪ್ರಸಾದ್ ನರ್ನಾಡ್ ಸಂಗೀತ ನಿರ್ದೇಶಕ ಪ್ರವೀಣ್ - ಪ್ರದೀಪ್, ಹಿನ್ನಲೆ ಸಂಗೀತ ನೀಡಿರುವ ರಾಕೇಶ್ ಆಚಾರ್ಯ, ಸಂಕಲನಕಾರ ಸುನೀಲ್ ಕಶ್ಯಪ್ ಹಾಗೂ ಚಿತ್ರದಲ್ಲಿ ನಟಿಸಿರುವ ಪಿ.ಡಿ.ಸತೀಶ್ ಮುಂತಾದವರು 'ಅರಸಯ್ಯನ ಪ್ರೇಮ ಪ್ರಸಂಗ " ಚಿತ್ರದ ಕುರಿತು ಮಾತನಾಡಿದರು.