-ರಾಘವೇಂದ್ರ ಅಡಿಗ ಎಚ್ಚೆನ್.
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋಗಳಾದ ʻಗಿಚ್ಚಿ ಗಿಲಿ ಗಿಲಿʼ & ʻಮಜಾಭಾರತʼ ಮೂಲಕ ಫೇಮಸ್ ಆದವರು ನಟಿ ಮಾನಸ ಗುರುಸ್ವಾಮಿ ಮತ್ತು ಶಿವಕುಮಾರ್. ಇದೀಗ ಈ ಜೋಡಿ ಒಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವುದಕ್ಕೆ ಮುಂದಾಗಿದೆ. ಅದಕ್ಕೂ ಮುನ್ನ ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಕಿರುತೆರೆಯ ಅನೇಕ ಕಲಾವಿದರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

ʻಗಿಚ್ಚಿ ಗಿಲಿಗಿಲಿʼ ರಿಯಾಲಿಟಿ ಶೋ ಖ್ಯಾತಿಯ ಮಾನಸ ಹಾಗೂ ಶಿವಕುಮಾರ್ ಪ್ರೀತಿಸುತ್ತಿದ್ದು, ಇಬ್ಬರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಲ್ಲೂ ಓಡಾಡುತ್ತಿತ್ತು. ಇದೀಗ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಸದ್ಯ ಈ ಜೋಡಿಯ ಅದ್ದೂರಿ ಎಂಗೇಜ್‌ಮೆಂಟ್‌ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಿರಿಯ ನಟ ದೊಡ್ಡಣ್ಣ ಅವರು ಆಗಮಿಸಿ, ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಮಾನಸ ಮತ್ತು ಶಿವು ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಈ ಜೋಡಿಯು ಒಟ್ಟಿಗೆ ಹಲವು ಕಾಮಿಡಿ ಸ್ಕಿಟ್‌ಗಳನ್ನ ಮಾಡಿದೆ. ಈ ಹಿಂದೆ ಇದೇ ಶೋನಲ್ಲಿ ಕಾಣಿಸಿಕೊಂಡಿದ್ದ ಸುಷ್ಮಿತಾ ಮತ್ತು ಜಗಪ್ಪ ಅವರು ಹೀಗೆ ಪ್ರೀತಿಸಿ ಮದುವೆ ಆಗಿದ್ದರು. ಇದೀಗ ಮಾಸನ ಮತ್ತು ಶಿವು ಅವರ ಸರದಿ. ಸದ್ಯ ಮಾನಸ ಅವರು ʻನೀ ಇರಲು ಜೊತೆಯಲ್ಲಿʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಮಾನಸ ಗುರುಸ್ವಾಮಿ ಮತ್ತು ಶಿವಕುಮಾರ್ ಅವರ ನಿಶ್ಚಿತಾರ್ಥ ಸಮಾರಂಭಕ್ಕೆ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ನಟ ಸಿಹಿ ಕಹಿ ಚಂದ್ರು, ನನ್ನಮ್ಮ ಸೂಪರ್ ಸ್ಟಾರ್ ವಿಜೇತೆ ಯಶಸ್ವಿನಿ ಮತ್ತು ವಂಶಿಕಾ ಅಂಜನಿ ಕಶ್ಯಪ ಸೇರಿದಂತೆ ಅನೇಕರು ಆಗಮಿಸಿದ್ದರು. ಕಿರುತೆರೆಯ ಅನೇಕರು ಬಂದು ಈ ಹೊಸ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳು ಕೂಡ ಮಾನಸ ಗುರುಸ್ವಾಮಿ ಮತ್ತು ಶಿವಕುಮಾರ್ ಅವರಿಗೆ ಶುಭ ಕೋರಿದ್ದಾರೆ.

ಇವರ ಮದುವೆ ಯಾವಾಗ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ನವೆಂಬರ್ 27ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಬಹುಶಃ ಶೀಘ್ರದಲ್ಲೇ ಮದುವೆ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ.





