ಬೇವು ಬೆಲ್ಲ ಹಂಚೋ.. ಪಂಚಾಂಗದ ನಿಜವಾದ ವಸಂತ ಋತುಗಳ ಬದಲಾವಣೆಯ ಹಬ್ಬವಾಗಿರೋ ಯುಗಾದಿಗೆ ಕೆಲವೇ ದಿನಗಳು ಬಾಕಿ ಇವೆ. ಅಷ್ಟರಲ್ಲಾಗಲೇ ಸಿನಿ ರಸಿಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಅದೇನಪ್ಪಾ ಅಂದ್ರೆ, ಸಿನಿಮೋತ್ಸವ. ಹೌದು.. ಯುಗಾಗಿ ಹಬ್ಬಕ್ಕೆ ಐದಾರು ಸಿನಿಮಾಗಳು ತೆರೆಗೆ ಅಪ್ಪಳಿಸಲಿವೆ. ಬರೋಬ್ಬರಿ ನಾಲ್ಕು ದಿನಗಳ ರಜೆಯ ಮಜಾದಲ್ಲಿದ್ದ ಮಂದಿಗೆ ಚಿತ್ರಮಂದಿರಕ್ಕೆ ಹೋಗಿ ನಾಲ್ಕೂ ದಿನವೂ ನಾಲ್ಕೂ ಸಿನಿಮಾಗಳನ್ನು ನೋಡೋ ಅವಕಾಶ ಸಿಕ್ಕಂತಾಗಿದೆ.
ವಿಶೇಷ ಅಂದ್ರೆ, ಇದು ಬರೀ ಕನ್ನಡ ಮಾತ್ರವಲ್ಲ.. ಐದು ಚಿತ್ರರಂಗಗಳಿಂದ ಐದು ಸಿನಿಮಾಗಳು ಒಂದೇ ಬಾರಿಗೆ ರಿಲೀಸ್ ಆಗ್ತಿರೋದು ಮತ್ತೊಂದು ವಿಶೇಷವಾಗಿದೆ.
ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ.. ಹೀಗೆ ಪಂಚಭಾಷಾ ಚಿತ್ರರಂಗಗಳಿಂದ ಐದು ಚಿತ್ರಗಳು ನೋಡುಗರಿಗೆ ಮನರಂಜನೆಯ ಪಂಚ್ ಕೊಡೋಕೆ ಬರ್ತಿವೆ. ಸಾಮಾನ್ಯವಾಗಿ ಹಬ್ಬ, ಹರಿದಿನಗಳು ಅಂದಾಗ ರಜೆಗಳು ಜಾಸ್ತಿ ಸಿಗುತ್ತವೆ. ಅದನ್ನೇ ಬಂಡವಾಳ ಮಾಡಿಕೊಳ್ಳೋ ನಿಟ್ಟಿನಲ್ಲಿ ಫಿಲ್ಮ್ ಮೇಕರ್ಸ್, ತಮ್ಮ ಸಿನಿಮಾಗಳನ್ನ ಆ ಸ್ಪೆಷಲ್ ದಿನದಂದೇ ರಿಲೀಸ್ ಮಾಡೋಕೆ ಯೋಜನೆ ರೂಪಿಸುತ್ತಾರೆ. ಅದ್ರಂತೆ ಈ ಬಾರಿಯ ಯುಗಾದಿಗೆ ದಿನಗಣನೆ ಶುರುವಾಗಿದ್ದು, ಹಿಂದಿಯಿಂದ ಸಿಕಂದರ್, ತೆಲುಗಿನಿಂದ ರಾಬಿನ್ ಹುಡ್, ಮಲಯಾಳಂನಿಂದ ಎಂಪುರಾನ್, ತಮಿಳಿನಿಂದ ವೀರ ಧೀರ ಶೂರನ್ ಹಾಗೂ ಕನ್ನಡದಿಂದ ಮನದ ಕಡಲು ಸಿನಿಮಾಗಳು ಥಿಯೇಟರ್ ಗೆ ಎಂಟ್ರಿ ಕೊಡ್ತಿವೆ.
ವಿಶೇಷ ಅಂದ್ರೆ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ನಮ್ಮ ಕನ್ನಡಿಗರ ಕೈಚಳಕವಿದೆ. ಹೌದು.. ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರದಲ್ಲಿ ನಾಯಕನಟಿ ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣ. ಅಲ್ಲದೆ ಹುಲಿ ಕಿಶೋರ್ ಪೊಲೀಸ್ ಕಾಪ್ ರೋಲ್ ಮೂಲಕ ಗಮನ ಸೆಳೆದಿದ್ದಾರೆ. ಈ ಸಿನಿಮಾ ಯುಗಾದಿ ಹಾಗೂ ಈದ್ ಪ್ರಯುಕ್ತ ಮಾರ್ಚ್ 30ಕ್ಕೆ ತೆರೆಗೆ ಬರ್ತಿದೆ. ಇನ್ನು ಮಲಯಾಳಂನ ಎಂಪುರಾನ್ ಚಿತ್ರ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ತಯಾರಾಗಿದ್ದು, ಲೂಸಿಫರ್ ಸೀಕ್ವೆಲ್ ಅದ್ದರಿಂದ ಮೋಹನ್ ಲಾಲ್ ಮತ್ತೊಮ್ಮೆ ಮಿಂಚು ಹರಿಸಲಿದ್ದಾರೆ. ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಇಲ್ಲಿಯೂ ಸಹ ಹುಲಿ ಕಿಶೋರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಮಾರ್ಚ್ 27ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ.
ಚಿಯಾನ್ ವಿಕ್ರಮ್ ನಟನೆಯ ವೀರ ಧೀರ ಶೂರನ್ ಸಿನಿಮಾ ಕೂಡ ಕಥೆ ಹಾಗೂ ಮೇಕಿಂಗ್ ನಿಂದ ವ್ಹಾವ್ ಫೀಲ್ ತರಿಸಿದೆ. ನಿನ್ನೆಯಷ್ಟೇ ನಟ ವಿಕ್ರಮ್ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೂ ಬಂದು ಭರ್ಜರಿ ಪ್ರಮೋಷನ್ಸ್ ಮಾಡಿ ಹೋಗಿದ್ದಾರೆ. ಈ ಚಿತ್ರದಲ್ಲಿ ನಮ್ಮ ಕನ್ನಡದ ಕಲಾವಿದ ರಮೇಶ್ ಇಂದಿರಾ ಖಳನಾಯಕನಾಗಿ ಕಾಣಿಸಿಕೊಂಡಿದ್ದು, ಮಾರ್ಚ್ 27ರಂದೇ ಪ್ರೇಕ್ಷಕರ ಮುಂದೆ ಬರ್ತಿದೆ.
ನಿತಿನ್ ರೆಡ್ಡಿ ನಟನೆಯ ರಾಬಿನ್ ಹುಡ್ ಸಿನಿಮಾ ಮೇಕಿಂಗ್ ನಿಂದ ಭೇಷ್ ಅನಿಸಿಕೊಂಡಿದೆ. ಅಲ್ಲದೆ, ಈ ಚಿತ್ರದ ನಾಯಕಿ ಕನ್ನಡತಿ ಶ್ರೀಲೀಲಾ. ಇವರಿಬ್ಬರ ಕಾಂಬೋಗೆ ಮತ್ತಷ್ಟು ಕ್ರೇಜ್ ತಂದುಕೊಡೋಕೆ ಆಸ್ಟ್ರೇಲಿಯನ್ ಕ್ರಿಕೆಟರ್ ಡೇವಿಡ್ ವಾರ್ನರ್ ಕೂಡ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕೂಡ ಯುಗಾದಿ ಹಬ್ಬದ ವಿಶೇಷ ಮಾರ್ಚ್ 28ಕ್ಕೆ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡ್ತಿದೆ. ಇನ್ನು ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ ಮಾರ್ಚ್ 28ಕ್ಕೆ ಮಸ್ತ್ ಮನರಂಜನೆ ಕೊಡೋಕೆ ಬರ್ತಿದೆ. ಮುಂಗಾರುಮಳೆ ಪ್ರೊಡ್ಯೂಸರ್ ಈ ಕೃಷ್ಣಪ್ಪ ಕೂಡ ಸಾಥ್ ನೀಡ್ತಿದ್ದಾರೆ. ನಟ ಯಶ್ ಟ್ರೇಲರ್ ಲಾಂಚ್ ಮಾಡಿರೋದ್ರಿಂದ ಸಖತ್ ನಿರೀಕ್ಷೆ ಹುಟ್ಟುಹಾಕಿದೆ. ಒಟ್ಟಿನಲ್ಲಿ ಸಿನಿರಸಿಕರಿಗೆ ಡಿಫರೆಂಟ್ ಡಿಫರೆಂಟ್ ಸಿನಿಮಾಗಳ ಮಸ್ತ್ ಮನರಂಜನೆ ಸಿಕ್ತಿರೋದಂತೂ ಸತ್ಯ.