- ರಾಘವೇಂದ್ರ ಅಡಿಗ ಎಚ್ಚೆನ್.
ಇತ್ತೀಚೆಗೆ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅರುಣ್ ಕುಮಾರ್ ಮಾಲೀಕತ್ವದ 'ಮ್ಯಾಟ್ರಿಕ್ ಮೂವಿ ಮೇಕರ್ಸ್' ಅಡಿ ನಿರ್ಮಾಣವಾಗುತ್ತಿರುವ 3 ಚಿತ್ರಗಳಿಗೆ ಏಕಕಾಲದಲ್ಲಿ ಚಾಲನೆ ನೀಡಲಾಯಿತು. ಕೀರ್ತಿ ಕೃಷ್ಣ ನಿರ್ದೇಶನದ 'ಸೀತಾ ರಾಮ ರಾಜು', ಸ್ವಸ್ತಿಕ್ ನಿರ್ದೇಶನದ 'ದರ್ಶನ' ಹಾಗೂ ಕುಮಾರ್ ನಿರ್ದೇಶನದ ಹೆಸರಿಡದ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು.

ದರ್ಶನ ಸಿನಿಮಾ: ಸ್ವಸ್ತಿಕ್ ನಿದೇಶನದಲ್ಲಿ ಮೂಡಿಬರುತ್ತಿರುವ 'ದರ್ಶನ' ಚಿತ್ರದಲ್ಲಿ ದಿಯಾ, ಚೌಕಿದಾರ್ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿದ್ದು, ನಾಯಕಿ ಪಾತ್ರದಲ್ಲಿ ನಿಶಾ ರವೀಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರು, ಇದೊಂದು ಕಾಮಿಡಿ ಡ್ರಾಮಾ ಜಾನರ್ ಚಿತ್ರ. ಪ್ರಥಮ ಪ್ರಯತ್ನದ ಚಿತ್ರವೂ ಹೌದು. ಕಥೆ ಕೇಳಿ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದ ಅರುಣ್ ಕುಮಾರ್ ಹಾಗೂ ಭವ್ಯ ಮೇಡಂಗೆ ಕೃತಜ್ಞತೆಗಳು. ಗೌರವ್ ಶೆಟ್ಟಿ, ಸಂತು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು ಸುತ್ತ-ಮುತ್ತ ನಮ್ಮ ಚಿತ್ರದ ಚಿತ್ರೀಕರಣ ನಡೆಯಲಿದೆ. ಇದೇ 8ರಿಂದ ಶೂಟಿಂಗ್ ಪ್ರಾರಂಭಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ನಾಯಕ ಪೃಥ್ವಿ ಅಂಬಾರ್ ಒಂದೊಳ್ಳೆ ಕಥೆ ಮತ್ತು ಪಾತ್ರ ಇಲ್ಲಿದೆ ಎಂದು ತಿಳಿಸಿದ್ರೆ, ನಾಯಕಿ ನಿಶಾ ರವೀಂದ್ರ ಈ ಚಿತ್ರದಲ್ಲಿ ಪ್ರೀತಿ ಎಂಬ ಕ್ಯೂಟ್ ಗರ್ಲ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಕುಮಾರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ತಬಲಾ ನಾಣಿ: ಈ ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ನಾನು ಬಂಗಾರಪ್ಪ ಎಂಬ ಪಾತ್ರ ನಿರ್ವಹಿಸುತ್ತಿದ್ದು, ನನಗೆ ಇಬ್ಬರು ಹೆಣ್ಣು ಮಕ್ಕಳು ಈ ಚಿತ್ರದಲ್ಲಿರುತ್ತಾರೆ ಎಂದಷ್ಟೇ ಸುಳಿವು ನೀಡಿದರು. ಈ ಪ್ರಾಜೆಕ್ಟ್ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಿದೆ. ನಿರ್ದೇಶಕ ಕುಮಾರ್ ಮಾತನಾಡಿ, ಎದ್ದೇಳು ಮಂಜುನಾಥ ಚಿತ್ರದಲ್ಲಿನ ತಬಲಾ ನಾಣಿ ಅವರ ಪಾತ್ರ ನನ್ನ ಮನಸನ್ನು ತುಂಬಾ ದಿನಗಳಿಂದ ಕಾಡುತ್ತಿತ್ತು. ಅದೇ ಪಾತ್ರವನ್ನು ಈ ಚಿತ್ರದಲ್ಲೂ ಮುಂದುವರೆಸುತ್ತಿದ್ದೇವೆ. ಆದರೆ, ಆ ಕಥೆಗೂ ಈ ಚಿತ್ರದ ಕಥೆಗೂ ಯಾವುದೇ ಸಂಬಧವಿಲ್ಲ. ಆ ಪಾತ್ರದ ಸುತ್ತ ನಡೆಯುವ ಕಥೆಯಿದು. ಪ್ರೇಕ್ಷಕರನ್ನು ನಗಿಸಲೇಬೇಕೆಂದು ಮಾಡುತ್ತಿರುವ ಚಿತ್ರ ಇದು ಎಂದು ಹೇಳಿದರು.

ಸೀತಾ ರಾಮ ರಾಜು ಚಿತ್ರದಲ್ಲಿ ಕಾರ್ತಿಕ್ ಮಹೇಶ್: ಈ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದು, ಉಳಿದಂತೆ ಆರ್ಮುಗಂ ರವಿಶಂಕರ್, ಜಗಪ್ಪ, ಮಹಾನಟಿ ಖ್ಯಾತಿಯ ದೀಪಿಕಾ ಕೂಡಾ ಇದ್ದಾರೆ. ನಿರ್ದೇಶಕರಾದ ಕೀರ್ತಿ ಕೃಷ್ಣ ಮಾತನಾಡಿ, ಸೀತಾ ರಾಮನ ಜತೆಗೆ ಹನುಮನಾಗಿ ರಾಜು ಪಾತ್ರವೂ ಬರುತ್ತದೆ. ಚಿಕ್ಕಮಗಳೂರು ಬೆಂಗಳೂರು ಸುತ್ತಮುತ್ತ ನಡೆಯುವ ಕಥೆಯಿದು ಎಂದು ತಿಳಿಸಿದರು.

ನಿರ್ಮಾಪಕ ಅರುಣ್ ಕುಮಾರ್ ಮಾತನಾಡಿ ನಮಗೆ ಚಿತ್ರ ನಿರ್ಮಾಣ ಮಾಡಬೇಕು ಎಂಬ ಆಸೆ ಬಹಳ ವರ್ಷಗಳಿಂದ ಇತ್ತು. ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ. ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ಈ ಮೂರೂ ಚಿತ್ರಗಳು ಈ ಹಂತಕ್ಕೆ ಬರುವಲ್ಲಿ ಲೋಕೇಶ್ ಅವರ ಬಹುಮುಖ್ಯ ಪಾತ್ರವಿದೆ. ಮೂರೂ ಕಥೆಗಳಲ್ಲಿ ಒಂದೊಂದು ವಿಶೇಷತೆಯಿದೆ. ಹಾಗಾಗಿ, ಎಲ್ಲಾ ಚಿತ್ರಗಳನ್ನು ಒಟ್ಟಿಗೆ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು. ಸಹ ನಿರ್ಮಾಪಕಿ ಭವ್ಯ ಅರುಣ್ ಕುಮಾರ್ ಮಾತನಾಡಿ, ಹಲವು ವರ್ಷಗಳಿಂದ ಸುಮಾರು ಕಥೆಗಳನ್ನು ಕೇಳಿದ್ದೇವೆ. ಆ ಪೈಕಿ ಈ ಮೂರು ಕಥೆಗಳು ನಮಗೆ ತುಂಬಾ ಹಿಡಿಸಿದವು. ಹಾಗಾಗಿ ಸದ್ಯ ಈ ಚಿತ್ರಗಳಿಗೆ ಪೂಜೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.





