ನಾನು ಮಳೆಯಲ್ಲಿ ನಡೆಯಲು ಇಷ್ಟಪಡುತ್ತೇನೆ ಏಕೆಂದರೆ, ನಾನು ಅಳುವುದನ್ನು ಯಾರೂ ನೋಡುವುದಿಲ್ಲ ಎಂದು ಸಾರ್ವಕಾಲಿಕ ಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಹೇಳಿದ್ದರೆ, ನಾನು ಯಾವಾಗಲೂ ಇಷ್ಟಪಡುವುದು ಕಣ್ಣೀರಿನ ನಂತರದ ನಗುವನ್ನು. ಆದರೆ ಇಷ್ಟಪಡದ್ದು ನಗು ತರುವ ಅಳುವನ್ನು ಎಂದು ಹೀಗೆ ಹೇಳಿದದ, ಜನ್ಮತಃ ಕನ್ನಡಿಗನಾದರೂ, ಬದುಕನ್ನು ಅರಸಿಕೊಂಡು ತಮಿಳುನಾಡಿಗೆ ಹೋಗಿ, ಸುಮಾರು ಐದು ದಶಕಗಳ ಕಾಲ ತಮ್ಮ ನಟನೆಯ ಮೂಲಕ ಇಡೀ ದಕ್ಷಿಣ ಭಾರತವನ್ನೇ ನಗಿಸಿದ ಮಹಾನ್ ಕಲಾವಿದ ತಾಯ್ ನಾಗೇಶ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮಾಡಿಕೊಳ್ಳೋಣ ಬನ್ನಿ.

ಕನ್ನಡ ಮಾತನಾಡುವ ಮಾಧ್ವ ಬ್ರಾಹ್ಮಣರು ತಮಿಳುನಾಡಿನ ಸೇಲಂ, ಈರೋಡ್ ಆಂಬೂರು, ವಾಣಿಯಂಬಾದಿ, ತಿಪಪ್ಪೂರು ಮುಂತಾದ ಕಡೆ ಹೆಚ್ಚಾಗಿದ್ದು, ತಿರುಪ್ಪೂರಿನ ಧಾರಾಪುರದ ಸಂಪ್ರದಾಯಸ್ಥ ಕೆಳ ಮಧ್ಯಮ ಕುಟುಂಬದ ಕೃಷ್ಣರಾವ್ ಮತ್ತು ರುಕ್ಮಣಿಯಮ್ಮ ಎಂಬ ದಂಪತಿಗಳಿಗೆ ವೊಂದರಲ್ಲಿ 1933ರ ಸೆಪ್ಟೆಂಬರ್ 27ರಂದು ಜನಿಸಿದ ನಾಗೇಶ್ ಅವರ ಮೂಲ ಹೆಸರು ಸಿ. ಕೃಷ್ಣರಾವ್ ಗುಂಡೂ ರಾವ್ ಎಂಬುದಾಗಿತ್ತು. ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾಡುತ್ತಿರುವಾಗಲೇ ತಮ್ಮ ತಂದೆಯವರನ್ನು ಕಳೆದು ಕೊಂಡಾಗ, ನಾಗೇಶರಿಗೆ ಶಿಕ್ಷಣ ಕೊಡಿಸುವ ಜವಾಬ್ಧಾರಿ ತಾಯಿಯ ಮೇಲೆ ಬೀಳುತ್ತದೆ. ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ ಅಂದಿನ ಕಾಲದ ಮಹಾಮಾರಿ ರೋಗವಾದ ಸಿಡುಬಿಗೆ ತುತ್ತಾತ ಕಾರಣ ನಾಗೇಶ್ ಅವರು ಸ್ವಲ್ಪಮಟ್ಟಿಗೆ ವಿರೂಪಗೊಳ್ಳುತ್ತಾರೆ. ಇದರಿಂದ ಸ್ವಲ್ಪ ಮಟ್ಟಿಗೆ ವಿಚಲಿತರಾದರೂ, ತಮ್ಮ ಶಿಕ್ಷಣವನ್ನು ಮುಗಿಸಿ ತಮ್ಮ ಮುಂದಿನ ಜೀವನವನ್ನರಸಿಕೊಂಡು ಮದ್ರಾಸ್ ನಗರಕ್ಕೆ ತೆರಳಿದ ನಂತರವೇ ಅವರ ಮತ್ತೊಂದು ಮಜಲು ಆರಂಭವಾಗುತ್ತದೆ.

ಆರಂಭದಲ್ಲಿ ಕೈಯಲ್ಲಿ ಕಾಸಿಲ್ಲದಿದ್ದ ಕಾರಣ ಒಂದು ಕೊಠಡಿಯಲ್ಲಿ ಮೂವರು ಇರಬಹುದಾದಂತಹ ಒಂದು ಕೊಠಡಿಯಲ್ಲಿ ಸೇರಿಕೊಳ್ಳುತ್ತಾರೆ. ಅದೃಷ್ಟವಷಾತ್ ಆವರ ಕೊಠಡಿಯಲ್ಲಿ ಅದಾಗಲೇ ತಮಿಳು ಸಿನಿಮಾ ರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಬರಹಗಾರ ವಾಲಿ ಮತ್ತು ನಿರ್ದೇಶಕ ಶ್ರೀಧರ್ ಅವರು ಇರುತ್ತಾರೆ. ನಾಗೇಶ್ ರವರು ಜೀವನೋಪಾಯಕ್ಕಾಗಿ ಭಾರತೀಯ ರೈಲ್ವೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡ ನಂತರ ಅವರ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತದೆ. ಅದೊಮ್ಮೆ ತಮ್ಮ ಸಹೋದ್ಯೋಗಿಗಳು ಅಭಿನಯಿಸಿದ ಕಂಬ ರಾಮಾಯಣಂ ಎಂಬ ತಮಿಳು ನಾಟಕವನ್ನು ನೋಡಿ ಮೆಚ್ಚಿಕೊಂಡ ನಾಗೇಶ್ ಅವರು ಆ ತಂಡದೊಡನೆ ಸೇರಿಕೊಳ್ಳುತ್ತಾರಲ್ಲದೇ, ಮುಂದೆ ಅದೇ ತಂಡ ನಟಿಸುತ್ತಿದ್ದ ನಾಟಕವೊಂದರಲ್ಲಿ ಹೊಟ್ಟೆ ನೋವಿನಿಂದ ನರಳುವ ವ್ಯಕ್ತಿಯ ಪಾತ್ರವನ್ನು ನೀಡುವಂತೆ ರೈಲ್ವೆ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯ ಮನವೊಲಿಸಿ ಪಡೆದುಕೊಂಡು ಅತ್ಯುತ್ತಮವಾಗಿ ನಟಿಸುತ್ತಾರೆ. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ, ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅದಾಗಲೇ ತಮಿಳು ಚಿತ್ರರಂಗದ ಆರಾಧ್ಯ ದೈವ ಎಂದೇ ಪ್ರಖ್ಯಾತರಾಗಿದ್ದ ಎಂ.ಜಿ. ರಾಮಚಂದ್ರನ್ ಅರ್ಥಾತ್ ಎಂ.ಜಿ.ಆರ್ ಅವರೂ ಸಹಾ ಬಂದಿದ್ದು ಆವರು ಆ ನಾಟಕವನ್ನು ನೋಡಿ ಮೆಚ್ಚಿಕೊಂಡು ತಮ್ಮ ಭಾಷಣದಲ್ಲಿಯೂ ನಾಗೇಶ್ ಅವರ ಅಭಿನಯವನ್ನು ಶ್ಲಾಘಿಸುತ್ತಾರೆ, ಹೀಗೆ ಎಂ.ಜಿ.ಆರ್, ಅವರಿಂದ ಹೊಗಳಿಸಲ್ಪಟ್ಟಿಕೊಂಡ ಕಾರಣ ಅಂದಿನಿಂದ ನಾಗೇಶ್ ಅವರು ರೈಲ್ವೇ ಸಾಂಸ್ಕೃತಿಕ ತಂಡ ಖಾಯಂ ಸದಸ್ಯರಾಗಿ ವಿವಿಧ ನಾಟಕ ತಂಡಗಳಲ್ಲಿ ಪಾತ್ರಗಳನ್ನು ನಿರ್ವಹಿಸುವಂತಾಗುತ್ತದೆ. ತಂದೆಯನ್ನು ಕಳೆದುಕೊಂಡ ನಂತರ ತಾಯಿ ಕಂಡರೆ ಆಪಾರವಾದ ಪ್ರೀತಿಯನ್ನು ಹೊಂದಿದ್ದ ನಾಗೇಶ್ ಅವರು ತಾಯ್ ಎನ್ನುವ ನಾಟಕದಲ್ಲಿ ನಟಿಸಿದ ನಂತರ ಆ ನಾಟಕ ಬಹಳ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತದೆ.





