ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಕ್ರೀಡಾಕೂಟ-2026 ರಲ್ಲಿ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜುಲೈ 26ರಂದು ನಡೆದ ಮಹಿಳೆಯರ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 190 ಕೆ.ಜಿ. (ಸ್ನ್ಯಾಚ್‌ನಲ್ಲಿ 85 ಕೆ.ಜಿ. ಹಾಗೂ ಕ್ಲೀನ್ ಅಂಡ್ ಜರ್ಕ್‌ನಲ್ಲಿ 105 ಕೆ.ಜಿ.) ಭಾರ ಎತ್ತುವ ಮೂಲಕ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಮೀರಾಬಾಯಿ ಚಾನು, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕನೇ ಪದಕ ಗೆದ್ದ ಸಾಧನೆ ಮಾಡಿದ್ದು, ಭಾನುವಾರ ಭಾರತಕ್ಕೆ ಪದಕ ತಂದುಕೊಟ್ಟ ಎರಡನೇ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸ್ನ್ಯಾಚ್ ವಿಭಾಗದಲ್ಲಿ ಮೀರಾಬಾಯಿ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದರೂ, ಎರಡನೇ ಪ್ರಯತ್ನದಲ್ಲಿ 82 ಕೆ.ಜಿ. ಭಾರ ಎತ್ತಿ ಕ್ರೀಡಾಕೂಟದ ದಾಖಲೆ ನಿರ್ಮಿಸಿದರು. ಬಳಿಕ ಮೂರನೇ ಪ್ರಯತ್ನದಲ್ಲಿ 85 ಕೆ.ಜಿ. ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಕಾಮನ್‌ವೆಲ್ತ್ ಹಾಗೂ ಕ್ರೀಡಾಕೂಟದ ಹೊಸ ದಾಖಲೆ ಬರೆದರು. ಇದಕ್ಕೂ ಮೊದಲು ಅವರದೇ ಹೆಸರಿನಲ್ಲಿದ್ದ 84 ಕೆ.ಜಿ. ಕಾಮನ್‌ವೆಲ್ತ್ ದಾಖಲೆಯನ್ನು ಅವರು ಮುರಿದರು.
ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲೂ ಮೊದಲ ಪ್ರಯತ್ನ ವಿಫಲವಾದರೂ, ಬಳಿಕ ಅದ್ಭುತವಾಗಿ ಮರಳಿ 105 ಕೆ.ಜಿ. ಭಾರ ಎತ್ತುವ ಮೂಲಕ ಮತ್ತೊಂದು ಕ್ರೀಡಾಕೂಟದ ದಾಖಲೆಯನ್ನು ನಿರ್ಮಿಸಿದರು. ನೈಜೀರಿಯಾದ ರೂತ್ ನಿಯೋಂಗ್ 93 ಕೆ.ಜಿ. ಭಾರ ಎತ್ತಿದ್ದರಿಂದ, ಮೀರಾಬಾಯಿ 105 ಕೆ.ಜಿ. ಯಶಸ್ವಿಯಾಗಿ ಎತ್ತುತ್ತಿದ್ದಂತೆಯೇ ಚಿನ್ನದ ಪದಕ ಖಚಿತವಾಯಿತು.
ಗ್ಲಾಸ್ಗೊದಲ್ಲಿ ತೋರಿದ ಅವರ ಪ್ರದರ್ಶನ, ಏಷ್ಯನ್ ಗೇಮ್ಸ್ ನಲ್ಲೂ ಭಾರತಕ್ಕೆ ಮತ್ತೊಂದು ಐತಿಹಾಸಿಕ ಸಾಧನೆ ತಂದುಕೊಡುವ ವಿಶ್ವಾಸ ಹೆಚ್ಚಿಸಿದೆ. ಮಣಿಪುರದ ಈ ಚಿನ್ನದ ಹುಡುಗಿ ಮತ್ತೊಮ್ಮೆ ತಮ್ಮ ಅಸಾಧಾರಣ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಮೀರಾಬಾಯಿ ಚಾನು ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
"ಭಾರತೀಯ ವೇಟ್‌ಲಿಫ್ಟಿಂಗ್‌ಗೆ ಮತ್ತೊಂದು ಸುವರ್ಣ ಅಧ್ಯಾಯ. ಮೀರಾಬಾಯಿ ಚಾನು ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಚಿನ್ನ ಗೆದ್ದಿದ್ದಾರೆ. ಅವರು ಪ್ರತಿಯೊಬ್ಬ ಭಾರತೀಯರಿಗೂ ಪ್ರೇರಣೆಯಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು," ಎಂದು ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.





