ಏಪ್ರಿಲ್ 24ಕ್ಕೆ ನಿವೇದಿತಾ ನಿರ್ಮಾಣದ ಫೈರ್ ಫ್ಲೈ ಸಿನಿಮಾ ತೆರೆಗೆ ಎಂಟ್ರಿ
- ರಾಘವೇಂದ್ರ ಅಡಿಗ ಎಚ್ಚೆನ್.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್’ ಬ್ಯಾನರ್ ನಿರ್ಮಾಣದ ಚೊಚ್ಚಲ ಚಲನಚಿತ್ರ "ಫೈರ್ ಫ್ಲೈ". ಈಗಾಗಲೇ ಟೀಸರ್ ಮೂಲಕ ಜನರ ಮನಸನ್ನು ಗೆದ್ದಿರುವ ಈ ಚಿತ್ರವು ಏಪ್ರಿಲ್ 24, ವರನಟ ಡಾ. ರಾಜಕುಮಾರ್ ಅವರ ಜನ್ಮದಿನದಂದು ತೆರೆ ಮೇಲೆ ಬರುತ್ತಿದೆ.
ʼಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಆಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದರ್, ಮೂಗು ಸುರೇಶ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಸಿಕೊಂಡಿದ್ದಾರೆ.
ಡಾ. ಶಿವರಾಜ್ ಕುಮಾರ್ ಮಾತನಾಡಿ, 'ಅಪ್ಪಾಜಿಯವರ ಹುಟ್ಟುಹಬ್ಬದಂದು ನನ್ನ ಮಗಳ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ವಿಶೇಷವಾದ ಕ್ಷಣ. ನಮ್ಮ ಕುಟುಂಬದ ಮೇಲೆ ಜನರು ತೋರಿಸಿರುವ ಎಲ್ಲಾ ಪ್ರೀತಿ ಅಪ್ಪಾಜಿಯವರಿಂದ ಬಂದಿದೆ. ಮತ್ತು ಮುಂದಿನ ಪೀಳಿಗೆಯ ಮೇಲೆ ಎಲ್ಲರೂ ಅದೇ ಪ್ರೀತಿಯನ್ನು ತೋರಿಸುವುದನ್ನು ನೋಡುವುದು ತುಂಬಾ ಖುಷಿ ಕೊಟ್ಟಿದೆ. ಎಲ್ಲಾ ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಪ್ರೇಮಿಗಳ ನಿರಂತರ ಬೆಂಬಲಕ್ಕೆ ಧನ್ಯವಾದಗಳು. ಫೈರ್ಫ್ಲೈ ಸಾವು, ನೋವು, ಮತ್ತು ಜೀವನ ಸ್ಫೂರ್ತಿಯ ಮರು ಚಿಗುರುವಿಕೆಯ ಬಗ್ಗೆ ಮಾತನಾಡುವ ಚಿತ್ರ. ಈ ರೀತಿ ಗಾಢವಾದ ವಿಷಯವನ್ನು ಸರಳವಾಗಿ, ಹಾಸ್ಯದ ಮೂಲಕ ಹೇಳುವುದು ನನಗೆ ತುಂಬಾ ಹತ್ತಿರವಾಯ್ತು. ಎಲ್ಲರೂ ಅದನ್ನು ಮೆಚ್ಚುತ್ತಾರೆ ಎಂದು ನನಗೆ ನಂಬಿಕೆ ಇದೆʼ ಎಂದು ಹೇಳಿದ್ದಾರೆ.
ಚರಣ್ ರಾಜ್ ಅವರು ‘ಫೈರ್ ಫ್ಲೈ’ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ಈ ಚಲನಚಿತ್ರದ ಹಾಡುಗಳು ತುಂಬಾ ಸೊಗಸಾಗಿ ಮೂಡಿಬಂದಿದ್ದು. ಚಿತ್ರತಂಡವು ಇದೇ ಯುಗಾದಿಗೆ ಈ ಚಿತ್ರದ ಮೊದಲ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಅಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಅವರ ಸಹ-ನಿರ್ದೇಶನ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಮ್ ಅವರ ಸಂಕಲನ, ವರದರಾಜ್ ಕಾಮತ್ ಅವರ ಕಲೆ, ಅರ್ಜುನ್ ರಾಜ್ ಅವರ ಸಾಹಸ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಈ ಚಿತ್ರವು ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರು ಮನಸ್ಸು ಗೆಲ್ಲುವ ಚಿತ್ರವಾಗಿದೆ. ಈ ವರ್ಷದ ಕನ್ನಡ ಚಿತ್ರರಂಗದಲ್ಲಿ ತುಂಬಾ ಭರವಸೆ ಮೂಡಿಸಿರುವ ಚಿತ್ರಗಳಲ್ಲಿ "ಫೈರ್ ಫ್ಲೈ". ಕೂಡ ಒಂದಾಗಿದೆ.