- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ, ಬಾಲಿವುಡ್ ಸೇರಿದಂತೆ ದೇಶದ ಎಲ್ಲ ಚಿತ್ರರಂಗಗಳನ್ನು ಕಾಡುತ್ತಿರುವ ಸಿನಿಮಾ ಪೈರಸಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಿನಿಮಾಗಳು ಆನ್ಲೈನ್ನಲ್ಲಿ ಅಕ್ರಮವಾಗಿ ಲೀಕ್ ಆಗುವುದನ್ನು ತಡೆಯಲು ಹೊಸ ವ್ಯವಸ್ಥೆ ರೂಪಿಸಲಾಗುತ್ತಿದ್ದು, ಪೈರಸಿ ವಿರುದ್ಧದ ಹೋರಾಟಕ್ಕೆ ಸರ್ಕಾರ ಮತ್ತಷ್ಟು ವೇಗ ನೀಡಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಪೈರಸಿ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ್ದು, ಈಗಾಗಲೇ ಸಾವಿರಾರು ಅಕ್ರಮ ಲಿಂಕ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮಾಹಿತಿಯ ಪ್ರಕಾರ, ಈವರೆಗೆ ಒಟ್ಟು 7,393 ಪೈರಸಿ ಲಿಂಕ್‌ಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ 1,263 ವೆಬ್‌ಸೈಟ್‌ಗಳು ಹಾಗೂ 4,996 ಟೆಲಿಗ್ರಾಂ ಚಾನೆಲ್‌ಗಳು ಸೇರಿವೆ. ಸಿನಿಮಾಗಳನ್ನು ಅಕ್ರಮವಾಗಿ ಹಂಚಿಕೆ ಮಾಡುವ ಜಾಲಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಪ್ರತ್ಯೇಕ ಆ್ಯಂಟಿ ಪೈರಸಿ ಪೋರ್ಟಲ್ ಸಿದ್ಧಪಡಿಸುತ್ತಿದೆ.
ಈ ಪೋರ್ಟಲ್ ಮೂಲಕ ನಿರ್ಮಾಪಕರು ಮತ್ತು ಚಿತ್ರರಂಗದವರು ಪೈರಸಿ ಸಂಬಂಧಿತ ದೂರುಗಳನ್ನು ಸುಲಭವಾಗಿ ದಾಖಲಿಸಲು ಸಾಧ್ಯವಾಗಲಿದೆ. ದೂರುಗಳ ಆಧಾರದ ಮೇಲೆ ಕಾನೂನು ಕ್ರಮಗಳನ್ನು ವೇಗವಾಗಿ ಕೈಗೊಳ್ಳಲು ಇದು ನೆರವಾಗಲಿದೆ.
ಇತ್ತೀಚೆಗೆ ಪೈರಸಿ ಜಾಲದ ವಿರುದ್ಧ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ಕೂಡ ಚುರುಕಾಗಿದೆ. ‘ಐಬೊಮ್ಮ’ ಪೈರಸಿ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿರುವುದು ಸರ್ಕಾರದ ಕ್ರಮಗಳಿಗೆ ಮತ್ತೊಂದು ಉದಾಹರಣೆಯಾಗಿದೆ.
ಕೆಲವು ನಿರ್ಮಾಪಕರು ವಿದೇಶಗಳಲ್ಲಿ, ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಪ್ರದರ್ಶನಗೊಳ್ಳುವ ಸಿನಿಮಾ ಪ್ರಿಂಟ್‌ಗಳಿಂದ ಪೈರಸಿ ಹರಡುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳ ಆದಾಯ ಕುಸಿತ ಮತ್ತು ಡಿಜಿಟಲ್ ಲೀಕ್‌ಗಳ ಸವಾಲಿನ ನಡುವೆ ಕೇಂದ್ರದ ಹೊಸ ಕ್ರಮಗಳು ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿಸಿವೆ.





