- ರಾಘವೇಂದ್ರ ಅಡಿಗ ಎಚ್ಚೆನ್.
17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಚಲನಚಿತ್ರೋತ್ಸವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮಿತಿಯ ನಿರ್ಧಾರದಂತೆ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದರು.
17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು Jan 29ರಿಂದ Feb 6ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಉದ್ಘಾಟನೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಈ ಚಲನಚಿತ್ರೋತ್ಸವದಲ್ಲಿ 60 ದೇಶಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ಒಟ್ಟು 400 ಪ್ರದರ್ಶನಗಳು ನಡೆಯಲಿವೆ. ಈ ವರ್ಷ ಆಸ್ಕರ್ ಪ್ರಶಸ್ತಿಗಳಿಗೆ ಶಾರ್ಟ್ ಲಿಸ್ಟ್ ಆಗಿರುವ ಸಿನಿಮಾಗಳನ್ನು ಕೂಡ ಪ್ರದರ್ಶಿಸಲಾಗುತ್ತದೆ.
ಇತ್ತೀಚೆಗೆ ನಿಧನರಾದ ಧರ್ಮೇಂದ್ರ, ಸರೋಜಾದೇವಿ, ಉಮೇಶ್, ಶಾಜಿ ಎನ್ ಕರುಣ್, ರಘು ಸೇರಿದಂತೆ ಹಲವು ಗಣ್ಯರ ಸ್ಮರಣಾರ್ಥ ಶ್ರದ್ಧಾಂಜಲಿ ಹಾಗೂ ಸವಿನೆನಪು ವಿಭಾಗದಲ್ಲಿ ವಿಶೇಷ ಚಿತ್ರ ಪ್ರದರ್ಶನ ನಡೆಯಲಿದೆ. ಮಹಿಳೆಯರ ಸಬಲೀಕರಣ ವಿಷಯವನ್ನು ಈ ವರ್ಷದ ಥೀಮ್ ಆಗಿ ಆಯ್ಕೆ ಮಾಡುವ ಚಿಂತನೆ ಇದೆ ಎಂದು ಸಿಎಂ ತಿಳಿಸಿದರು.
ಲೂಲು ಮಾಲ್‌ನಲ್ಲಿರುವ ಸಿನಿ ಪೊಲಿಸ್‌ನ 11 ಸ್ಕ್ರೀನ್‌ಗಳಲ್ಲಿ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಇದುವರೆಗೆ 110 ಚಿತ್ರಗಳಿಂದ ಅರ್ಜಿ ಬಂದಿದ್ದು, Dec 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟ ನಿರಾಕರಣೆ ವಿಚಾರವಾಗಿ ಮಾತನಾಡಿದ ಸಿಎಂ, ಗೃಹ ಸಚಿವರು ಸಮಿತಿ ರಚನೆ ಮಾಡಿದ್ದಾರೆ. ನ್ಯಾ. ಕುನ್ಹಾ ವರದಿ ಶಿಫಾರಸುಗಳ ಜಾರಿ ಬಗ್ಗೆ ಗೃಹ ಸಚಿವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲಾ, ಹಿರಿಯ ನಟಿ ಜಯಮಾಲ, ಸಾರಾ ಗೋವಿಂದ್ ಸೇರಿದಂತೆ ಚಿತ್ರೋದ್ಯಮದ ಪ್ರಮುಖರು ಭಾಗವಹಿಸಿದ್ದರು.





