- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡು ಪ್ರೇಕ್ಷಕರ ಮನಗೆದ್ದಿದ್ದ ‘ಪ್ರೇಮದ ಊರಲಿ’ ಸಿನಿಮಾ ಇದೀಗ ಡಿಜಿಟಲ್ ವೇದಿಕೆಗೆ ಲಗ್ಗೆ ಇಟ್ಟಿದೆ. 50 ದಿನಗಳ ಯಶಸ್ವಿ ಪ್ರದರ್ಶನದ ಬಳಿಕ ಯಾವುದೇ ದೊಡ್ಡ ಪ್ರಚಾರವಿಲ್ಲದೆ ಸಿನಿಮಾ ಸದ್ದಿಲ್ಲದೆ ಒಟಿಟಿಗೆ ಬಂದಿದೆ. ಥಿಯೇಟರ್‌ನಲ್ಲಿ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದ ಸಿನಿಪ್ರಿಯರಿಗೆ ಈಗ ಮನೆಯಲ್ಲೇ ನೋಡುವ ಅವಕಾಶ ಸಿಕ್ಕಿದೆ.
ಸಾಮಾನ್ಯವಾಗಿ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆದ ಸಿನಿಮಾಗಳು ಒಟಿಟಿಗೆ ಬರುವಾಗ ಭರ್ಜರಿ ಪ್ರಚಾರ ನಡೆಯುತ್ತದೆ. ಆದರೆ ‘ಪ್ರೇಮದ ಊರಲಿ’ ವಿಚಾರದಲ್ಲಿ ಚಿತ್ರತಂಡ ವಿಭಿನ್ನ ತಂತ್ರ ಅನುಸರಿಸಿದಂತಿದೆ. ಸಿನಿಮಾ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ ಥಿಯೇಟರ್ ಕಲೆಕ್ಷನ್‌ಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮೌನವಾಗಿ ಡಿಜಿಟಲ್ ಬಿಡುಗಡೆ ಮಾಡಿರಬಹುದು ಎಂಬ ಚರ್ಚೆ ನಡೆಯುತ್ತಿದೆ.
ಇನ್ನು ಚಿತ್ರದ ಗಳಿಕೆಯ ಲೆಕ್ಕಾಚಾರ ಕೇಳಿದರೆ ಅಚ್ಚರಿಯಾಗುತ್ತದೆ. ಕೇವಲ 2ರಿಂದ 3 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ವಿಶ್ವದಾದ್ಯಂತ 130 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರವೊಂದು ಇಷ್ಟೊಂದು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿರುವುದು ವಿಶೇಷ. 50 ದಿನಗಳ ಪ್ರದರ್ಶನದ ಬಳಿಕವೂ ಸಿನಿಮಾ ಉತ್ತಮ ಗಳಿಕೆ ಮುಂದುವರಿಸಿದೆ.
ಹಾಗಾದರೆ ಈ ಸಿನಿಮಾವನ್ನು ಎಲ್ಲಿ ನೋಡಬಹುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ‘ಪ್ರೇಮದ ಊರಲಿ’ ನವೆಂಬರ್ 17ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡವರು ಮತ್ತೊಮ್ಮೆ ವೀಕ್ಷಿಸಬಹುದು. ಹಾಗೆಯೇ ಥಿಯೇಟರ್‌ನಲ್ಲಿ ನೋಡಲು ಸಾಧ್ಯವಾಗದವರಿಗೂ ಇದು ಒಳ್ಳೆಯ ಅವಕಾಶವಾಗಿದೆ.





