ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಟಾಪ್ ನಟಿಯರಲ್ಲಿ ಒಬ್ಬರು. ಕನ್ನಡದ ಪ್ರಮುಖ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದವರು. ರಚಿತಾ ರಾಮ್ ಇದೀಗ ಕನ್ನಡ ಚಿತ್ರರಂಗ ಪ್ರವೇಶಿಸಿ 12 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿದ್ದಾರೆ. ಸದ್ಯ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ಜಡ್ಜ್ ಆಗಿರುವ ನಟಿಗೆ ವೇದಿಕೆಯಲ್ಲೇ ಅಭಿನಂದನೆಗಳ ಸುರಿಮಳೆ ಹರಿದು ಬಂದಿದೆ. ವಿಶೇಷವೆಂದರೆ ಈ ಸಂದರ್ಭದಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಚಿರಾ ರಾಮ್‌ಗೆ ದೊಡ್ಡ ಸರ್‌ಪ್ರೈಸ್ ನೀಡಿದ್ದಾರೆ.
ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ 12 ವರ್ಷ ಪೂರೈಸಿದ್ದಾರೆ. ಇದೇ ವೇಳೆ ದರ್ಶನ್ ಕಡೆಯಿಂದ ಸರ್‌ಪ್ರೈಸ್ ಸಿಕ್ಕಿದೆ. 'ಬುಲ್ ಬುಲ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಚ್ಚು ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡವರು. ಕನ್ನಡ ಚಿತ್ರರಂಗ ಸ್ಟಾರ್ ನಟರಾದ ಸುದೀಪ್, ಉಪೇಂದ್ರ, ಶಿವಣ್ಣ, ಪುನೀತ್ ಜೊತೆಗೆ ತೆರೆ ಹಂಚಿಕೊಂಡು ಕಮಾಲ್ ಮಾಡಿದವರು.
2013, ಮೇ 10ರಂದು 'ಬುಲ್ ಬುಲ್' ಸಿನಿಮಾ ತೆರೆಗೆ ಬಂದಿತ್ತು. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಂ. ಡಿ ಶ್ರೀಧರ್ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ವಿ. ಹರಿಕೃಷ್ಣ ಸಂಗೀತ 'ಬುಲ್ ಬುಲ್' ಚಿತ್ರದ ಹಾಡುಗಳಿಗೆ ಕವಿರಾಜ್ ಸಾಹಿತ್ಯ ಬರೆದಿದ್ದರು. ಚಿತ್ರದ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ತೆಲುಗಿನ ಡಾರ್ಲಿಂಗ್ ಚಿತ್ರದ ರೀಮೆಕ್ ಕೂಡಾ ಆಗಿತ್ತು. ಚಿತ್ರದ ನಾಯಕಿ ಪಾತ್ರಕ್ಕೆ ರಚಿತಾ ಆಯ್ಕೆ ಆಗಿದ್ದರು.
'ಬೆಂಕಿಯಲ್ಲಿ ಅರಳಿದ ಹೂವು' ಹಾಗೂ 'ಅರಸಿ' ಕಿರುತೆರೆ ಧಾರಾವಾಹಿಗಳಲ್ಲಿ ರಚಿತಾ ರಾಮ್ ನಟಿಸಿದ್ದರು. 'ಬುಲ್ ಬುಲ್' ಚಿತ್ರಕ್ಕೆ ಆಡಿಷನ್ ಕೊಟ್ಟು ರಚ್ಚು ನಾಯಕಿಯಾಗಿ ಆಯ್ಕೆಯಾಗಿ, ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಗೆದ್ದಿದ್ದರು. ದರ್ಶನ್ ಜೊತೆ ನಾಯಕಿಯಾಗಿ ನಟಿಸುವುದು ಮಾತ್ರವಲ್ಲ, ರೆಬಲ್ ಸ್ಟಾರ್ ಅಂಬರೀಶ್ ಜೊತೆಗೂ ತೆರೆ ಹಂಚಿಕೊಂಡಿದ್ದರು.
ಜೀ ಕನ್ನಡ 'ಭರ್ಜರಿ ಬ್ಯಾಚುಲರ್ಸ್' ವೇದಿಕೆಯಲ್ಲಿ ರಚಿತಾ ರಾಮ್ ಚಿತ್ರರಂಗದಲ್ಲಿ 12 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಲಾಗಿದೆ. ಸಿಂಹಾಸನದಲ್ಲಿ ಕೂರಿಸಿ ಕಿರೀಟ ತೊಡಿಸಿ ಸನ್ಮಾನಿಸಲಾಗಿದೆ. ಇದೇ ವೇಳೆ ನಟ ದರ್ಶನ್ ಆಡಿಯೋ ಸಂದೇಶದ ಮೂಲಕ ರಚಿತಾ ರಾಮ್ ಅವರಿಗೆ ಅಭಿನಂದನೆ ತಿಳಿಸಿ ಶುಭ ಕೋರಿದ್ದಾರೆ. ವೇದಿಕೆಯಲ್ಲಿ ಸರ್‌ಪ್ರೈಸ್ ಎನ್ನುವಂತೆ ಆಡಿಯೋ ಪ್ಲೇ ಮಾಡಿದ್ದು ದರ್ಶನ್ ಧ್ವನಿ ಕೇಳುತ್ತಿದ್ದಂತೆ ರಚ್ಚು ಶಾಕ್ ಆಗಿದ್ದಾರೆ.
ಈ ವಾರದ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮದ ಪ್ರೋಮೊ ಹೊರಬಂದಿದ್ದು, ರಚಿತಾ ರಾಮ್ ಚಿತ್ರರಂಗದಲ್ಲಿ 12 ವರ್ಷ ಪೂರೈಸಿದ ಸಂಭ್ರಮಾರಣೆಯೇ ಹೈಲೆಟ್ ಆಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿದಾಗ ರಚಿತಾ ರಾಮ್ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದರು. ಕಳೆದ ಆಗಸ್ಟ್ನಲ್ಲಿ ದರ್ಶನ್ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆಗಲೂ ರಚಿತಾ ರಾಮ್ ಅಲ್ಲಿಗೆ ಭೇಟಿ ನೀಡಿದ್ದರು. ಪ್ರಕರಣದ ಬಗ್ಗೆ ರಚಿತಾ ರಾಮ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದ ದರ್ಶನ್ ಅವರು ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದ ಅವರು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಂಬಲು ಸ್ವಲ್ಪ ಕಷ್ಟ ಆಗುತ್ತಿದೆ" ಎಂದು ರಚಿತಾ ರಾಮ್ ಬರೆದುಕೊಂಡಿದ್ದರು.