ಜಾಗೀರ್ದಾರ್*
ಅಶ್ವಿನಿ ಪುನೀತ್ ರಾಜಕುಮಾರ್ ಅವರ ಆಶೀರ್ವಾದದೊಂದಿಗೆ, ಎಸ್ ಎನ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಾಲಿಗ್ರಾಮ ಸುರೇಶ್ ಅವರು ನಿರ್ಮಿಸುತ್ತಿರುವ, ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ರಕ್ಕಿ ನಾಯಕನಾಗಿ ನಟಿಸುತ್ತಿರುವ "ರಕ್ಕಿ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ರೇಣುಕಾಂಬ ಥಿಯೇಟರ್ ನಲ್ಲಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಜರ್ಮನ್ ನಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಸಾಲಿಗ್ರಾಮ ಮೂಲದ ಸುರೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುರೇಶ್ ಅವರ ಪುತ್ರ ರಕ್ಕಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಿರ್ಮಾಪಕರಿಗೆ ನಾನು ಮೊದಲು ಎರಡು ಕಥೆ ಹೇಳಿದ್ದೆ. ಅವರು ಈ ಕಥೆಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಹೇಳಿ. ಅವರು ಒಪ್ಪುವ ಕಥೆಯನ್ನು ಸಿನಿಮಾ ಮಾಡೋಣ ಎಂದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಕಥೆ ಕೇಳಿ ಚೆನ್ನಾಗಿದೆ ಅಂತ ಹೇಳಿದರು. ಚಿತ್ರಕ್ಕೆ ಇಂದು ಅವರೆ ಚಾಲನೆ ನೀಡಿದ್ದು ಬಹಳ ಸಂತೋಷವಾಗಿದೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ನಿರ್ಮಿಸಿರುವ ಅದ್ದೂರಿ ಸೆಟ್ ನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. "ರಕ್ಕಿ" ಎಂದರೆ ಹಚ್ಚಿರುವ ಪಟಾಕಿ ಇದ್ದ ಹಾಗೆ. ಯಾವಾಗ ಸಿಡಿಯುತ್ತದೆ ಗೊತ್ತಿಲ್ಲ. ಚಿತ್ರದಲ್ಲಿ ನಾಯಕನ ಪಾತ್ರ ಕೂಡ ಹೀಗೆ ಇರುತ್ತದೆ. ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಿ.ಸುರೇಶ್, ಹರಿಣಿ ಶ್ರೀಕಾಂತ್, ಸುಂದರರಾಜ್, ರಮೇಶ್ ಪಂಡಿತ್, ಸಂಪತ್ ಮೈತ್ರೇಯ, ಗಂಟೆ ಗೋವಿಂದ ಮುಂತಾದವರು ತಾರಾಬಳಗದಲ್ಲಿರುತ್ತಾರೆ. ಲೋಕಿ ತವಸ್ಯ ಸಂಗೀತ ನಿರ್ದೇಶನ, ಐಸ್ಸಾಕ್ಸ್ ಪ್ರಭಾಕರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಲಾರೆನ್ಸ್ ಪ್ರೀತಮ್ ಅವರ ಸಹ ನಿರ್ದೇಶನ "ರಕ್ಕಿ" ಚಿತ್ರಕ್ಕಿದೆ ಎಂದು ನಿರ್ದೇಶಕ ವೆಂಕಟ್ ಭಾರದ್ವಾಜ್ ತಿಳಿಸಿದರು.
ಚಿತ್ರಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಾಯಕ ರಕ್ಕಿ, ನನ್ನ ಹೆಸರು ಹಾಗೂ ಚಿತ್ರದ ಶೀರ್ಷಿಕೆ ಒಂದೇ ಆಗಿದೆ. ನಾನು ಜರ್ಮನ್ ನಲ್ಲಿ ಎಂಜಿನಿಯರಿಂಗ್ ಮುಗಿಸಿ ಉದ್ಯೋಗ ಮಾಡುತ್ತಿದ್ದೇನೆ. ನಟನೆ ನನಗೆ ಇಷ್ಟ. ನಾಯಕನಾಗಲು ಬೇಕಾದ ಪೂರ್ವ ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ರಕ್ಕಿ.
ನಾನು ಮೂಲತಃ ಸಾಲಿಗ್ರಾಮದವನು. ಐಟಿ ಉದ್ಯೋಗಿ. ಇಪ್ಪತ್ತು ವರ್ಷಗಳಿಂದ ಜರ್ಮನ್ ನಲ್ಲೇ ವಾಸಿಸುತ್ತಿದ್ದೇನೆ. ನನ್ನ ತಂದೆ ರಾಜಶೇಖರ್ ಅವರು ಡಾ||ರಾಜಕುಮಾರ್ ಅಭಿನಯದ "ಹೊಸಬೆಳಕು" ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈಗ ನಾನು "ರಕ್ಕಿ" ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇನೆ. ನನ್ನ ಮಗ "ರಕ್ಕಿ" ನಾಯಕನಾಗಿ ನಟಿಸುತ್ತಿದ್ದಾನೆ. ನಿರ್ದೇಶಕ ವೆಂಕಟ್ ವೆಂಕಟ್ ಭಾರದ್ವಾಜ್ ಎರಡು ಕಥೆ ಸಿದ್ದ ಮಾಡಿಕೊಂಡಿದ್ದರು. ನಮ್ಮ ಕುಟುಂಬದ ಸ್ನೇಹಿತರಾದ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಹತ್ತಿರ ಕಥೆ ಹೇಳಿ, ಅವರು ಒಪ್ಪುವ ಕಥೆಯನ್ನು ಚಿತ್ರ ಮಾಡೋಣ ಎಂದು ವೆಂಕಟ್ ಭಾರದ್ವಾಜ್ ಅವರಿಗೆ ಹೇಳಿದ್ದೆ. ಈ ಕಥೆಯನ್ನು ಅಶ್ವಿನಿ ಅವರು ಒಪ್ಪಿಕೊಂಡರು. ಈಗ ಚಿತ್ರೀಕರಣ ಆರಂಭ ಮಾಡುತ್ತಿದ್ದೇವೆ. ಚಿತ್ರೀಕರಣಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ಸಾಲಿಗ್ರಾಮ ಸುರೇಶ್.





