ಮಿಂಚಿದ ದೀಪಕ್
ಚಿತ್ರ: Mr.ರಾಣಿ
ನಿರ್ದೇಶನ: ಮಧುಚಂದ್ರ
ನಿರ್ಮಾಣ: ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್
ತಾರಾಂಗಣ: ದೀಪಕ್ ಸುಬ್ರಹ್ಮಣ್ಯ , ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪಾ ಪ್ರಭಾಕರ್, ಆನಂದ್ ನೀನಾಸಂ ಮುಂತಾದವರು
ರೇಟಿಂಗ್:3/5
-ರಾಘವೇಂದ್ರ ಅಡಿಗ ಎಚ್ಚೆನ್.‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರ ಮಾಡಿ ಸಾಕಷ್ಟು ಜನಪ್ರಿಯವಾಗಿರುವ ದೀಪಕ್ ಸುಬ್ರಹ್ಮಣ್ಯ ಮುಖ್ಯ ಭೂಮಿಕೆಯಲ್ಲಿರುವ Mr.ರಾಣಿ ಸಿನಿಮಾ ಈ ವಾರ(ಫೆ.07) ತೆರೆಗೆ ಬಂದಿದೆ. ಈ ಹಿಂದೆ ‘ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರವನ್ನು ನಿರ್ದೇಶನ ಮಾಡಿರುವ ಮಧುಚಂದ್ರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ‘ಬಾಹುಬಲಿ’ ಸಿನಿಮಾದ ಸಹಾಯಕ ಛಾಯಾಗ್ರಾಹಕರಾಗಿದ್ದ ರವೀಂದ್ರನಾಥ ಈ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿದ್ದಾರೆ. ಇನ್ನು, ನಾಯಕನನ್ನು ತಮ್ಮ ಚೆಂದದ ಮೇಕಪ್ ಮೂಲಕ ನಾಯಕಿಯನ್ನಾಗಿ ಚಂದನ ಮಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಮತ್ತು ರಿತ್ವಿಕ್ ಮುರಳೀಧರ್ ಅವರ ಸಂಗೀತವಿದೆ. ಇದೊಂದು ಕ್ರೌಡ್ ಫಂಡೆಂಡ್ ಚಿತ್ರವಾಗಿದ್ದು, 100ಕ್ಕೂ ಹೆಚ್ಚು ಜನ ಈ ಚಿತ್ರದಲ್ಲಿ ಹಣ ತೊಡಗಿಸಿದ್ದಾರೆ. ಈ ಚಿತ್ರವನ್ನು ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ಸಂಸ್ಥೆಯಡಿ ನಿರ್ಮಾಣ ಮಾಡಲಾಗಿದ್ದು, ಚಿತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ ಜೊತೆಗೆ ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪಾ ಪ್ರಭಾಕರ್, ಆನಂದ್ ನೀನಾಸಂ ಮುಂತಾದವರು ನಟಿಸಿದ್ದಾರೆ.
ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೆಜ್ಜೆ ಇಡುವ ಸಾಮಾನ್ಯ ಯುವಕನೊಬ್ಬ, ಅನಿವಾರ್ಯವಾಗಿ ನಾಯಕಿಯಾಗುವ ಕಥೆ ಈ ಚಿತ್ರದಲ್ಲಿದೆ. ನಾಯಕ/ನಾಯಕಿಯಾಗಿ ದೀಪಕ್ ಸುಬ್ರಹ್ಮಣ್ಯ ಕಾಣಿಸಿಕೊಂಡಿರುವುದು ವಿಶೇಷ. ಹಾಗೆ ನಾಯಕಿಯಾದ ನಾಯಕ ಸಿನಿರಂಗದಲ್ಲಿ ದೊಡ್ಡ ಬ್ರೇಕ್ ಸಿಗುತ್ತದೆ ಮತ್ತು ಉದ್ಯಮದಲ್ಲಿ ನಂಬರ್ ಒನ್ ನಾಯಕಿಯಾಗಿ ಗುರುತಿಸಿಕೊಳ್ಳುತ್ತಾನೆ. ಇದರಿಂದ ಮುಂದಿನದೆಲ್ಲಾ ಲಾಜಿಕ್ ಮತ್ತು ವಾಸ್ತವಕ್ಕೆ ಮೀರಿದ ಅಸಂಬದ್ದಹಾಸ್ಯದ ಕಥೆಯಾದರೂ ಸಹ ಮನರಂಜನಾ ದೃಷ್ಟಿಕೋನದಿಂದ ಇಷ್ಟವಾಗಬಲ್ಲದು.
ಇಲ್ಲಿ ಕಥೆ, ಚಿತ್ರಕಥೆಗಳೆಲ್ಲಾ ಅವಾಸ್ತವಿಕವಾಗಿದೆ. ಹಾಸ್ಯವಿದ್ದರೂ ಕಥೆಯು ನೈಜತೆಗೆ ಬಹು ದೂರವಾಗಿದೆ. ಆದರೆ ಅದೆಲ್ಲವನ್ನೂ ಮೀರಿ ನಟ ದೀಪಕ್ ಸುಬ್ರಮಣ್ಯ ಅವರ ರಾಣಿಯ ಪಾತ್ರ ನಿಜವಾಗಿ ಗಮನ ಸೆಳೆಯುತ್ತದೆ. ೪೦ ಬೇರೆ ಬೇರೆ ಉಡುಪಿನಲ್ಲಿ ನಟ ದೀಪಕ್ ಕಣಿಸಿಕೊಳ್ಳುತ್ತಾರೆ. ಈ ಹಿಂದೆ ಅನೇಕ ನಟರು ಇದೇ ರೀತಿಯ ನಟನೆಗಳನ್ನು ಪ್ರಯತ್ನಿಸಿದ್ದಾರೆ- ಅವರಲ್ಲಿ ಅನೇಕರು ಅತಿಥಿ ಪಾತ್ರದಲ್ಲಿ, ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಕಡೆ ಚಿತ್ರದ ನ್ಯೂನತೆಗಳೇ ಶಕ್ತಿಯಾಗಿ ಬದಲಾಗಿದೆ. ಆದರೆ ದೀಪಕ್ ಅವರ ರಾಣಿ ಪಾತ್ರದಲ್ಲಿನ ನೋಟ ಮತ್ತು ನಡವಳಿಕೆ, ಅಭಿನಯವನ್ನು ನಿಜವಾಗಿಯೂ ಗಮನಾರ್ಹವಾಗಿಸುತ್ತದೆ. ತಾನೊಬ್ಬ ನಟನಾಗಿ ದೀಪಕ್ ಮಹಿಳೆಯ ನಯ, ನಾಜೂಕನ್ನು ಸಹಜವಾಗಿ ಅಭಿನಯಿಸಿದ್ದಾರೆ. ಮಧುಚಂದ್ರ ಮತ್ತು ಪಾರ್ವತಿ ನಾಯರ್ ಪ್ರೇಕ್ಷಕರ ಮನರಂಜಿಸುತ್ತಾರೆ. ಶ್ರೀವತ್ಸ ಸಹ ಚಿತ್ರದುದ್ದಕ್ಕೂ ಹಾಸ್ಯದಿಂದ ಮನರಂಜಿಸುತ್ತಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಆದರೆ ಯಾವುದೂ ಗಮನ ಸೆಳೆಯುವಂತಿಲ್ಲ. ಚಿತ್ರದಲ್ಲಿ ಗ್ರಾಫಿಕ್ಸ್ ಬಳಸಿ ಕೆಲವಷ್ಟು ಭಾಗದ ಚಿತ್ರೀಕರಣ ಮಾಡಲಾಗಿದೆ ಆದರೆ ಅದು ಕಾರ್ಟೂನ್ ಗೇಮ್ ನಂತೆ ಕಾಣುವುದು ಬಿಟ್ಟರೆ ಚಿತ್ರಕ್ಕೆ ಹೆಚ್ಚಿನ ಶಕ್ತಿ ತುಂಬುವುದಿಲ್ಲ. ಹಾಗೆ ನೋಡಿದರೆ ಈ ಭಾಗ ಇಲ್ಲದಿದ್ದರೂ ಸಿನಿಮಾ ಕಥೆಗೆ ಯಾವ ನಷ್ಟವಾಗುತ್ತಿರಲಿಲ್ಲ.
ಒಟ್ಟಾರೆ ದೀಪಕ್ ಸುಬ್ರಮಣ್ಯ ಅವರ ರಾಣಿ ಪಾತ್ರಕ್ಕಾಗಿಯೇ ಈ ಚಿತ್ರವನ್ನೊಮ್ಮೆ ನೋಡಬೇಕು. ಹಾಗೆ ಇದು ನಿಮ್ಮನ್ನು ಒಂದು ಅರ್ಥಹೀನ ಹಾಸ್ಯ,ವಿಚಿತ್ರ ರೀತಿಯ ವಿನೋದದ ಜಗತ್ತಿಗೆ ಕರೆದೊಯ್ಯಲಿದೆ.