- ರಾಘವೇಂದ್ರ ಅಡಿಗ ಎಚ್ಚೆನ್.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ನಟಿ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಸಿನಿರಂಗಕ್ಕೆ ಕಾಲಿಟ್ಟು, ಇಂದು ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಪ್ರಮುಖ ನಾಯಕಿಯಾಗಿ ತಮಗಾಗಿ ವಿಶಿಷ್ಟ ಸ್ಥಾನ ನಿರ್ಮಿಸಿಕೊಂಡಿದ್ದಾರೆ.
ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ, ನಟ ವಿಜಯ್ ದೇವರಕೊಂಡ ಅವರೊಂದಿಗೆ ವಿವಾಹವಾಗಿ ತೆಲುಗು ಮನೆತನದ ಸೊಸೆಯಾಗಿದ್ದಾರೆ. ವೈಯಕ್ತಿಕ ಜೀವನದ ಸಂತೋಷದ ಜೊತೆಗೆ, ವೃತ್ತಿ ಜೀವನದಲ್ಲಿಯೂ ಅವರು ನಿರಂತರವಾಗಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದಾರೆ.
ಇದೀಗ ರಶ್ಮಿಕಾ ಮಂದಣ್ಣ ತಮ್ಮ ಖಾತೆಗೆ ಮತ್ತೊಂದು ಅಂತರರಾಷ್ಟ್ರೀಯ ಗೌರವವನ್ನು ಸೇರಿಸಿಕೊಂಡಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ಮೇ 23ರಂದು ನಡೆಯಲಿರುವ ಪ್ರತಿಷ್ಠಿತ ಕ್ರಂಚೈರೋಲ್ ಅನಿಮೆ ಅವಾರ್ಡ್ಸ್ ಸಮಾರಂಭದಲ್ಲಿ ಅವರು ಎರಡನೇ ಬಾರಿ ಭಾಗವಹಿಸಲಿದ್ದಾರೆ. 2024ರಲ್ಲಿ ಇದೇ ವೇದಿಕೆಯಲ್ಲಿ ಮಿಂಚಿದ್ದ ರಶ್ಮಿಕಾ, ಈಗ ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ಭಾರತದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಮೂಲಕ, ಈ ವೇದಿಕೆಯಲ್ಲಿ ಎರಡು ಬಾರಿ ಕಾಣಿಸಿಕೊಂಡ ಮೊದಲ ಭಾರತೀಯ ಚಲನಚಿತ್ರ ಸೆಲೆಬ್ರಿಟಿ ಎಂಬ ಅಪರೂಪದ ದಾಖಲೆಗೂ ಅವರು ಪಾತ್ರರಾಗಿದ್ದಾರೆ. ಅನಿಮೇಷನ್ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸುವ ಈ ಸಮಾರಂಭದಲ್ಲಿ, ಹಾಲಿವುಡ್ ತಾರೆಯರೊಂದಿಗೆ ಸೇರಿ ರಶ್ಮಿಕಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡುವ ಗೌರವ ಕೂಡ ಹೊಂದಿದ್ದಾರೆ.
‘ಪುಷ್ಪ’ ಚಿತ್ರದ ಶ್ರೀವಳ್ಳಿ ಪಾತ್ರದ ಮೂಲಕ ಜಪಾನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ರಶ್ಮಿಕಾ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅನಿಮೇ ಪ್ರಪಂಚದ ಮೇಲೆ ಅವರಿಗಿರುವ ಆಸಕ್ತಿ ಕೂಡ ಈ ಸಾಧನೆಗೆ ಮತ್ತಷ್ಟು ಅರ್ಥ ನೀಡಿದೆ.
‘ಅನಿಮಲ್’, ‘ಪುಷ್ಪ 2’, ‘ಕುಬೇರ’, ‘ಗರ್ಲ್‌ಫ್ರೆಂಡ್’, ‘ತಮ್ಮಾ’ ಚಿತ್ರಗಳ ಮೂಲಕ ಸತತ ಯಶಸ್ಸು ಕಂಡಿರುವ ಅವರು, ಪ್ರಸ್ತುತ ‘ಮೈಸಾ’ ಮತ್ತು ‘ರಣಬಲಿ’ ಸೇರಿದಂತೆ ಹಲವು ಮಹತ್ವದ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ.





