- ರಾಘವೇಂದ್ರ ಅಡಿಗ ಎಚ್ಚೆನ್.
ಕಾಂತಾರ ಸಿನಿಮಾ ಬಳಿಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅದೃಷ್ಟವೇ ಬದಲಾಗಿ ಹೋಗಿದೆ. ಒಂದೆಡೆ ಒಂದಾದ ಮೇಲೊಂದು ದೊಡ್ಡ ಸಿನಿಮಾಗಳ ಆಫರ್, ಪ್ರಶಸ್ತಿಗಳು ರಿಷಬ್ ಶೆಟ್ಟಿಯನ್ನು ಅರಸಿ ಬರುತ್ತಿದ್ದರೆ, ಇನ್ನೊಂದೆಡೆ ಕಾಂತಾರ ಚಾಪ್ಟರ್-೧ ಸಿನಿಮಾ ಭರ್ಜರಿಯಾಗಿ ಸೆಟ್ಟೇರಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಯಶಸ್ಸಿನ ಹಾದಿಯಲ್ಲಿರುವ ನಟ ರಿಷಬ್ ಶೆಟ್ಟಿಗೆ ಇದೀಗ ಅಡೆತಡೆಯೊಂದು ಎದುರಾಗಿದ್ದು, ಪರಿಹಾರಕ್ಕಾಗಿ ರಿಷಬ್ ನೇರವಾಗಿ ದೈವದ ಮೊರೆ ಹೋಗಿದ್ದಾರೆ.
ಹೌದು.. ಮಂಗಳೂರಿನಲ್ಲಿರುವ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ ಹಾಗೂ ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದು, ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 4 ಗಂಟೆವರೆಗೂ ರಿಷಬ್ ಶೆಟ್ಟಿ ದೈವದ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ರಿಷಬ್ ತಮ್ಮ ಜೀವನದಲ್ಲಿ ಈಗ ಎದುರಾಗಿರುವ ಕಷ್ಟವನ್ನು ವಾರಾಹಿ ಪಂಜುರ್ಲಿ ದೈವದ ಮುಂದೆ ಹೇಳಿಕೊಂಡಿದ್ದಾರೆ.
ತನ್ನ ನೋವು ತೋಡಿಕೊಂಡ ಭಕ್ತನನ್ನು ಸಂತೈಸಿದ ದೈವ ಕೆಲವೊಂದು ಸೂಕ್ಷ್ಮವಾದ ವಿಚಾರವನ್ನು ತಿಳಿಸಿ ರಿಷಬ್ ಶೆಟ್ಟಿಗೆ ಎಚ್ಚರಿಕೆಯನ್ನು ಸಹ ನೀಡಿದೆ. ‘ಎಲ್ಲೆಡೆ ನಿನಗೆ ಶತ್ರುಗಳಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಿನ್ನ ವಿರುದ್ಧ ಭಾರೀ ಸಂಚು ನಡೆದಿದೆ. ಕಷ್ಟ ಎಂದು ನನ್ನ ಬಳಿ ಬಂದಿದ್ದೀಯಾ, ನೀನು ನಂಬಿದ ದೈವ ನಿನ್ನ ಕೈ ಬಿಡುವುದಿಲ್ಲ. ನಿನಗೆ ಕೇಡು ಆಗಲು ಬಿಡುವುದಿಲ್ಲ. ಇನ್ನೈದು ತಿಂಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ’ ಎಂದು ಪಂಜುರ್ಲಿ ದೈವ ರಿಷಬ್ ಶೆಟ್ಟಿಗೆ ಅಭಯ ನೀಡಿದೆ.
ಇನ್ನು ಕಾಂತಾರ-1 ಈ ವರ್ಷವೇ ಅಕ್ಟೋಬರ್ 2 ರಂದು ರಿಲೀಸ್ ಆಗುತ್ತೆ ಎಂದು ಚಿತ್ರತಂಡ ಅನೌನ್ಸ್ ಮಾಡಿದ್ದೇ ಮಾಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಆದ್ರೆ ಕೆಲ ತಿಂಗಳಿಂದ ಈ ವರ್ಷ ಕಾಂತಾರ ರಿಲೀಸ್ ಆಗಲ್ಲ, ಸಿನಿಮಾ ಮುಂದೂಡಲಾಗುತ್ತದೆ, ಅಕ್ಟೋಬರ್‌ನಲ್ಲಿ ರಿಲೀಸ್ ಆಗೋದು ಡೌಟ್ ಎಂಬ ಮಾತುಗಳು ಕೇಳಿಬಂದಿತ್ತು. ಆದ್ರೆ ಇದೀಗ ಈ ಎಲ್ಲಾ ಗೊಂದಲಗಳಿಗೆ ಚಿತ್ರತಂಡವೇ ಕ್ಲಾರಿಟಿ ಕೊಟ್ಟಿದೆ. ಕಾಂತಾರ ರಿಲೀಸ್ ಡೇಟ್ ಮುಂದೂಡಲಾಗಿಲ್ಲ. ಈ ವರ್ಷ ಅ.2 ರಂದೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ