ಜಾಗೀರ್ದಾರ್*
ಮಧು ಫಿಲಂ ಸರ್ಕ್ಯೂಟ್ಸ್ ಸಂಸ್ಥೆ ಲಾಂಛನದಲ್ಲಿ ಅಂಬಟಿ ಮಧು ಮೋಹನಕೃಷ್ಣ ಅವರು ಕನ್ನಡದಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ "ರೋಲೆಕ್ಸ್".
ಈ ಹಿಂದೆ "ಬಿಲ್ ಗೇಟ್ಸ್" ಚಿತ್ರವನ್ನು ನಿರ್ದೇಶನ ಮಾಡಿದ್ದ ವಿ.ಸಿ.ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಾಯಕನಾಗಿ ಕೋಮಲ್ ಕುಮಾರ್ ನಟಿಸುತ್ತಿದ್ದಾರೆ. ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಕೋಮಲ್ ಕುಮಾರ್ ಅವರು "ರೋಲೆಕ್ಸ್" ಚಿತ್ರದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಾಲ್ ಮೊಂತೆರೊ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಕಾಮಿಡಿಯೊಂದಿಗೆ ಕೌಟುಂಬಿಕ ಕಥಾಹಂದರವನ್ನೂ ಹೊಂದಿರುವ ಈ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಹಾಗೂ ಒಂದು ಹಾಡಿನ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಆ ಹಾಡುಗಳ ಚಿತ್ರೀಕರಣ ಮುಕ್ತಾಯವಾದರೆ, "ರೋಲೆಕ್ಸ್" ಚಿತ್ರದ ಚಿತ್ರೀಕರಣ ಸಂಪೂರ್ಣವಾಗುತ್ತದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಕೋಮಲ್ ಅವರು ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್ ನಲ್ಲಿ "ರೋಲೆಕ್ಸ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಾಲ್ ಮೊಂತೆರೊ, ಅಚ್ಯುತಕುಮಾರ್, ನವೀನ್ ಪಡೀಲ್, ಅರುಣ ಬಾಲರಾಜ್ ಪ್ರಮುಖಪಾತ್ರದಲ್ಲಿ ನಟಿಸಿದ್ದು, ನಿರ್ಮಾಪಕರಾದ ಅಂಬಟಿ ಮಧು ಮೋಹನ್ ಕೃಷ್ಣ ಅವರು ಸಹ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.
ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಅವರ ಸಂಕಲನವಿರುವ "ರೋಲೆಕ್ಸ್" ಚಿತ್ರಕ್ಕೆ ಮುರಳಿಕೃಷ್ಣ ಅವರ ನಿರ್ಮಾಣ ನಿರ್ವಹಣೆ ಇದೆ. ರಾಜೇಶ್ ವರ್ಮ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.