ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧ ಅತ್ಯಾಚಾರ ಯತ್ನ ಆರೋಪ ಮಾಡಿದ್ದ 'ಹಳ್ಳಿ ಮೇಷ್ಟು' ನಟಿ 34 ವರ್ಷಗಳ ನಂತರವೂ ಘಟನೆ ನೆನೆದು ಕಣ್ಣೀರಿಟ್ಟು ಕ್ಷಮೆ ಕೇಳಿದ್ದಾರೆ.
ನಟ, ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬರುವ ‘ನೂರೊಂದು ನೆನಪು’ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿರುವ ನಟಿ ಬಿಂದಿಯಾ, ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ರವಿಚಂದ್ರನ್ ಅವರು ಅಷ್ಟು ದೊಡ್ಡ ಬ್ರೇಕ್ ಕೊಟ್ರು. ಆದರೆ ಆ ಮ್ಯಾಗಜೀನ್ ವರದಿಯಿಂದ ದೊಡ್ಡ ಕೇಸ್ ಆಯ್ತು. ಇವತ್ತಿಗೂ ರವಿ ಸರ್ ಚಿತ್ರದಲ್ಲಿ ತಾಯಿ ಪಾತ್ರ, ಅಜ್ಜಿ ಪಾತ್ರ ಕೊಟ್ಟರೆ ನಟಿಸೋಕೆ ಸಿದ್ಧ. ಯಾವುದೇ ಸಂಭಾವನೆ ಇಲ್ಲದೇ ನಟಿಸ್ತೀನಿ. ದಯವಿಟ್ಟು ಒಂದು ಅವಕಾಶ ಕೊಡಿ ಸರ್ ಎಂದು ಕೇಳಿಕೊಂಡಿದ್ದಾರೆ.
ರವಿ ಸರ್ ಜೊತೆ ಮಾತನಾಡಲಾಗಲಿಲ್ಲ: ಆ ಘಟನೆ ಬಳಿಕ ರವಿಚಂದ್ರನ್ ಅವರೊಟ್ಟಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಕೋರ್ಟ್‌ನಲ್ಲೇ ಭೇಟಿ ಆಗಿದ್ವಿ. ಆಗ ನಾನು ಬಹಳ ಚಿಕ್ಕವಳು. ಬುದ್ದಿ ಇಲ್ದೆ ನಡೆದುಕೊಂಡಿದ್ದೆ. ಪ್ರಬುದ್ಧತೆ ಇರಲಿಲ್ಲ. ಕೊನೆಗೆ ರವಿ ಸರ್ ಕೇಸ್ ಗೆದ್ದರು, ಬಳಿಕ ವಾಪಸ್ ಪಡೆದ್ರು. ಎಲ್ಲಾ ಇತ್ಯರ್ಥವಾಗಿತ್ತು ಎಂದು ಬಿಂದಿಯಾ ಹೇಳಿದ್ದಾರೆ.
ಹೇಳಿದ್ದೇ ಒಂದು, ಬರೆದಿದ್ದೇ ಇನ್ನೊಂದು: ಅಂದಿನ ಕೇಸ್ ನಲ್ಲಿ ನನ್ನ ಆರೋಪಕ್ಕೆ ಯಾವುದೇ ಆಧಾರ ಇರಲಿಲ್ಲ. ನಾನು ಹೇಳಿದ್ದು ಬೇರೆ, ಮ್ಯಾಗಜೀನ್‌ನಲ್ಲಿ ಬಂದಿದ್ದು ಬೇರೆ. ಅದು ರವಿಚಂದ್ರನ್ ಅವರ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತವಾಗುವಂತಾಗಿತ್ತು. ಕೋರ್ಟ್‌ನಲ್ಲಿ ಅವರನ್ನು ನೋಡಿದಾಗ ಸಂಕಟವಾಯಿತು. ಅಷ್ಟು ದೊಡ್ಡ ನಟ ಅಲ್ಲಿಗೆ ಬರುವಂತಾಯಿತು. ರವಿ ಸರ್ ನಿಜಕ್ಕೂ ಯಾವುದೇ ತಪ್ಪು ಮಾಡ್ಲಿಲ್ಲ ಎಂದು ಹೇಳಿದ್ದಾರೆ.
ಏನದು ಕೇಸ್? : 1992ರಲ್ಲಿ ತೆರೆಗೆ ಬಂದ ಕನ್ನಡದ ಸೂಪರ್ ಹಿಟ್ ಸಿನಿಮಾ ‘ಹಳ್ಳಿಮೇಷ್ಟ್ರು’ ಚಿತ್ರದಲ್ಲಿ ನಟಿ ಬಿಂದಿಯಾ ನಟಿಸಿದ್ದರು. ತಮಿಳಿನ ‘ಮುಂದಾನೈ ಮುಡಿಚು’ ಚಿತ್ರದ ರೀಮೇಕ್ ‘ಹಳ್ಳಿಮೇಷ್ಟ್ರು’ ಸ್ಯಾಂಡಲ್‌ವುಡ್‌ನಲ್ಲಿ ಸೂಪರ್ ಹಿಟ್ ಆಗಿ ಭರ್ಜರಿ ಕಲೆಕ್ಷನ್ ಸಹ ಮಾಡಿತ್ತು. ಹೀಗಿರುವಾಗಲೇ, ರವಿಚಂದ್ರನ್ ವಿರುದ್ಧ ನಟಿ ಬಿಂದಿಯಾ ಗಂಭೀರ ಆರೋಪ ಮಾಡಿದ್ದರು. ಮ್ಯಾಗಝೀನ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ‘’ರವಿಚಂದ್ರನ್ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು’’ ಎಂದು ಬಿಂದಿಯಾ ಆರೋಪಿಸಿದ್ದರು.
ಕೋರ್ಟ್ ಮೆಟ್ಟಿಲೇರಿದ ರವಿಚಂದ್ರನ್: ಅಂದು ಬಿಂದಿಯಾ ಮಾಡಿದ್ದ ಆರೋಪ ರವಿಚಂದ್ರನ್ ಅವರನ್ನು ಕೆರಳಿಸಿತ್ತು. ಇದರಿಂದ ಮನನೊಂದ ರವಿಚಂದ್ರನ್ ಸತ್ಯ ಬಹಿರಂಗಗೊಳಿಸುವ ಸಲುವಾಗಿ ಬಿಂದಿಯಾ ಅವರನ್ನ ಕೋರ್ಟ್‌ಗೆ ಎಳೆದಿದ್ದರು. ತಮ್ಮ ಮೇಲೆ ಮಾಡಿರುವ ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿ, ಬಿಂದಿಯಾ ವಿರುದ್ಧ ರವಿಚಂದ್ರನ್ ಕೇವಲ 1 ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕಿದ್ದರು.
ಕ್ಷಮೆ ಕೇಳಿದ್ದ ನಟಿ: ವಿಚಾರಣೆ ವೇಳೆ, ‘’ನಾನು ಆ ತರಹದ ಹೇಳಿಕೆ ನೀಡಿಲ್ಲ. ಅದೆಲ್ಲಾ ಸುಳ್ಳು’’ ಎಂದು ತಪ್ಪೊಪ್ಪಿಕೊಂಡ ನಟಿ ಬಿಂದಿಯಾ ಕ್ಷಮೆ ಕೇಳಿದ್ದರು. ಬಳಿಕ ಆ ಪ್ರಕರಣ ಇತ್ಯರ್ಥವಾಗಿತ್ತು. ಆದರೆ ಆ ಘಟನೆಯನ್ನು ಇಂದಿಗೂ ನಟಿ ಬಿಂದಿಯಾ ನೆನೆದು ಕಣ್ಣೀರು ಹಾಕಿದ್ದಾರೆ.





