`ಆಶಿಕಿ-2′ ಚಿತ್ರದಿಂದ ಚರ್ಚೆಗೆ ಬಂದ ನಟಿ ಶ್ರದ್ಧಾ ಕಪೂರ್‌ 16ರ ಹರೆಯದಲ್ಲೇ ಟಿವಿಯ ಜಾಹೀರಾತುಗಳಲ್ಲಿ ಮಿಂಚಿದಳು. ಮಾಡೆಲಿಂಗ್‌ ಕ್ಷೇತ್ರದಲ್ಲೂ ಈಕೆ ಹೆಸರು ಗಳಿಸಿದ್ದಳು. ನಂತರ ಬಾಲಿವುಡ್‌ಗೆ ಎಂಟ್ರಿಯಾಯ್ತು. ಆದರೆ ಆರಂಭದ ದಿನಗಳು ಸುಖದಾಯಕ ಆಗಿರಲಿಲ್ಲ. `ತೀನ್‌ಪತ್ತಿ, ಲವ್ ಕಾ ದಿ ಎಂಡ್‌’ ಚಿತ್ರಗಳೆರಡೂ ತೋಪಾದವು ಇದಾದ ಮೇಲೆ ಬಂದ `ಆಶಿಕಿ-2′ ಹಿಟ್‌ಆಯ್ತು. ರಾತ್ರೋರಾತ್ರಿ ಶ್ರದ್ಧಾ ಸ್ಟಾರ್‌ ಆಗಿದ್ದಳು. ಅದಾದ ಮೇಲೆ ಹಿಂದಿರುಗಿ ನೋಡದ ಶ್ರದ್ಧಾ `ಏಕ್‌ ವಿಲನ್‌, ಹೈದರ್‌,  ರಾಕ್‌ ಆನ್‌, ಹಾಫ್‌ ಗರ್ಲ್ ಫ್ರೆಂಡ್‌, ಹಸೀನಾ ಪಾರ್ಕರ್‌’ ಇತ್ಯಾದಿ ಚಿತ್ರಗಳಲ್ಲಿ ನಟಿಸಿದಳು.

ಯಾವುದೇ ಚಿತ್ರ ಫ್ಲಾಪ್‌ ಆದರೂ ಶ್ರದ್ಧಾ ಅದನ್ನು ಸಹಜವಾಗಿ ಸ್ವೀಕರಿಸುತ್ತಾಳೆ. ಅವಳ ಪ್ರಕಾರ ಒಂದು ಫ್ಲಾಪ್‌ ಚಿತ್ರವೇ ಮುಂದಿನ ಹಿಟ್‌ ಚಿತ್ರಕ್ಕೆ ಸೋಪಾನವಂತೆ. ಈ ಕಾರಣದಿಂದಲೇ ಈಕೆ ಎಲ್ಲಾ ತರಹದ ಪಾತ್ರಗಳಲ್ಲೂ ನಟಿಸಿದ್ದಾಳೆ. ಅದು ಪಕ್ಕದ ಮನೆ ಹುಡುಗಿಯಂಥ ಪಾತ್ರ ಅಥವಾ ಲೇಡಿ ಗ್ಯಾಂಗ್‌ಸ್ಟರ್‌… ಯಾವುದೇ ಇರಬಹುದು. ಈಗ ತಾನೇ `ಬತ್ತಿ ಗುಲ್ ಮೀಟರ್ ಚಾಲೂ’ ಚಿತ್ರ ಮುಗಿಸಿರುವ ಈಕೆ ಅತಿ ಮಹತ್ವಾಕಾಂಕ್ಷೆಯ ‘ಬಾಹುಬಲಿ’  ಖ್ಯಾತಿಯ ಪ್ರಭಾಸ್‌ ನಾಯಕನಾದ `ಸಾಹೋ’ ಚಿತ್ರದ ಹಿಂದಿ ಅವತರಣಿಕೆಯ ನಾಯಕಿ ಪಾತ್ರ ಸಿಕ್ಕಿರುವುದು ತನ್ನ ಸೌಭಾಗ್ಯವೆನ್ನುತ್ತಾಳೆ.

ಯಾವುದೇ ಪಾತ್ರ ಒಪ್ಪುವ ಮೊದಲು ಶ್ರದ್ಧಾ ಅದರ ಕಥೆ ಕುರಿತು ಆಳವಾಗಿ ಯೋಚಿಸುತ್ತಾಳೆ. ಕಥೆ ಪ್ರೇರಣಾದಾಯಕವಾಗಿದ್ದರೆ ಮಾತ್ರ ಅದನ್ನು ಒಪ್ಪುತ್ತಾಳಂತೆ. ಚಿತ್ರದ ಪ್ರಣಯದ ದೃಶ್ಯಗಳ ಕುರಿತು ತನ್ನ ಅಭ್ಯಂತರ ಇಲ್ಲವೆನ್ನುತ್ತಾಳೆ. ಕಥೆಗೆ ಅಗತ್ಯವಿದ್ದರೆ ಮಾತ್ರ ಅಂಥದ್ದನ್ನು ಮಾಡುತ್ತೇನೆ ಎನ್ನುತ್ತಾಳೆ.

ನಟನೆ, ಪ್ಯಾಶನ್‌, ಗಾಯನ, ಶೋಕಿ, ನಟನೆ ಮಾತ್ರವಲ್ಲದೆ ಶ್ರದ್ಧಾ ಗಾಯನದಲ್ಲೂ ಮುಂದು. ತನ್ನ ಈ ಪ್ರತಿಭೆ ಬಗ್ಗೆ ಮೊದಲ ಬಾರಿ ತಿಳಿದಾಗ ಅವಳಿಗೆ ಬಹಳ ಖುಷಿ ಆಯ್ತಂತೆ.

“ನಟನೆ ನನ್ನ ಮೊದಲ ಆದ್ಯತೆ. ಗಾಯನದಲ್ಲೂ ನಾನು ಯಶಸ್ವೀ ಎನಿಸಿದಾಗ ಖುಷಿ ಡಬಲ್ ಆಯ್ತು. ಇದರ ಕ್ರೆಡಿಟ್‌ ನನ್ನ ತಾಯಿಗೇ ಹೋಗುತ್ತೆ. ಇಷ್ಟು ಮಾತ್ರವಲ್ಲ, ನನಗೆ ಬರವಣಿಗೆಯ ಶೋಕಿಯೂ ಉಂಟು. ಇದನ್ನು ಇದುವರೆಗೂ ನಾನು ಯಾರಿಗೂ ಹೇಳಿಲ್ಲ. ನನ್ನ ಬಿಡಿ ಬಿಡಿ ಕಥೆಗಳನ್ನೆಲ್ಲ ಒಟ್ಟುಗೂಡಿಸಿ ಕಥಾಸಂಕಲನ ಮಾಡುತ್ತೇನೆ.”

ಫಿಲ್ಮೀ ಪರಿವಾರಕ್ಕೆ ಸೇರಿದ ಶ್ರದ್ಧಾಳಿಗೆ ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ. ಅವಳ ಓದು ಮುಗಿದ ನಂತರ ತಂದೆ ತಾಯಿ ಅವಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರು. ತನ್ನ ಚಿತ್ರಗಳನ್ನು ತಾನೇ ಆರಿಸಿಕೊಳ್ಳುತ್ತಾಳೆ. “ನಾನು ಬಾಲ್ಯದಿಂದಲೇ ಬಲು ಫ್ರೀ ಬರ್ಡ್‌. ಯಾವುದೇ ಸವಾಲು ಎದುರಿಸಲಿಕ್ಕೂ ಹೆದರುವವಳಲ್ಲ. ಇದಕ್ಕೆ ನನ್ನ ಮನೆಯವರ ಸಪೋರ್ಟ್‌ ಇದೆ. ನಾನು ಇಲ್ಲಿಯವರೆಗೂ ತಲುಪಲು ಸಹ ಅವರೇ ಕಾರಣ. ಶ್ರಮಪಟ್ಟು ಕೆಲಸ ಮಾಡಬೇಕು ಎಂದು ಅಪ್ಪಾಜಿ ಹೇಳಿದರೆ, ಯಾವುದು ನನಗೆ ಸರಿ ಅನಿಸುತ್ತೋ ಅದನ್ನೇ ಮಾಡಬೇಕು ಅನ್ನುತ್ತಾರೆ ಅಮ್ಮ.”

ಬಾಲಿವುಡ್‌ನಿಂದ ನನಸಾದ ಕನಸು

ಬಾಲಿವುಡ್‌ ಶ್ರದ್ಧಾಳ ಜೀವನಕ್ಕೆ ಹೊಸ ಆಯಾಮ ನೀಡಿತು, “ಇದರಿಂದಲೇ ನನ್ನ ಕನಸು ನನಸಾಯ್ತು. ನನಗೆ ನಿರ್ಮಾಪಕ, ನಿರ್ದೇಶಕರೆಲ್ಲರೂ ಬೇಕಾದಷ್ಟು ಸಹಕಾರ ನೀಡಿದ್ದಾರೆ. ಹಾಗಾಗಿ ಈಗ ನನಗೆ ಸರಿ, ತಪ್ಪುಗಳ ವ್ಯತ್ಯಾಸ ಸ್ಪಷ್ಟ ಗೊತ್ತಾಗುತ್ತಿದೆ. ಸ್ವಭಾತಃ ಶಾಂತಳಾದ ನಾನು, ನನ್ನ ಸಿನಿಮಾದಲ್ಲಿನ ದೋಷ ಗಮನಿಸಿ ನನ್ನ ಮೇಲೆಯೇ ಸಿಟ್ಟಾಗುತ್ತೇನೆ.

“ನನಗೆ ಒಂದು ವಿಷಯದಲ್ಲಿ ಖೇದವಿದೆ. ನಾನು ಸಾಧಾರಣ ಹುಡುಗಿಯ ತರಹ ಜೀವಿಸ ಬಯಸುತ್ತೇನೆ, ಆದರದು ಸಾಧ್ಯವಿಲ್ಲ. ಬೀದಿ ಬದಿ ನಿಂತು ಆರಾಮವಾಗಿ ನಾನು ಪಾನಿಪೂರಿ  ಸವಿಯಲಾಗದು. ಸಮುದ್ರ ತೀರದಲ್ಲಿ ನನ್ನ ನಾಯಿ ಶೈಲೋ ಜೊತೆ ವಾಕಿಂಗ್‌ ಹೋಗಲು ಸಾಧ್ಯವಿಲ್ಲ. ಸೆಲೆಬ್ರಿಟಿ ಆದಕಾರಣ ಇವನ್ನು ಮಿಸ್‌ ಮಾಡುತ್ತೇನೆ,” ಎನ್ನುತ್ತಾಳೆ ಶ್ರದ್ಧಾ.

– ಪ್ರತಿನಿಧಿ 

Tags:
COMMENT