ಇಲ್ಲಿಯವರು ತೋರಿದ ಪ್ರೀತಿ ಪ್ರೋತ್ಸಾಹಕ್ಕೆ ಮರುಳಾದ ಶೃತಿ ತಾನು ಏನೇ ಮಾಡಿದರೂ ಕನ್ನಡದವರಿಗಾಗಿಯೇ ಮಾಡಬೇಕೆಂದು ತನ್ನ ನಟನಾ ವೃತ್ತಿಯನ್ನು ಇಲ್ಲಿಂದಲೇ ಶುರು ಮಾಡಿದ್ದಾಳೆ.
ಬೆಳಗಾವಿಯ ಬೆಡಗಿ ಈಕೆ. ಮುಂಬೈನಲ್ಲಿ ಬೆಳೆದು, ಅಲ್ಲಿಯ ಹಿಂದಿ ಧಾರಾವಾಹಿಗಳಲ್ಲಿ ನಟಿಸಿ, ಉತ್ತಮ ಗಾಯಕಿ ಅನಿಸಿಕೊಂಡಿದ್ದರೂ ಕನ್ನಡಿಗರಿಗೆ ಪರಿಚಿತಳಾಗಿದ್ದು ಬಿಗ್‌ಬಾಸ್ ರಿಯಾಲಿಟಿ ಶೋ ಮೂಲಕ. ಇಲ್ಲಿಯವರು ತೋರಿದ ಪ್ರೀತಿ ಪ್ರೋತ್ಸಾಹಕ್ಕೆ ಮರುಳಾದ ಶೃತಿ ತಾನು ಏನೇ ಮಾಡಿದರೂ ಕನ್ನಡದವರಿಗಾಗಿಯೇ ಮಾಡಬೇಕೆಂದು ತನ್ನ ನಟನಾ ವೃತ್ತಿಯನ್ನು ಇಲ್ಲಿಂದಲೇ ಶುರು ಮಾಡಿದ್ದಾಳೆ.
ತಾನೊಬ್ಬ ಉತ್ತಮ ನಟಿಯಾಗುವುದರ ಜೊತೆಗೆ ಒಳ್ಳೆ ಗಾಯಕಿಯಾಗಿ ಗುರುತಿಸಿಕೊಳ್ಳಬೇಕು ಎಂದು ಆಸೆ ಪಡುವ ಶೃತಿ ಜೊತೆ ಒಂದಿಷ್ಟು ಮಾತುಕತೆ.
ಬಿಗ್‌ಬಾಸ್ ಮನೆಯಿಂದ ಹೊರಬಂದ ಕೂಡಲೇ ಒಂದೊಳ್ಳೆ ಆಫರ್ ಸಿಕ್ಕಿತಲ್ಲ ಅದರ ಬಗ್ಗೆ ಹೇಳು?
ಆಫರ್‌ಗಳೇನೋ ಬೇಕಾದಷ್ಟು ಬಂದವು. ಆದರೆ ನಾನು ಬಯಸಿದ್ದು ಒಂದೊಳ್ಳೆ ಕಥೆ, ಜೊತೆಗೆ ನಾನು ನಿರ್ವಹಿಸುವ ಪಾತ್ರ ಎರಡೂ ಚೆನ್ನಾಗಿರಬೇಕು. ರಾಜ್ ಸೂರ್ಯ ನಿರ್ದೇಶಕರು ಒಂದು ಕಥೆ ಹೇಳಿದಾಗ, ನಾಯಕಿ ಪಾತ್ರ ನೀವೇ ಮಾಡಬೇಕು ಅಂದರು. ಪಾತ್ರದಲ್ಲಿ ವಿಶೇಷತೆ ಇದ್ದುದು ಕಂಡಿತು. ಒಪ್ಪಿಕೊಂಡೆ.
ಎಂಥ ಪಾತ್ರ ಮಾಡುವಾಸೆ?
ಹಾಗೆಲ್ಲ ನಾನೇನು ಅಂದುಕೊಂಡಿಲ್ಲ. ನನ್ನ ನಟನೆಗೆ ನ್ಯಾಯ ಸಿಗುವಂಥ ಪಾತ್ರವಿದ್ದರೆ ಸಾಕು.
ಗಾಯಕಿ ಕೂಡ ಆಗಿದ್ದಿ. ಚಿಕ್ಕಂದಿನಿಂದಲೇ ಸಂಗೀತಾಭ್ಯಾಸ ಆಗಿತ್ತಾ?
ಸಂಗೀತ ಕಲಿತಿಲ್ಲ. ಆದರೆ ಚಿಕ್ಕಂದಿನಿಂದ ಹಾಡುವ ಆಸೆ. ಸ್ಕೂಲ್ ಪ್ರೋಗ್ರಾಮ್ ಗಳಲ್ಲಿ ಎಲ್ಲ ಮಕ್ಕಳಂತೆ ನಾನೂ ಹಾಡುತ್ತಿದ್ದೆ. ಅದನ್ನು ಯಾರ ಮುಂದೇನೂ ಹೇಳಿಕೊಳ್ಳುತ್ತಿರಲಿಲ್ಲ. ಕಾಲೇಜು ಮುಗಿದ ಮೇಲೆ ಮುಂಬೈಗೆ ಜಾಬ್‌ಗೆಂದು ಹೋದೆ. ಅಲ್ಲಿ ನನ್ನ ಪ್ರತಿಭೆಗೆ ಒಂದು ಟರ್ನ್ ಸಿಕ್ಕಿತು. ಪಾಕೆಟ್ ಮನಿಗಾಗಿ ನಾನು ಕೆಲಸಕ್ಕೆ ಸೇರಿಕೊಂಡಿದ್ದೆ. ಅಲ್ಲಿಂದಲೇ ನನ್ನ ಗಾಯನದ ಜರ್ನಿ ಶುರುವಾಯಿತು.
ಮುಂದೆ ಇದು ಹೇಗೆ ಸಾಗಿತು?
ಕನ್ನಡದಲ್ಲೀಗ ನಟಿಸುವುದರ ಜೊತೆಗೆ ದಯಾಳ್ ಸರ್ ಅವರ ನಿರ್ದೇಶನದ `ಕರಾಳ ರಾತ್ರಿ’ಯಲ್ಲಿ ಒಂದು ಸಾಂಗ್‌ಹಾಡುತ್ತಿದ್ದೇನೆ. ನನ್ನ ಮೊದಲ ನಟನೆಯ ಚಿತ್ರ `ಲಂಡನ್‌ನಲ್ಲಿ ಲಂಬೋದರ’ ಬಿಡುಗಡೆ ನಂತರ ಉಳಿದ ಪ್ರಾಜೆಕ್ಟ್ ತೆಗೆದುಕೊಳ್ತೀನಿ.
ಹೀಗೆ ಹೇಳುವ ಶೃತಿ ಗಾಯಕಿಯಾಗಿ ಮುಂಬೈನಲ್ಲಿ ಪರಿಚಿತಳಾಗಿದ್ದಾಳಂತೆ. ಜನಪ್ರಿಯ ಧಾರಾವಾಹಿ `ಸಾಥ್ ನಿಭಾನಾ ಸಾಥಿಯಾ’ ಸೀರಿಯಲ್‌ನಲ್ಲಿ ಅಭಿನಯಿಸಿದ್ದಾಳೆ. ಸಿಂಗಿಂಗ್ ಸ್ಟಾರ್ ಆಗಿರುವ ಶೃತಿ `ಲಂಡನ್‌ನಲ್ಲಿ ಲಂಬೋದರ’ ಚಿತ್ರದಲ್ಲೂ ಸಹಾ ಹಾಡಿಗೆ ಧ್ವನಿ ನೀಡಿದ್ದಾಳೆ. ನಾಯಕಿ ಜೊತೆಗೆ ಗಾಯಕಿಯಾಗಿಯೂ ಮಿಂಚಲಿರುವ ಶೃತಿ ಕನ್ನಡಿಗರ ಮನ ಗೆಲ್ಲುವಳೇ? ಎಂದು ಕಾದು ನೋಡೋಣ.
– ಜಾಗೀರ್‌ದಾರ್