Sj*

‘ಸು ಫ್ರಮ್ ಸೋ’ ಚಿತ್ರದಲ್ಲಿ ರವಿ ಅಣ್ಣನಾಗಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ಶನೀಲ್ ಗೌತಮ್ ಈಗ ‘ಶ್ರೀರಾಮಚಂದ್ರ’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶನೀಲ್ ಗೌತಮ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡವು ಚಿತ್ರದ ಶೀರ್ಷಿಕೆ ಹಾಗೂ ಆಕರ್ಷಕ ಪೋಸ್ಟರ್‌ ಅನ್ನು ಅನಾವರಣಗೊಳಿಸಿದೆ.

‘ಪೊಗರು’ ಖ್ಯಾತಿಯ ನಿರ್ಮಾಪಕ ಬಿ.ಕೆ. ಗಂಗಾಧರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ‘ಫಾರೆಸ್ಟ್’ ಖ್ಯಾತಿಯ ಚಂದ್ರಮೋಹನ್ ನಿರ್ದೇಶನ ಮಾಡುತ್ತಿದ್ದಾರೆ.

*ಕುಟುಂಬದ ಸಂಬಂಧ, ಭಾವನೆ ಮತ್ತು ಹಾಸ್ಯದ ಸಮ್ಮಿಲನ*

ಇದೊಂದು ಸಂಪೂರ್ಣ ಕೌಟುಂಬಿಕ ಮನರಂಜನೆಯ ಚಿತ್ರ. ಕುಟುಂಬದ ಸಂಬಂಧಗಳು, ಭಾವನೆಗಳು, ಅಣ್ಣ-ತಂಗಿಯರ ಕಿತ್ತಾಟ ಹಾಗೂ ಹಾಸ್ಯಕ್ಕೆ ಆದ್ಯತೆ ನೀಡಲಾಗಿದ್ದು, ಪ್ರೇಕ್ಷಕರನ್ನು ನಗಿಸುವುದರ ಜೊತೆಗೆ ಭಾವನಾತ್ಮಕವಾಗಿಯೂ ಕಾಡುವಂತಹ ಸನ್ನಿವೇಶಗಳು ಚಿತ್ರದಲ್ಲಿರಲಿವೆ. ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವುದು ಚಿತ್ರತಂಡದ ಉದ್ದೇಶ.

shreerama1

ಚಿತ್ರದ ಕಥೆಯನ್ನು ನಿರ್ಮಾಪಕ ಉದಯ್ ಕೆ ಮೆಹ್ತ ಅವರು ರೂಪಿಸಿದ್ದು, ನಿರ್ದೇಶಕ ಚಂದ್ರಮೋಹನ್ ಹಾಗೂ ಶನೀಲ್ ಗೌತಮ್ ಚಿತ್ರಕಥೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಥೆಯನ್ನು ಅಭಿವೃದ್ಧಿಪಡಿಸಲು ಸುಮಾರು ಐದಾರು ತಿಂಗಳುಗಳ ಕಾಲ ಮಂಗಳೂರಿನಲ್ಲಿ ಕುಳಿತು ಚಿತ್ರಕಥೆ ಸಿದ್ಧಪಡಿಸಲಾಗಿದೆ.

ಉತ್ತಮ ಕಥೆಯುಳ್ಳ ಚಿತ್ರವನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ನಿರ್ಮಾಪಕ ಬಿ.ಕೆ. ಗಂಗಾಧರ್ ಅವರು ಹಲವು ಕಥೆಗಳನ್ನು ಆಲಿಸಿದ್ದರು. ನಿರ್ದೇಶಕರ ಎರಡು-ಮೂರು ಕಥೆಗಳ ಬಗ್ಗೆಯೂ ಚರ್ಚೆ ನಡೆಸಿದ್ದರು. ಅಂತಿಮವಾಗಿ ‘ಶ್ರೀರಾಮಚಂದ್ರ’ ಚಿತ್ರದ ಕಥೆ ಇಷ್ಟವಾಗಿ, ಸಂಪೂರ್ಣ ಪೂರ್ವಸಿದ್ಧತೆಯೊಂದಿಗೆ ಚಿತ್ರೀಕರಣ ಆರಂಭಿಸಲಾಗಿದೆ.

ಚಿತ್ರದಲ್ಲಿ ಪರಿಪೂರ್ಣ ಚಂದ್ರಶೇಖರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಡುಪಿ ಮೂಲದ ಪರಿಪೂರ್ಣ ಅವರಿಗೆ ಇದು ಕನ್ನಡದ ಮೊದಲ ಚಿತ್ರವಾಗಿದ್ದು, ಈ ಹಿಂದೆ ಇತರ ಭಾಷೆಗಳ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ” ಖ್ಯಾತಿಯ ಪ್ರವೀಣ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

shreerama2

“ಸು ಫ್ರಮ್ ಸೊ” ಖ್ಯಾತಿಯ ಚಂದ್ರಸೇಖರನ್ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಲಿಖಿತ್ ಪ್ರಸಾದ್ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿರಲಿವೆ. ‘ಸು ಫ್ರಮ್ ಸೋ’ ತಂಡದ ಸುಮಾರು ಶೇಕಡಾ 80ರಷ್ಟು ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿಯೂ ಕೆಲಸ ಮಾಡುತ್ತಿರುವುದು ವಿಶೇಷ.

ಸದ್ಯ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಇನ್ನೂ ಸುಮಾರು ಇಪ್ಪತ್ತು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಯೋಜನೆಯಿದೆ. ಶನೀಲ್ ಗೌತಮ್ ಅವರ “ಸು ಫ್ರಮ್ ಸೋ” ನಂತರ ನಾಯಕರಾಗಿ ನಟಿಸುತ್ತಿರುವ ‘ಶ್ರೀರಾಮಚಂದ್ರ’ ಕೌಟುಂಬಿಕ ಮನರಂಜನೆಯೊಂದಿಗೆ ಪ್ರೇಕ್ಷಕರನ್ನು ರಂಜಿಸುವ ನಿರೀಕ್ಷೆ ಮೂಡಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ