-  ರಾಘವೇಂದ್ರ ಅಡಿಗ ಎಚ್ಚೆನ್.

ಖ್ಯಾತ ನಿರ್ದೇಶಕ, ಪ್ರಯೋಗಶೀಲ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಟೋಬರ್ 3ರ ರಾತ್ರಿ 10.30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್, 60ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ತಮ್ಮ ವಿಭಿನ್ನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದ ಅವರು, ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದರು.

1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ ಸಿಂಗೀತಂ ಶ್ರೀನಿವಾಸ ರಾವ್, ತಮ್ಮ ವೃತ್ತಿಜೀವನದಲ್ಲಿ ಹಲವು ಭಾಷೆಗಳ ಪ್ರಮುಖ ನಟರೊಂದಿಗೆ ಕೆಲಸ ಮಾಡಿದ್ದರು.

ಕನ್ನಡ ಚಿತ್ರರಂಗದಲ್ಲೂ ಸಿಂಗೀತಂ ಶ್ರೀನಿವಾಸ ರಾವ್ ಅವರ ಕೊಡುಗೆ ಅಪಾರ. ಶಿವರಾಜ್‌ಕುಮಾರ್ ಅವರನ್ನು ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ‘ಆನಂದ್’ ಸಿನಿಮಾವನ್ನು ಇವರೇ ನಿರ್ದೇಶಿಸಿದ್ದರು.

ಅಷ್ಟೇ ಅಲ್ಲದೆ, ವರನಟ ಡಾ. ರಾಜ್‌ಕುಮಾರ್ ಅಭಿನಯದ ‘ಚಲಿಸುವ ಮೋಡಗಳು’, ‘ಹಾಲು ಜೇನು’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಎರಡು ನಕ್ಷತ್ರಗಳು’, ‘ಶ್ರಾವಣ ಬಂತು’ ಹಾಗೂ ‘ಶ್ರುತಿ ಸೇರಿದಾಗ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನ ಮಾಡಿದ್ದರು.

‘ಮೂಕಿ’, ‘ಪುಷ್ಪಕ ವಿಮಾನ’, ‘ಆನಂದ್’, ‘ಆದಿತ್ಯ 369’, ‘ಭೈರವ ದ್ವೀಪಂ’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳು ಅವರ ನಿರ್ದೇಶನದಲ್ಲಿ ಮೂಡಿಬಂದಿವೆ.

1988ರಲ್ಲಿ ಬಿಡುಗಡೆಯಾದ ‘ಪುಷ್ಪಕ ವಿಮಾನ’ ವಿಶೇಷವಾಗಿ ಗಮನ ಸೆಳೆದಿತ್ತು. ಸಂಭಾಷಣೆ ಇಲ್ಲದ ಈ ಸಿನಿಮಾವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ದೇಶಿಸುವ ಮೂಲಕ ಸಿಂಗೀತಂ ಶ್ರೀನಿವಾಸ ರಾವ್ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.

ರಾಘವೇಂದ್ರ ರಾಜ್‌ಕುಮಾರ್ ಅಭಿನಯದ ‘ಚಿರಂಜೀವಿ ಸುಧಾಕರ್’ ಹಾಗೂ ಜಗ್ಗೇಶ್ ಅಭಿನಯದ ‘ಮೇಕಪ್’ ಸಿನಿಮಾಗಳಿಗೂ ಅವರು ನಿರ್ದೇಶನ ನೀಡಿದ್ದರು.

95ನೇ ವಯಸ್ಸಿನಲ್ಲೂ ಸಿನಿಮಾ ನಿರ್ದೇಶನ ಮಾಡುವ ಮೂಲಕ ಸಿಂಗೀತಂ ಶ್ರೀನಿವಾಸ ರಾವ್ ಸಕ್ರಿಯರಾಗಿದ್ದರು.

ಭಾರತೀಯ ಚಿತ್ರರಂಗದ ಅಪರೂಪದ ಪ್ರಯೋಗಶೀಲ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಸಿಂಗೀತಂ ಶ್ರೀನಿವಾಸ ರಾವ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ