'ತಾರೆ ಜಮೀನ್ ಪರ್' ಚಿತ್ರವು ತನ್ನ ಮಗ ಜುನೈದ್ ಖಾನ್ಗೆ ಇದ್ದ ಡಿಸ್ಲೆಕ್ಸಿಯಾದಿಂದ ಸ್ಫೂರ್ತಿ ಪಡೆದಿದೆ ಎಂದು ಬಾಲಿವುಡ್ ನಟ ಆಮಿರ್ ಖಾನ್ ಬಹಿರಂಗಪಡಿಸಿದ್ದಾರೆ.
ಜುನೈದ್ ಈ ಬಗ್ಗೆ ಮೊದಲು ಮಾತನಾಡಿದ ನಂತರ, ತಮ್ಮ ಮಗನ ಅನುಭವಗಳನ್ನು ಹಂಚಿಕೊಳ್ಳುವುದು ಸೂಕ್ತ ಎಂದು ಭಾವಿಸಿರುವ ಆಮಿರ್, ಡಿಸ್ಲೆಕ್ಸಿಯಾದಿಂದ ಉಂಟಾಗುವ ತೊಂದರೆಗಳನ್ನು ತಾನು ವೈಯಕ್ತಿಕವಾಗಿ ಅನುಭವಿಸಿದ್ದಾಗಿ ಹೇಳಿದ್ದಾರೆ.ನಟ ಆಮಿರ್ ಖಾನ್ ‘ತಾರೇ ಜಮೀನ್ ಪರ್’ ಸಿನಿಮಾ ಮಾಡಿದ್ದರು. 2007ರಲ್ಲಿ ಈ ಚಿತ್ರ ತೆರೆಗೆ ಬಂತು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಮಾಡಲು ಆಮಿರ್ ಖಾನ್ಗೆ ಸ್ಫೂರ್ತಿಯಾಗಿದ್ದು ಅವರ ಮಗ. ಚಿತ್ರದಲ್ಲಿ ಡಿಸ್ಲೆಕ್ಸಿಯಾ ಹೆಸರಿನ ಕಾಯಿಲೆಯ ಬಗ್ಗೆ ಹೇಳಲಾಗಿದೆ. ಈ ಸಮಸ್ಯೆ ಇರುವ ಮಗು ಬಹಳ ನಿಧಾನ ಇರುತ್ತದೆ. ಕಲಿಕೆಯಲ್ಲಿ ವೇಗ ಇರುವುದಿಲ್ಲ. ಇದೇ ಸಮಸ್ಯೆ ಆಮಿರ್ ಮಗ ಜುನೈದ್ ಖಾನ್ಗೂ ಇತ್ತು. ಈ ಕಾರಣದಿಂದ ಆಮಿರ್ ಸಿನಿಮಾ ಮಾಡಲು ಒಪ್ಪಿದ್ದರು.
ಮಗನ ಖಾಸಗಿತನ ಕಾಪಾಡಿಕೊಳ್ಳುವ ಕಾರಣದಿಂದ ಈ ವಿಷಯವನ್ನು ಆಮಿರ್ ರಿವೀಲ್ ಮಾಡಿರಲಿಲ್ಲ. ಆದರೆ, ಜುನೈದ್ ಖಾನ್ ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದರು. ಹೀಗಾಗಿ, ಈ ವಿಚಾರವನ್ನು ಹೇಳಲು ಸರಿಯಾದ ಸಮಯ ಇದು ಎಂದು ಆಮಿರ್ ಹೇಳಿದ್ದಾರೆ.
‘ನಾನು ಇದುವರೆಗೂ ಈ ಬಗ್ಗೆ ಮಾತನಾಡಿಲ್ಲ. ಬಹುಶಃ ನಾನು ಇದನ್ನು ಹೇಳುತ್ತಿರುವುದು ಇದೇ ಮೊದಲು. ಇದಕ್ಕೆ ಕಾರಣ ಎರಡು, ಆ ವಿಚಾರ ನಡೆದು ಹಲವು ವರ್ಷಗಳು ಕಳೆದಿವೆ. ಎರಡನೆಯದಾಗಿ, ನಾನು ಮಾತನಾಡಲಿರುವ ವ್ಯಕ್ತಿ ಈಗಾಗಲೇ ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾನೆ. ಆದ್ದರಿಂದ ಈಗ ನಾನು ಅದರ ಬಗ್ಗೆ ಮುಕ್ತವಾಗಿ ಮಾತನಾಡಬಹುದು. ನಾನು ಜುನೈದ್ ಬಗ್ಗೆ ಮಾತನಾಡುತ್ತಿದ್ದೇನೆ, ನನ್ನ ಮಗ ಜುನೈದ್’ ಎಂದಿದ್ದಾರೆ ಆಮಿರ್.
‘ತಾರೇ ಜಮೀನ್ ಪರ್ ಚಿತ್ರ ಬಿಡುಗಡೆಯಾಗಿ 17-18 ವರ್ಷಗಳಾಗಿವೆ. ಜುನೈದ್ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದ. ಹಾಗಾಗಿ ನಾನು ಮೊದಲು (ತಾರೆ ಜಮೀನ್ ಪರ್) ಕಥೆಯನ್ನು ಕೇಳಿದಾಗ, ಅದು ನನಗೆ ತುಂಬಾ ನೋವುಂಟು ಮಾಡಿತು. ಏಕೆಂದರೆ ನಾನು ಅದನ್ನು ಸ್ವತಃ ಅನುಭವಿಸಿದ್ದೇನೆ. ನಾನು ಆರಂಭದಲ್ಲಿ ತಾರೆ ಜಮೀನ್ ಪರ್ ಸಿನಿಮಾದಲ್ಲಿ ಬಾಲಕನ ತಂದೆ ನಂದಕಿಶೋರ್ ಅವಸ್ಥಿಯಂತೆ ಇದ್ದೆ. ನಾನು ಜುನೈದ್ನನ್ನು ಗದರುತ್ತಿದ್ದೆ’ ಎಂದಿದ್ದಾರೆ ಆಮಿರ್.
ಸಣ್ಣ ಸಣ್ಣ ವಿಚಾರಗಳು ಮಗನಿಗೆ ಏಕೆ ಅರ್ಥ ಆಗುವುದಿಲ್ಲ ಎಂಬುದು ಆಮಿರ್ ಪ್ರಶ್ನೆ ಆಗಿತ್ತು. ಫಾರ್ ಬರೆಯೇಬೇಕಿದ್ದರೆ ಫ್ರಾಮ್ ಎಂದು ಬರೆಯುತ್ತಿದ್ದ. ರೋಗದ ವಿಚಾರ ತಿಳಿದ ಬಳಿಕ ತಾನು ಮಗನನ್ನು ನೋಡುವ ರೀತಿಯೇ ಸಂಪೂರ್ಣವಾಗಿ ಬದಲಾಯಿತು ಎಂದಿದ್ದಾರೆ ಆಮಿರ್.