– ರಾಘವೇಂದ್ರ ಅಡಿಗ ಎಚ್ಚೆನ್.
‘ತಾಯವ್ವ’ ಹೆಸರಿನ ಚಿತ್ರ ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿತ್ತು. ನಟ ಕಿಚ್ಚ ಸುದೀಪ್ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಚಿತ್ರವಿದು. ಆಗ ತೆರೆಗೆ ಬಂದಿದ್ದ ‘ತಾಯವ್ವ’ ಚಿತ್ರದಲ್ಲಿ ಸುದೀಪ್ ಅವರೊಂದಿಗೆ ಹಿರಿಯ ನಟಿ ಉಮಾಶ್ರೀ ‘ತಾಯವ್ವ’ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ‘ತಾಯವ್ವ’ ಎಂಬ ಹೆಸರಿನಲ್ಲಿ ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಈ ಬಾರಿ ʼತಾಯವ್ವʼನಾಗಿ ಈ ಚಿತ್ರದಲ್ಲಿ ನವ ಪ್ರತಿಭೆ ಗೀತಪ್ರಿಯ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ʼತಾಯವ್ವʼ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಈ ನಡುವೆ ಚಿತ್ರದ ಟ್ರೈಅಲ್ರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿದೆ.
ತಾಯವ್ವ ಟ್ರೈಲರ್ ಬಿಡುಗಡೆಗಾಗಿ ಕನ್ನಡದ ಹಿರಿಯ ನಟ ಪ್ರಣಯರಾಜ ಶ್ರೀನಾಥ್, ಖ್ಯಾತ ಆಡಿಯೋ ಸಂಸ್ಥೆ ಲಹರಿ ಆಡಿಯೋದ ಲಹರಿ ವೇಲು ಹಾಗೂ ಖ್ಯಾತ ಪ್ರಸೂತಿ ವೈದ್ಯೆ ಪದ್ಮಶ್ರೀ ಡಾ. ಕಾಮಿನಿ ರಾವ್ ಆಗಮಿಸಿದ್ದರು. ಅನಂತ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ʼತಾಯವ್ವʼ ಚಿತ್ರದ ಗೀತೆಗಳಿಗೆ ಸ್ವತಃ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ʼತಾಯವ್ವʼನಾಗಿ ಅಭಿನಯಿಸಿರುವ ಗೀತಪ್ರಿಯ ಅವರೇ ಧ್ವನಿಯಾಗಿದ್ದಾರೆ.
ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಂಡ ನಟ ಶ್ರೀನಾಥ್ “ನಮ್ಮ ಅಜ್ಜಿ ಹೇಳುತ್ತಿದ್ದಂತೆ ನನ್ನನ್ನು ಹೆರಿಗೆ ಮಾಡಿಸಿದ್ದು ಸೂಲಗಿತ್ತಿ ಕಾವೇರಮ್ಮನವರು. ಅವರನ್ನು ನನಗಿನ್ನೂ ನೋಡಲಾಗಲಿಲ್ಲ. ಅಂದಿನ ಕಾಲದಲ್ಲಿ ಸೂಲಗಿತ್ತಿ ಪ್ರಮುಖವಾಗಿದ್ದರು. ಒಂದು ಹಳ್ಳಿಗೆ ಶಾನುಭೋಗ, ಪಟೇಲರಿದ್ದಂತೆ ಸೂಲಗಿತ್ತಿಯರು ಸಹ ಮುಖ್ಯವಾಗಿದ್ದರು. ಸೂಲಗಿತ್ತಿ ಹೆರಿಗೆ ಮಾಡಿಸುವುದರೊಡನೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಔಷಧೋಪಚಾರ ಸಹ ಕೊಡುತ್ತಿದ್ದರು. ಅಂತಹಾ ಸೂಲಗಿತ್ತಿಯರಿಗೆ ತಾಯವ್ವ ಎಂದು ಕರೆಯುತ್ತಿದ್ದರು. ಈ ಸಿನಿಮಾದಲ್ಲಿ ಗೀತಪ್ರಿಯಾ ಅವರು ಅಭಿನಯ ಮಾಡಿದರೆನ್ನುವ್ದಕ್ಕಿಂತ ಹೆಚ್ಚು ಸಹಜವಾಗಿ ನಟಿಸಿದ್ದಾರೆ. ಇಂತಹಾ ಅಭಿನಯ ಮಾಡುವುದು ಕಷ್ಟ. ಈ ತಾಯವ್ವ ನೂರು ದಿನಗಳ ಸಂಭ್ರಮ ಕಾಣಲಿ ” ಎಂದು ಶುಭ ಹಾರೈಸಿದರು.
ಡಾ. ಕಾಮಿನಿ ರಾವ್ ಮಾತನಾಡಿ “ಇಂದೂ ಗ್ರಾಮೀಣ ಪ್ರದೇಶದಲ್ಲಿ ಸೂಲಗಿತ್ತಿಯರಿದ್ದಾರೆ, ಅವರು ಸಹಜ ಹೆರಿಗೆಯನ್ನೇ ನಡೆಸುತ್ತಾರೆ. ಅವರು ಫ್ಯಾಮಿಲಿ ವೈದ್ಯರಂತೆ ಇರುತ್ತಾರೆ. ಇದು ಸಮಾಜಕ್ಕೆ ಹೆಚ್ಚು ಹತ್ತಿರವಾಗಿರುವ ಕಥೆಯಾಗಿದೆ.” ಎಂದರು.
ಇದಲ್ಲದೆ ಲಹರಿ ವೇಲು ಸಹ ತಾಯವ್ವ ಸಿನಿಮಾಗೆ ಶುಭ ಕೋರಿದ್ದಾರೆ. ಹಾಗೂ ತಂಡದ ಇತರ ಸದಸ್ಯರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
ತಾಯವ್ವ ಸಿನಿಮಾವನ್ನು ನಂದಿ ಪ್ರಶಸ್ತಿ ಸಂಸ್ಥಾಪಕಿಯಾಗಿರುವ ಎಸ್.ಪದ್ಮಾವತಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದು, ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಕಂಟೆಂಟ್ ಸಿನಿಮಾವನ್ನು ನಿರ್ಮಿಸಿದ್ದು, ಅದನ್ನು ಕನ್ನಡ ಪ್ರೇಕ್ಷಕರಿಗೆ ಸಮರ್ಪಿಸುವ ಖುಷಿ ಅವರಿಗಿದೆ. ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ.
ಪಿ.ಶೇಷಗಿರಿ ಕಥೆ ಚಿತ್ರಕಥೆ ಸಂಭಾಷಣೆ ಬರೆದಿರುವ ತಾಯವ್ವನಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ತಾಯವ್ವ ಚಿತ್ರದ ಮೂಲಕ ಗೀತಪ್ರಿಯ ಚಿತ್ರರಂಗ ಪರಿಯಚವಾಗುತ್ತಿದ್ದು, ಬಂಡೇ ಮಹಾಕಾಳಿ ದೇಗುಲದ ಲತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಬಹುತೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ನಿರ್ಮಾಪಕ ಭಾ.ಮ.ಹರೀಶ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.