ಶರತ್ ಚಂದ್ರ
ಕಳೆದ ತಿಂಗಳು ಬಿಡುಗಡೆಯಾದ ತಮಿಳು ಚಿತ್ರವೊಂದು ಸಕತ್ ಸದ್ದು ಮಾಡುತ್ತಿದೆ. ದೊಡ್ಡ ಬಜೆಟ್ ಚಿತ್ರಗಳು ಮಖಾಡೆ ಮಲಗುತ್ತಿರುವ ಈ ದಿನಗಳಲ್ಲಿ 16 ಕೋಟಿ ಬಜೆಟ್ ನಲ್ಲಿ ತಯಾರಾದ 'ಟೂರಿಸ್ಟ್ ಫ್ಯಾಮಿಲಿ 'ಎಂಬ ಚಿತ್ರ OTT ಗೆ ಬಂದರೂ ಥೀಯೇಟರ್ ನಲ್ಲಿ ಇನ್ನೂ ಚೆನ್ನಾಗಿ ಓಡುತ್ತಿದೆ.
ಇತ್ತೀಚೆಗೆ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಸಿನಿಮಾ ನೋಡಿ ತಮ್ಮ X ಖಾತೆಯಲ್ಲಿ ಚಿತ್ರ ಮೆಚ್ಚಿ ಚಿತ್ರದ ಬಗ್ಗೆ ಒಳ್ಳೆ ಮಾತಾಡಿದ್ದಾರೆ.ಚಿತ್ರದ ಬರವಣಿಗೆ, ಸಂಗೀತ ಮತ್ತು ಕಲಾವಿದರ ಅಭಿನಯದ ಬಗ್ಗೆ ಹೊಗಳಿ ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾದಲ್ಲಿ ವಾಸಿಸುತ್ತಿದ್ದ ತಮಿಳು ಕುಟುಂಬವೊಂದು,ಅಲ್ಲಿನ ಆರ್ಥಿಕ ದಿವಾಳಿತನದಿಂದ ಬೇಸತ್ತು, ಭಾರತಕ್ಕೆ ಬದುಕು ಕಟ್ಟಿಕೊಳ್ಳಲು ಬರುವ ಫ್ಯಾಮಿಲಿಯ ಕಥೆಯನ್ನು ತಮ್ಮ ಪ್ರಥಮ ಚಿತ್ರದಲ್ಲಿ ನಿರ್ದೇಶಕ ಅಭೀಶ್ ಜೀವಿoತ್ ಅದ್ಭುತವಾಗಿ ತಮ್ಮ ಚಿತ್ರದಲ್ಲಿ ಹೇಳಿದ್ದಾರೆ. ಚಿತ್ರದ ನಾಯಕ ಶಶಿಕುಮಾರ್ ಮತ್ತು ನಾಯಕಿ ಸಿಮ್ರಾನ್ ಸೇರಿ ಎಲ್ಲಾ ಕಲಾವಿದರ ಅಭಿನಯ ಸಹಜವಾಗಿ ಮೂಡಿ ಬಂದಿದ್ದು ಪ್ರೇಕ್ಷಕರಿಗೆ ಇಷ್ಟವಾಗಿದೆ.
ಬಹುವೆಚ್ಚ ಚಿತ್ರಗಳು ಸೋಲುತ್ತಿರುವ ಈ ದಿನಗಳಲ್ಲಿ ಟೂರಿಸ್ಟ್ ಫ್ಯಾಮಿಲಿ ಚಿತ್ರದ ಅತೀ ದೊಡ್ಡ ಯಶಸ್ಸು ತಮಿಳು ಚಿತ್ರರಂಗದಲ್ಲಿ ಆಶಾಕಿರಣ ಮೂಡಿಸಿದೆ. ಬರಿ 16 ಕೋಟಿ ಬಂಡವಾಳದಲ್ಲಿ ನಿರ್ಮಿಸಲಾದ ಈ ಚಿತ್ರ ಬರೋಬ್ಬರಿ 90 ಕೋಟಿ ಗಳಿಕೆಯನ್ನು ಕಂಡು ತಮಿಳಿನಲ್ಲಿ ಈ ವರ್ಷದ ಅತಿ ಹೆಚ್ಚು ಗಳಿಕೆಯನ್ನು ಕಂಡ ಚಿತ್ರವಾಗಿ ಹೊರಹೊಮ್ಮಿದೆ.
ಜೂನ್ 2 ರಿಂದ ಜಿಯೋ ಹಾಟ್ ಸ್ಟಾರ್ ಮೂಲಕ ಸ್ಟ್ರೀಮ್ ಆಗುತ್ತಿರುವ ಈ ಚಿತ್ರ ಮತ್ತೊಮ್ಮೆ ಕಂಟೆಂಟೇ ಕಿಂಗ್ ಎಂದು ಸಾಬೀತುಪಡಿಸಿದೆ.