– ರಾಘವೇಂದ್ರ ಅಡಿಗ ಎಚ್ಚೆನ್.
ಕರ್ನಾಟಕದಲ್ಲಿ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ರಕ್ಷಣೆ ನೀಡಬೇಕು ಎಂದು ಕೋರಿ ಕರ್ನಾಟಕ ಚಿತ್ರಮಂದಿರಗಳ ಸಂಘ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆದರೆ, ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ ವ್ಯಕ್ತಪಡಿಸಿದೆ.
ಸೋಮವಾರ ಸುಪ್ರೀಂಕೋರ್ಟ್ ಕಲಾಪ ಪ್ರಾರಂಭವಾಗುತ್ತಿದ್ದಂತೆ, ಸಂಘದ ಪರ ವಕೀಲರು ನ್ಯಾಯಮೂರ್ತಿ ಮಿಶ್ರಾ ಅವರಿದ್ದ ವಿಭಾಗೀಯ ಪೀಠಕ್ಕೆ, ಅರ್ಜಿ ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಚಿತ್ರದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ, ಬೆದರಿಕೆ ಇದೆ. ಆದ್ದರಿಂದ ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವುದಕ್ಕೆ ಅವಕಾಶವಿಲ್ಲ. ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣಾ ಹಂತದಲ್ಲಿದೆ. ಅಲ್ಲಿಯೇ ವಿಷಯವನ್ನು ಪ್ರಸ್ತಾಪಿಸಬಹುದು ಎಂದು ತಿಳಿಸಿ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.
ಪ್ರಕರಣದ ವಿವರ: ಥಗ್ ಲೈಫ್ ಚಿತ್ರದ ಬಿಡುಗಡೆಗೂ ಮುನ್ನ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ‘ಕನ್ನಡವು ತಮಿಳು ಭಾಷೆಯಿಂದ ಹುಟ್ಟಿದೆ’ ಎಂಬುದಾಗಿ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕನ್ನಡ ಭಾಷಿಕರಿಗೆ ಘಾಸಿಗೊಳಿಸಿದೆ ಎಂಬುದಾಗಿ ತಿಳಿಸಿ, ಕ್ಷಮೆಯಾಚನೆ ಮಾಡದಿದ್ದರೆ ಚಿತ್ರ ಬಿಗಡೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡ ಪರ ಸಂಘಟನೆಗಳು ತಿಳಿಸಿದ್ದವು.
ಇದನ್ನು ಪ್ರಶ್ನಿಸಿ, ಚಿತ್ರ ನಿರ್ಮಾಣ ಮಾಡಿದ್ದ ರಾಜಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯು ಹೈಕೋರ್ಟ್ ಮೆಟ್ಟಿಲೇರಿ, ಸಿನಿಮಾ ಬಿಡುಗಡೆಗೆ ಭದ್ರತೆ ಒದಗಿಸಬೇಕು ಎಂದು ಕೋರಿತ್ತು. ಈ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಪೀಠ, ಕಮಲ್ ಹಾಸನ್ ಹೇಳಿಕೆಯು ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದ್ದು, ಕ್ಷಮೆಯಾಚನೆ ಮಾಡಬೇಕು ಎಂದು ಸಲಹೆ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕಮಲ್ ಹಾಸನ್, ಕ್ಷಮೆ ಕೋರುವ ಬದಲಾಗಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ಜೊತೆಗೆ, ಅರ್ಜಿದಾರರ ಸಂಸ್ಥೆ ಹಾಗೂ ಪ್ರತಿವಾದಿಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಚರ್ಚೆ ನಡೆಯುವವರೆಗೂ ಕರ್ನಾಟಕದಲ್ಲಿ ಚಿತ್ರದ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದರು.





