ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಿರ್ದೇಶಕ, ರಿಯಲ್ ಸ್ಟಾರ್ ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಉಪ್ಪಿ ಅವರಿಗೆ ಓವರ್ ಅಸಿಡಿಟಿ ಇದ್ದ ಕಾರಣಕ್ಕೆ ಮನೆಯಲ್ಲೇ ಚಿಕಿತ್ಸೆ ಪಡೆದಿದ್ದರು. ಆದರೂ ಚೇತರಿಕೆ ಕಾಣಲಿಲ್ಲ. ಹಾಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿ ಅವರಿಗೆ ಹೊಟ್ಟೆಯಲ್ಲಿ ಸಮಸ್ಯೆ, ಕಡಿಮೆ ರಕ್ತದೊತ್ತಡ, ವಾಂತಿ ಮತ್ತು ನಿರ್ಜಲೀಕರಣ ಸಮಸ್ಯೆಯೂ ಇತ್ತು. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಉಪೇಂದ್ರ ಅವರಿಗೆ ಹೊಟ್ಟೆಯುರಿ ಕಾಣಿಸಿಕೊಂಡಿತ್ತು. ಇದಕ್ಕೆ ಅವರು ಮನೆಯಲ್ಲೇ ಚಿಕಿತ್ಸೆ ಪಡೆದಿದ್ದರು. ಆದರೂ ಅವರ ಆರೋಗ್ಯ ಸುಧಾರಿಸದ ಕಾರಣ ತಮ್ಮ ನಿವಾಸಕ್ಕೆ ಹತ್ತಿರದಲ್ಲೇ ಇರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಸದ್ಯ ಉಪೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಉಪೇಂದ್ರ ಅವರು ಯುಐ ಸಿನಿಮಾದಲ್ಲಿ ಬಹಳಷ್ಟು ಬ್ಯುಸಿಯಾಗಿದ್ದರು. ಅಲ್ಲದೆ ಈ ಸಿನಿಮಾ ಶೂಟಿಂಗ್ ವೇಳೆಯೂ ಅವರ ಆರೋಗ್ಯ ಸರಿಯಾಗಿರಲಿಲ್ಲ. ಇತ್ತೀಚೆಗೆ ಅವರು ಸಿನಿಮಾ ಕೆಲಸಗಳಲ್ಲಿ ಬಿಡುವಿಲ್ಲದೆ ದಣಿದಿದ್ದರು. ಇದರಿಂದಲೂ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದು ಎನ್ನಲಾಗಿದೆ. ಈ ವಿಚಾರ ತಿಳಿದ ಉಪೇಂದ್ರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಉಪೇಂದ್ರ ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಸದ್ಯಕ್ಕೆ ಉಪ್ಪಿ ಅವರ ಆರೋಗ್ಯ ಸ್ಥಿರವಾಗಿದ್ದು, ಅಭಿಮಾನಿಗಳು ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ. ಅವರಿಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲ, ಅಸಿಡಿಟಿಯಿಂದ ತುಸು ಆಯಾಸಕ್ಕೆ ಒಳಗಾಗಿದ್ದಾರೆ. ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಶೀಘ್ರವೇ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 45 ಸಿನಿಮಾದ ಟೀಸರ್ ಕೂಡ ಇತ್ತೀಚೆಗೆ ರಿಲೀಸ್ ಆಗಿತ್ತು. ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾದ ಪ್ರಚಾರದಲ್ಲಿ ಉಪೇಂದ್ರ ಭಾಗಿಯಾಗಿದ್ದರು. ಇದಕ್ಕಾಗಿ ಅವರು ವಿವಿಧ ರಾಜ್ಯಗಳಿಗೂ ಪ್ರವಾಸ ಮಾಡಿ, ಬಿಡುವಿಲ್ಲದೆ ಸಂದರ್ಶನಗಳಲ್ಲೂ ಭಾಗಿಯಾಗಿದ್ದರು. ಇದೇ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದು, ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಹೊತ್ತಿನಲ್ಲೇ ಉಪ್ಪಿ ಅವರ ಅನಾರೋಗ್ಯ ವಿಚಾರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.