ಕನ್ನಡ.. ಕನ್ನಡ.. ಎಂದಿದಕ್ಕೆ ಪಹಲ್ಗಾಮ್ ದಾಳಿ ನಡೆದಿದೆ ಎಂಬ ಗಾಯಕ ಸೋನು ನಿಗಮ್ ಅವರ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ. ಈ ಹೇಳಿಕೆ ಕನ್ನಡಿಗರೆಲ್ಲರನ್ನೂ ಕೆಣಕುವಂತೆ ಮಾಡಿದೆ. ಸೋನು ನಿಗಮ್ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದ್ದು, ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಇದೀಗ ಸ್ಯಾಂಡಲ್‌ವುಡ್ ದೊಡ್ಡಣ್ಣ ಕಿಡಿಕಾರಿದ್ದಾರೆ.
ಖ್ಯಾತ ಗಾಯಕ ಸೋನು ನಿಗಮ್, ಕನ್ನಡ.. ಕನ್ನಡ.. ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು ಎಂದು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಕನ್ನಡ ಪರ ಹೋರಾಟಗಾರರು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ಎಫ್‌ಐಆರ್ ದಾಖಲಿಸುವುದರ ಜೊತೆಗೆ ಫಿಲ್ಮ್ ಚೇಂಬರ್‌ಗೂ ದೂರು ನೀಡಿದ್ದಾರೆ. ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಅವರನ್ನು ಬ್ಯಾನ್ ಮಾಡಬೇಕು, ಮುಂದಿನ ದಿನಗಳಲ್ಲಿ ಸಂಗೀತ ನಿರ್ದೇಶಕರು ಕೂಡ ಸೋನು ನಿಗಮ್‌ನ ಕರೆಸಿ ಹಾಡಿಸುವಂತಿಲ್ಲ ಅಂತ ತಾಕೀತು ಕೂಡಾ ಮಾಡಿದ್ದಾರೆ. ಈ ಬಗ್ಗೆ ಹಿರಿಯ ನಟ ದೊಡ್ಡಣ್ಣ ಪ್ರತಿಕ್ರಿಯಿಸಿದ್ದಾರೆ.
ಮೊದಲು ಚಾನ್ಸ್ ಕೊಟ್ಟಿದ್ದು ಕನ್ನಡದವರು!
“ಸೋನು ನಿಗಮ್ ಅನ್ನೋ ಒಬ್ಬ ಗಾಯಕನಿಗೆ ಮುಖದಲ್ಲಿ ಸರಿಯಾಗಿ ಮೀಸೆ ಕೂಡಾ ಬಂದಿರಲಿಲ್ಲ. ಆಗ ಅವರಿಗೆ ಚಾನ್ಸ್ ಕೊಟ್ಟಿದ್ದು ಕನ್ನಡದವರು. ನಿರ್ದೇಶಕ ಡಿ ರಾಜೇಂದ್ರ ಬಾಬು ಪ್ರಬುದ್ಧ ನಿರ್ದೇಶಕ, ಸೋಲಿಲ್ಲದ ಸರದಾರ ಸಿನಿಮಾದಲ್ಲಿ ಹಾಡಲು ಸೋನು ನಿಗಮ್‌ಗೆ ಚಾನ್ಸ್ ಕೊಟ್ಟಿದ್ದು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಾಂಗ್ ರೆಕಾರ್ಡಿಂಗ್ ಆಗಿತ್ತು. ಆ ಸಮಯದಲ್ಲಿ ನಾನು ಕೂಡ ಇದ್ದೆ” ಎಂದು ಹಿರಿಯ ನಟ ದೊಡ್ಡಣ್ಣ ಹೇಳಿಕೆ ನೀಡಿದ್ದಾರೆ.
ಸೋನು ನಿಗಮ್ ಅವಿವೇಕಿ!
ಕನ್ನಡ ನನ್ನ ತಾಯಿ, ಜಗತ್ತಿನ ಮೂರೇ ಮೂರು ಸರ್ವ ಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಒಂದು. ಮಾತನಾಡಿದಂತೆ ಬರೆಯಲು, ಬರೆದಂತೆ ಯತಾವಥ್ ಮಾತನಾಡುವ ಶಕ್ತಿಯುಳ್ಳ ಸಂಧಿ ಮತ್ತು ಸಮಾಸ, ವ್ಯಾಕರಣ, ಅಲ್ಪಪ್ರಾಣ, ಮಹಾಪ್ರಾಣ ಇರುವ ಭಾಷೆ ಯಾವುದಾದರೂ ಇದ್ದರೆ ಅದು ಕನ್ನಡ ಮಾತ್ರ. ಕನ್ನಡ ಅಲ್ಲ ಅದು ಕಸ್ತೂರಿ ಕನ್ನಡ. ಪಾಪ ಅದು ಸೋನು ನಿಗಮ್‌ಗೆ ಗೊತ್ತಿಲ್ಲ. ಆ ಕಾರಣಕ್ಕೆ ಅವರನ್ನು ಅವಿವೇಕಿ ಅಂತ ಹೇಳಿ ಪರಿಗಣಿಸಬೇಕೆ ಹೊರತು, ಗುಬ್ಬಿ ಮುಂದೆ ಬ್ರಹ್ಮಾಸ್ತ್ರ ಅನ್ನೋದು ನನಗೆ ಯಾಕೋ ಇಷ್ಟ ಇಲ್ಲ” ಎಂದಿದ್ದಾರೆ ದೊಡ್ಡಣ್ಣ.
ನಾವೆಲ್ಲಾ ಭಾರತೀಯರು ಎನ್ನುವುದು ನೆನಪಿರಲಿ!
“ಕನ್ನಡ ಪರ ಹೋರಾಟಗಾರರೇನಾದರೂ ಇಲ್ಲದೇ ಇದ್ದಿದ್ದರೆ, ಇಷ್ಟೊತ್ತಿಗೆ ಕನ್ನಡವನ್ನು ಮುಂಡಾ ಮೋಚ ಬಿಡುತ್ತಿದ್ದರು. ಕನ್ನಡ ಪರ ಹೋರಾಟಗಾರರು ಅವರ ಹೆಂಡತಿ ಮಕ್ಕಳನ್ನು ಬಿಟ್ಟು, ರಸ್ತೆಗೆ ಬಂದು ಕೂಗಾಡಿ ಚಳುವಳಿ ಮಾಡಿ, ಅರೆಸ್ಟ್ ಆಗಿ, ಮೂವತ್ತು ನಲವತ್ತು ಕೇಸ್‌ಗಳನ್ನು ಹಾಕಿಸಿಕೊಳ್ಳದೇ ಇದ್ದಿದ್ದರೆ, ಕನ್ನಡ ಇಲ್ಲಿಯವರೆಗೂ ಬರುತ್ತಿರಲಿಲ್ಲ. ಚಳುವಳಿಗಾರರಲ್ಲಿ ನಾನು ವಿನಂತಿ ಮಾಡಿಕೊಳ್ಳುವುದು ಇಷ್ಟೇ, ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬೇಡಿ. ಸಂಧಾನದ ಮೂಲಕ ಬಗೆಹರಿಸಿಕೊಳ್ಳೋಣ. ನಾವೆಲ್ಲಾ ಭಾರತೀಯರು ಅನ್ನೋ ಮಾತು ತಲೆಯಲ್ಲಿ ಇರಲಿ” ಎಂದು ದೊಡ್ಡಣ್ಣ ಹೇಳಿದ್ದಾರೆ.