– ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರಿನ ಗಾಂಧಿನಗರದಲ್ಲಿ ಇದಾಗಲೇ ನಾನಾ ಥಿಯೇಟರ್ ಗಳು ಮುಚ್ಚಿಹೋಗಿದ್ದು, ನೆಲಸಮವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆ ಜಾಗಗಳಲ್ಲಿ ಮಾಲ್ಗಳ ನಿರ್ಮಾಣ ಆಗಿದೆ. ಕಪಾಲಿ, ಸಾಗರ್, ತ್ರಿವೇಣಿ, ಕಾವೇರಿ, ಸ್ಟೇಟ್ಸ್, ಮೂವಿಲ್ಯಾಂಡ್ ಬೆಂಗಳೂರಿನ ಇನ್ನೂ ಕೆಲ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಈಗಾಗಲೇ ನೆನಪಿನ ಪುಟ ಸೇರಿದೆ. ಈಗ ಆ ಸಾಲಿಗೆ ಮತ್ತೊಂದು ಥಿಯೇಟರ್ ಸಹ ಸೇರ್ಪಡೆಯಾಗುತ್ತಿದೆ. ಅದುವೇ ಲಾಲ್ಬಾಗ್ ರಸ್ತೆಯಲ್ಲಿರುವ ಸಿಂಗಲ್ ಸ್ಕ್ರೀನ್ ಥಿಯೇಟರ್ ‘ಊರ್ವಶಿ ಚಿತ್ರಮಂದಿರ’ ಲಾಲ್ಬಾಗ್ ಸಮೀಪ, ಸಿದ್ಧಯ್ಯ ರಸ್ತೆಯಲ್ಲಿರುವ ಊರ್ವಶಿ ಥಿಯೇಟರ್ ಹಲವು ಭಾಷೆಯ ಹಲವಾರು ಸಿನಿಮಾಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಕೆಲವು ನಟರುಗಳಿಗೆ ಊರ್ವಶಿ ಚಿತ್ರಮಂದಿರವೇ ಮೇನ್ ಚಿತ್ರಮಂದಿರ ಆಗಿತ್ತು. ಆದರೆ ಇದೀಗ ಈ ಊರ್ವಶಿ ಚಿತ್ರಮಂದಿರ ನೆಲಸಮವಾಗುತ್ತಿದೆ. 2026ರ ಫೆಬ್ರವರಿಗೆ ಈ ಥಿಯೇಟರ್ ಕೆಲಸ ನಿಲ್ಲಿಸಲಿದೆ. ಚಿತ್ರಮಂದಿರವನ್ನು ನೆಲಸಮಗೊಳಿಸಿ ಹೊಸ ಕಾಮಗಾರಿ ಪ್ರಾರಂಭ ಆಗಲಿದೆ. ಇದು ಕನ್ನಡ ಚಿತ್ರಪ್ರೇಪಿಗಳಿಗೆ ಮನಸ್ಸಿಗೆ ಘಾಸಿಯಾಗುವ ಮತ್ತೊಂದು ಕಹಿ ಸತ್ಯ..

ಡಾ.ರಾಜ್ಕುಮಾರ್, ಎಂ.ಜಿ.ಆರ್, ರಜನಿಕಾಂತ್ ಹೀಗೆ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಅತೀ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಂಡು, ಹಲವು ದಾಖಲೆಗಳನ್ನು ಬರೆದಿರುವ ಊರ್ವಶಿ ಥಿಯೇಟರ್ 1970ರಲ್ಲಿ ನಿರ್ಮಾಣ ಆಗಿತ್ತು. ಇದನ್ನು ಕನ್ನಡದ ಹೆಸರಾಂತ ನಿರ್ಮಾಪಕರಾಗಿದ್ದ ಕೆ.ಸಿ.ಎನ್.ಗೌಡ್ರು ಕಟ್ಟಿಸಿದರು. ಇದನ್ನು ಅಂದು ಡಾ.ರಾಜ್ಕುಮಾರ್ ಉದ್ಘಾಟಿಸಿದ್ದರು. .ರಾಜ್ಕುಮಾರ್ ಅಭಿನಯದ ‘ಬಹದ್ದೂರ್ ಗಂಡು ಸಿನಿಮಾ’ ಇಲ್ಲಿ ಮೊದಲ ಸಿನಿಮಾವಾಗಿ ಪ್ರದರ್ಶನಗೊಂಡಿತ್ತು. ಅನೇಕ ಕನ್ನಡ ಸಿನಿಮಾಗಳು ಇಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿವೆ. ಉದಾಹರಣೆಗೆ, ಶಿವರಾಜ್ಕುಮಾರ್ ಅಭಿನಯದ AK47 ಯಶಸ್ವಿ 100 ದಿನಗಳ ಪ್ರದರ್ಶನ ಕಂಡಿತ್ತು. ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಊರ್ವಶಿಯಲ್ಲಿ ಬಹಳ ಅದ್ಧೂರಿಯಾಗಿ ತೆರೆಕಂಡಿತ್ತು. ಕೇವಲ 7 ದಿನಗಳಲ್ಲಿ ಈ ಚಿತ್ರಮಂದಿರಲ್ಲಿ 1 ಕೋಟಿ 10 ಲಕ್ಷ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಸಿನಿಮಾ ತೆರೆಕಂಡ ಮೊದಲ ದಿನ 7 ಶೋಗಳು ಆಯೋಜನೆಗೊಂಡಿತ್ತು.
ಇನ್ನು ಈ ಥಿಯೇಟರ್ ಒಟ್ಟು ಸೀಟಿಂಗ್ ಸಾಮರ್ಥ್ಯ ಬರೋಬ್ಬರಿ 1100. ಒಂದೇ ಬಾರಿ 1100 ಮಂದಿ ಸಿನಿಮಾ ನೋಡಬಹುದಾದ ವ್ಯವಸ್ಥೆ ಇತ್ತು. ಸ್ಕ್ರೀನ್ ಸಹ ಬಹಳ ದೊಡ್ಡದು. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಒಳ್ಳೆಯ ಸಿನಿಮಾ ಅನುಭವವನ್ನು ಈ ಥಿಯೇಟರ್ ನೀಡುತ್ತಿತ್ತು. ಅತ್ಯುತ್ತಮ ಪಾರ್ಕಿಂಗ್ ವ್ಯವಸ್ಥೆ, ವಿಶಾಲ ಜಾಗವೂ ಸಹ ಊರ್ವಶಿಗೆ ಇತ್ತು. ಆದರೆ ಈಗ ಥಿಯೇಟರ್ ಭೂವಿವಾದದ ಕಾರಣಕ್ಕೆ ನೆಲಸಮವಾಗುತ್ತಿದೆ. ಚಿತ್ರಮಂದಿರದ ಭೋಗ್ಯ 2018ಕ್ಕೆ ಮುಗಿದಿದ್ದರೂ ಇದರ ಉಸ್ತುವಾರಿ ವಹಿಸಿಕೊಂಡ್ರುವ ಕೆ.ಸಿ.ಎನ್.ಗೌಡ್ರು ಕುಟುಂಬದ ರವಿಶಂಕರ್ ತಾವು ಅದೇ ಭೋಗ್ಯದ ಹಣ ಕೊಟ್ಟುಕೊಂಡು ಇದುವರೆಗೆ ಸಮಯ ದೂಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಜಮೀನಿನ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದು ಥಿಯೇಟರ್ ನೆಲಸಮ ಮಾಡಲು ಕೋರ್ಟ್ ಆದೇಶ ನೀಡಿದೆ. ಎನ್ನಲಾಗಿದೆ.
ಏನಾದರೂ 5,000ಕ್ಕೂ ಹೆಚ್ಚು ಸಿನಿಮಾ ಪ್ರದರ್ಶನ ಕಂಡಿರುವ ಊರ್ವಶಿ ಚಿತ್ರಮಂದಿರ ಇನ್ನು ಮುಂದಿನ ದಿನಗಳಲ್ಲಿ ನೆನಪಾಗಿ ಉಳಿಯಲಿದೆ ಎನ್ನುವುದು ಚಿತ್ರರಸಿಕರ ಪಾಲಿಗೆ ಖೇದದ ಸಂಗತಿಯಾಗಿದೆ.





