ಸರಸ್ವತಿ*
ಈಗಾಗಲೇ ತನ್ನ ಟೈಟಲ್, ಟೀಸರ್ ಮತ್ತು ಹಾಡುಗಳ ಮೂಲಕ ಚಂದನವನದಲ್ಲಿ ಒಂದಷ್ಟು ಸಿನಿಪ್ರಿಯರ ಮನ ಮತ್ತು ಗಮನ ಎರಡನ್ನೂ ಸೆಳೆದಿರುವ 'ವಿಕಲ್ಪ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 'ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್' (ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿಯ ಎಳೆಯನ್ನು ಆಧಾರಿಸಿ ತೆರೆಗೆ ಬರುತ್ತಿರುವ ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರದ ಚಿತ್ರ ಇದಾಗಿದ್ದು, 'ಸುರೂಸ್ ಟಾಕೀಸ್' ಸಂಸ್ಥೆಯ ಅಡಿಯಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ಮೊದಲ ಬಾರಿಗೆ 'ವಿಕಲ್ಪ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯುವ ಪ್ರತಿಭೆ ಪೃಥ್ವಿರಾಜ್ ಪಾಟೀಲ್, 'ವಿಕಲ್ಪ' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ತೆರೆಮೇಲೂ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ನಾಗಶ್ರೀ ಹೆಬ್ಬಾರ್, ಹರಿಣಿ ಶ್ರೀಕಾಂತ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಿರೀಶ್ ಹೆಗಡೆ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ ಜಯತೀರ್ಥ 'ವಿಕಲ್ಪ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಜಯತೀರ್ಥ, 'ಕನ್ನಡ ಚಿತ್ರರಂಗಕ್ಕೆ ಹೊಸಪ್ರತಿಭೆಗಳು ಬರುತ್ತಿರುವುದು ನಿಜಕ್ಕೂ ಖುಷಿಯ ವಿಷಯ. ಹೊಸಬರ ಮೂಲಕ ಹೊಸ ಹೊಸ ಕಲ್ಪನೆ, ಆಲೋಚನೆಗಳು ಸಿನಿಮಾವಾಗಿ ತೆರೆಮೇಲೆ ಅನಾವರಣವಾಗುತ್ತದೆ. ಹೊಸಬರು ಯಾವಾಗಲೂ ಚಿತ್ರರಂಗದ ಜೀವಂತಿಕೆಯನ್ನು ಹಿಡಿದಿಡುತ್ತಾರೆ. 'ವಿಕಲ್ಪ' ಚಿತ್ರದ ಕಲಾವಿದರು, ತಂತ್ರಜ್ಞರು ಯಾರೂ ನನಗೆ ಮೊದಲಿನಿಂದ ಪರಿಚಿತರಲ್ಲ. ಕೆಲ ದಿನಗಳ ಹಿಂದಷ್ಟೇ ಪೋನಿನಲ್ಲಿ ಮಾತನಾಡಿ ಪರಿಚಯವಾದವರು. ಆದರೆ, ಒಳ್ಳೆಯ ಕಂಟೆಂಟ್ ಆಧಾರಿತ ಸಿನಿಮಾ ಮಾಡಬೇಕೆಂಬ ಅವರ ಪ್ರಾಮಾಣಿಕ ಪ್ರಯತ್ನ ಇಷ್ಟವಾಗಿದ್ದರಿಂದ, ನಾನು 'ವಿಕಲ್ಪ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಒಪ್ಪಿಕೊಂಡು ಬಂದಿದ್ದೇನೆ. ಸಿನಿಮಾದ ಕಥಾಹಂದರ, ಮೇಕಿಂಗ್, ಟೀಸರ್, ಹಾಡುಗಳು ಎಲ್ಲವೂ ಚಿತ್ರದ ಬಗ್ಗೆ ಒಂದಷ್ಟು ಭರವಸೆ ಮೂಡಿಸುವಂತಿದೆ. ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಲಿ' ಎಂದು ಹಾರೈಸಿದರು.
'ವಿಕಲ್ಪ' ಚಿತ್ರದ ಟ್ರೇಲರ್ ಬಿಡುಗಡೆ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಟ ಕಂ ನಿರ್ದೇಶಕ ಪೃಥ್ವಿರಾಜ್ ಪಾಟೀಲ್, 'ಇದೊಂದು ಸೈಕಾಲಜಿಕಲ್-ಥ್ರಿಲ್ಲರ್ ಶೈಲಿಯ ಸಿನಿಮಾ. 'ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್' (ಪಿಟಿಎಸ್‌ಡಿ) ಎಂಬ ಮಾನಸಿಕ ರೋಗದ ಎಳೆಯನ್ನು ಆಧಾರಿಸಿ 'ವಿಕಲ್ಪ' ಸಿನಿಮಾವನ್ನು ಮಾಡಲಾಗಿದೆ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿರುವ ಭ್ರಮೆ ಮತ್ತು ವಾಸ್ತವದ ನಡುವಿಣ ಚಿತ್ರಣ ಈ ಚಿತ್ರದಲ್ಲಿದೆ. ವೈಜ್ಞಾನಿಕ ಅಂಶಗಳನ್ನು ಆಧರಿಸಿ, ತಜ್ಞರ ಸಲಹೆಯ ಮೇರೆಗೆ ಈ ಚಿತ್ರದ ಪಾತ್ರಗಳನ್ನು ಹೆಣೆದು, ಸನ್ನಿವೇಶಗಳನ್ನು ಚಿತ್ರಿಸಿದ್ದೇವೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ-ತಲ್ಲಣಗಳನ್ನು ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ' ಎಂದರು.

'ವಿಕಲ್ಪ' ಚಿತ್ರದ ನಾಯಕಿ ನಾಗಶ್ರೀ ಹೆಬ್ಬಾರ್ ಮಾತನಾಡಿ, 'ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನನಗೆ ಇದು ಮೊದಲ ಚಿತ್ರ. ಇದರಲ್ಲಿ ನಾನು ಸಮುದ್ಯತಾ ಎಂಬ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದೇನೆ. ಮನಸ್ಸಿನೊಳಗೆ ಸಾಕಷ್ಟು ತಲ್ಲಣಗಳನ್ನು ಹೊತ್ತುಕೊಂಡಿದ್ದರೂ, ಅದನ್ನು ಎಲ್ಲೂ ಅತಿಯಾಗಿ ತೋರಿಸಿಕೊಳ್ಳದೆ ಗಂಭೀರವಾಗಿ ಇರುವಂಥ ಪಾತ್ರ. 'ವಿಕಲ್ಪ' ಚಿತ್ರದ ಕಥೆ ಮತ್ತು ನನ್ನ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಎಲ್ಲ ಕಡೆಗಳಿಂದಲೂ 'ವಿಕಲ್ಪ'ಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದರು.





