ಕಥೆ - ಶೈಲಾ ಎಸ್. ವಾಲಿ
ಹಿರಿಯರ ಆಸೆಯಂತೆ ಮನೋಜನ ಕೈ ಹಿಡಿದ ಶ್ವೇತಾ, ಈ ಮದುವೆ ಅವನಿಗೆ ಒಲ್ಲದ ಔತಣವೆಂದು ಅರಿತಳು. ತಾನು ಪ್ರೇಮಿಸಿದ್ದ ಹುಡುಗಿ ತನಗೆ ಕೈ ಕೊಟ್ಟಾಗ, ಮುಂದೆ ಮನೋಜನ ನಿರ್ಧಾರ ಏನಾಗಿತ್ತು......?
ಶ್ವೇತಾ ಹಾಲಿನ ಗ್ಲಾಸ್ ಹಿಡಿದು ಪ್ರಸ್ತದ ಕೋಣೆಗೆ ಹೋಗುತ್ತಲೇ ಬಾಗಿಲು ಹಾಕಿ ಹೊರಗಿನಿಂದ ಚಿಲಕ ಹಾಕಿದ ಅವಳ ಗೆಳತಿಯರು, ``ಶ್ವೇತಾ, ಬೆಳಗ್ಗೆ ನಾವು ಬಂದು ಚಿಲಕ ತೆಗೆಯುವವರೆಗೂ ನೀವು ಒಳಗೆ ಬಂಧಿ ಆಗಿರಬೇಕು....'' ಎಂದು ನಗುತ್ತಾ ಹೇಳಿ ಹೋದರು.
ಮನೋಜ್ ಕುಳಿತಿದ್ದ ಮಂಚದ ಬಳಿ ನಾಚುತ್ತಲೇ ಬಂದಳು. ಆದರೆ ಕಣ್ಣೆತ್ತಿ ಸಹ ನೋಡದ ಮನೋಜ್ ನನ್ನು ಕಂಡು ಶ್ವೇತಾಳಿಗೆ ಏನೋ ಒಂದು ರೀತಿಯ ಸಂಕೋಚ ಹಾಗೂ ಹೆದರಿಕೆಯಿಂದಲೇ ಟೀಪಾಯ್ ಮೇಲೆ ಹಾಲಿನ ಗ್ಲಾಸ್ ಇಟ್ಟು ಮಂಚದ ತುದಿಯಲ್ಲಿ ಕುಳಿತಳು.
ಆಗಲೂ ಸಹ ಅವಳ ಮುಖ ನೋಡದ ಮನೋಜ್, ಎದ್ದು ಹೋಗಿ ಕಿಟಕಿಗೆ ಮುಖ ಮಾಡಿ ನಿಂತ. ಶ್ವೇತಾ ಸಹ ಎದ್ದು ಹೋಗಿ ಮನೋಜ್ ನ ಪಕ್ಕದಲ್ಲಿ ನಿಂತಳು.
``ಶ್ವೇತಾ, ನಿಮ್ಹತ್ರ ನಾನು ಒಂದು ವಿಷಯ ಹೇಳಬೇಕು. ಇದನ್ನು ನೀವು ಯಾವ ರೀತಿ ತಗೋಳ್ತೀರಾ ಅಂತ ಗೊತ್ತಿಲ್ಲ. ಆದರೆ ನಾನೀಗ ಹೇಳಲೇಬೇಕಾಗಿದೆ. ಶ್ವೇತಾ, ಬೇಸರ ಮಾಡ್ಕೋಬೇಡಿ..... ನನಗೆ ಈ ಮದುವೆ ಇಷ್ಟ ಇರಲಿಲ್ಲ..... ನಾನು ಬೇರೆ ಒಬ್ಬಳನ್ನು ಪ್ರೀತಿಸ್ತಾ ಇದ್ದೀನಿ.... ನಮ್ಮ ಮನೆಯವರ ಒತ್ತಾಯಕ್ಕೆ ಮಣಿದು ನಿಮ್ಮನ್ನು ಮದುವೆ ಆಗಿದ್ದು. ಅವಳನ್ನು ಮರೆತು ನಿಮ್ಮೊಂದಿಗೆ ಸಂಸಾರ ಮಾಡೋಕೆ ನನ್ನಿಂದ ಸಾಧ್ಯವಿಲ್ಲ.
``ಇನ್ನೊಂದು ಆರು ತಿಂಗಳು ಹೇಗಾದರೂ ಮ್ಯಾನೇಜ್ ಮಾಡಿ. ಆಮೇಲೆ ನಾನು ಡೈವೋರ್ಸ್ ಗೆ ಅಪ್ಲಿಕೇಶನ್ ಹಾಕ್ತೀನಿ.... ನೀವು ಸಹ ಬೇರೆಯವರ ಜೊತೆಗೆ ಮದುವೆ ಆಗಿ ಸಂತೋಷವಾಗಿರಿ. ಈ ಒಂದು ಆರು ತಿಂಗಳವರೆಗೂ ನನಗೆ ತಕ್ಕಂತೆ ಸಹಕರಿಸಿ,'' ಎಂದು ಹೇಳಿ ಕೆಳಗೆ ದಿಂಬು ಹಾಗೂ ಬ್ಲಾಂಕೆಟ್ ಹಾಸಿಕೊಂಡು ಮಲಗಿದ.
ಪಾಪ, ನೂರಾರು ಸುಂದರ ಕನಸು ಕಂಡಿದ್ದ ಶ್ವೇತಾಳ ಕಣ್ಣಿಂದ ನೀರು ಸುರಿಯುವ ಹಾಗಾಯಿತು. ಶ್ವೇತಾ ಎಂಎಸ್ಸಿ ಗ್ರ್ಯಾಜುಯೇಟ್. ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ಬೇಕಾದಷ್ಟು ಆಸ್ತಿ ಇದ್ದರೂ ಕೊಂಚ ಸೊಕ್ಕು, ಅಹಂಕಾರ ಇಲ್ಲದ ಚೆಲುವೆ. ತನ್ನ ತಂದೆಯ ಆಸೆಯಂತೆ ಅವರ ಫ್ರೆಂಡ್ ಮಗ ಮನೋಜ್ ಜೊತೆಗೆ ಹಸೆಮಣೆ ಏರಿದ್ದ ಮುಗ್ಧೆ.....ತಂದೆಯ ಮುದ್ದಿನ ಮಗಳು. ಅವರ ಮನಸ್ಸಿಗೆ ನೋವು ಉಂಟು ಮಾಡಬಾರದು ಎಂಬ ಒಂದೇ ಉದ್ದೇಶದಿಂದ ಹಿಂದು ಮುಂದು ವಿಚಾರ ಮಾಡದೇ ಮದುವೆಗೆ ಒಪ್ಪಿಗೆ ನೀಡಿದ್ದಳು.
ಮದುವೆಗೂ ಮುನ್ನ ಮನೋಜ್ ಶ್ವೇತಾಳನ್ನು ಭೇಟಿ ಆಗೋಕೆ ಬಂದಾಗ ಈ ವಿಷಯವನ್ನೆಲ್ಲ ಹೇಳಿ ಹೇಗಾದ್ರೂ ಮದುವೆಯನ್ನು ರದ್ದು ಪಡಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದ, ಆದರೆ ಸಾಧ್ಯವಾಗಿರಲಿಲ್ಲ. ಏಕೆಂದರೆ ಶ್ವೇತಾ ಮನೆಯವರ ಸಂತೋಷ, ಅವನಿಗೆ ನೀಡಿದ ಆತಿಥ್ಯ ಮನೋಜ್ ನನ್ನು ಕಟ್ಟಿ ಹಾಕಿತ್ತು. ಕೊನೆಗೂ ಏನೂ ಹೇಳಲಾಗದೆ ಹಾಗೇ ಹೋಗಿದ್ದ.





