ಕಥೆ - ಶೇಖರಗೌಡ ವೀ.ಸ.
ವೃತ್ತಿ ಧರ್ಮಕ್ಕೆ ಅನುಸಾರವಾಗಿ ರೋಹನ್ ಹಳ್ಳಿಯ ಯಾವ ಮನೆಗೆ ಬಂದಿದ್ದನೋ, ಮುಂದೆ ಆ ಮನೆಯ ಕೌಟುಂಬಿಕ ಸದಸ್ಯನಾದದ್ದು ಹೇಗೆ......?
``ಪಪ್ಪಾ... ತಮ್ಮ ಪಾಪು ಮುದ್ದು ಮುದ್ದಾಗಿ ಅದೆಷ್ಟು ಕ್ಯೂಟ್ ಆಗಿದ್ದಾನೆ ಅಲ್ವಾ.....? ರಿಯಲೀ ಸೂಪರ್!'' ಅಮ್ಮನ ಜೊತೆಗಿದ್ದ ಮುತ್ತಾತ, ತಾತ, ಮುತ್ತಜ್ಜಿ, ಅಜ್ಜಿಯರು ಮತ್ತು ಅಮ್ಮನ ಮನೆಯ ಬಳಗದವರೆಲ್ಲರನ್ನು ಕಂಡು ಸುರಕ್ಷಿತಾಳಿಗೆ ಹಿಡಿಸಲಾರದಷ್ಟು ಹಿಗ್ಗಾಗಿತ್ತು. ಅವರೆಲ್ಲರ ಸಂತೋಷದ ಮುಖಗಳನ್ನು ದಿಟ್ಟಿಸತೊಡಗಿದ್ದ ರೋಹನನ ಮನಸ್ಸು ಎಲ್ಲೋ ಕಳೆದು ಹೋಗತೊಡಗಿತು.
ರಾಜ್ಯದ ಪ್ರಸಿದ್ಧ ದೂರದರ್ಶನ ವಾಹಿನಿಯ `ಮನೆ ಮನೆಗೆ ಭಾಗ್ಯಲಕ್ಷ್ಮಿ' ಎಂಬ ನೂತನ ಕಾರ್ಯಕ್ರಮವೊಂದನ್ನು ನಿರೂಪಿಸುವ ಜವಾಬ್ದಾರಿ ಯುವ ನಿರೂಪಕ ರೋಹನ್ ನ ಪಾಲಿಗೆ ಬಂದಿತ್ತು. ರೋಹನ್ ಇಪ್ಪತ್ತೆಂಟರ ಹರೆಯದ ಸ್ಛುರದ್ರೂಪಿ ಉತ್ಸಾಹಿ ತರುಣ. ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ಹೋಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ನಿರೂಪಿಸಿ, ನಾಡಿನ ಜನತೆಯ ಹೃದಯಗಳನ್ನು ಗೆದ್ದಿರುವ ಖ್ಯಾತಿ ಅವನಿಗಿದೆ.
ಈ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಕೂಡು ಕುಟುಂಬಗಳನ್ನು ಗುರುತಿಸಿ ಅಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು ರೋಹನ್ ನ ಕೆಲಸವಾಗಿತ್ತು. ಈ ಬಾರಿ ರೋಹನ್ ಅಂತಹದೊಂದು ಅವಿಭಕ್ತ ಕುಟುಂಬವನ್ನು ಹುಡುಕಿದ್ದು ಮಲೆನಾಡಿನ ಸೆರಗಿನ ಅಂಚಿನಲ್ಲಿರುವ ಕಲಘಟಗಿಗೆ ಕೇವಲ ಐದು ಕಿ.ಮೀ. ದೂರದ ಗ್ರಾಮ ಶಿವಳ್ಳಿಯಲ್ಲಿ. ಮುಂಗಾರು ಮಳೆಯ ಸವಿಯುಂಡ ಭೂದೇವಿ ಹಸಿರು ಪತ್ತಲವನ್ನು ಉಟ್ಟುಕೊಂಡು ಬೀಗುತ್ತಿದ್ದಳು. ಐದಾರು ನೂರು ಮನೆಗಳ ಚಿಕ್ಕ ಊರು ಶಿವಳ್ಳಿ. ರೋಹನನಿಗೆ ಶಿವಳ್ಳಿ ಸುಂದರ ತಾಣ ಎಂದು ಅನಿಸಿತ್ತು. ಮಹಾದೇಪ್ಪ ಸಾಹುಕಾರ ಮೆಣಸಿನಕಾಯಿ ಎಂಬುವರ ಕೂಡು ಕುಟುಂಬ ರೋಹನನ ಮನ ಸೆಳೆದಿತ್ತು. ಅವರ ಕುಟುಂಬದಲ್ಲಿ ಸುಮಾರು ಎಪ್ಪತ್ತೈದು ಜನ ಸದಸ್ಯರಿದ್ದರು.
ಎಂಬತ್ತರ ವಯಸ್ಸಿನ ಮಹಾದೇವಪ್ಪ ಮತ್ತು ಎಪ್ಪತ್ತೈದರ ಚೆನ್ನಮ್ಮ ದಂಪತಿಯರಿಗೆ ಐದು ಜನ ಗಂಡು, ಮೂರು ಹೆಣ್ಣು ಮಕ್ಕಳು, ಮೊದಲನೆಯದು ಗಂಡು ಮಗು ನಂತರ ಇಬ್ಬರು ಹೆಣ್ಣುಮಕ್ಕಳು, ನಂತರ ಮೂರು ಗಂಡು ಮಕ್ಕಳು, ನಂತರ ಹೆಣ್ಣು ಮಗು, ನಂತರ ಕೊನೆಯವನು ಗಂಡು ಮಗ. ಹಿರಿ ಮಗನಿಗೆ ಅರವತ್ತು ವರ್ಷವಾಗಿದ್ದರೆ ಕಿರಿ ಮಗನಿಗೆ ನಲವತ್ತೈದು ವರ್ಷ ವಯಸ್ಸು. ಒಟ್ಟು ಐವತ್ತೈದು ಜನ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳಿದ್ದರು. ಅದರಲ್ಲಿ ನಲವತ್ತಾರು ಮೊಮ್ಮಕ್ಕಳು ಮತ್ತು ಒಂಬತ್ತು ಮರಿ ಮೊಮ್ಮಕ್ಕಳು. ಊರಿಗೆ ಹೊತ್ತಿಕೊಂಡಿರುವ, ಒಂದೇ ಹಾಸಿಗೆಯಲ್ಲಿರುವ ನಲವತ್ತು ಎಕರೆ ಜಮೀನಿನಲ್ಲಿಯೇ ದೊಡ್ಡದೊಂದು ಮನೆಯನ್ನು ಕಟ್ಟಿಸಿಕೊಂಡು ಅದರಲ್ಲಿ ವಾಸಿಸುತ್ತಿದೆ ಈ ಕೂಡು ಕುಟುಂಬ. ಈಗ್ಗೆ ಮೂವತ್ತು ವರ್ಷಗಳ ಹಿಂದೆಯೇ ಊರಿನಲ್ಲಿದ್ದ ಚಿಕ್ಕ ಮನೆಯಿಂದ ಜಮೀನಿನಲ್ಲಿರುವ ಈ ದೊಡ್ಡ ಮನೆಗೆ ಸ್ಥಳಾಂತರವಾಗಿತ್ತು ಈ ಕುಟುಂಬ.
ಹೆಣ್ಣುಮಕ್ಕಳ ಗಂಡಂದಿರೂ ಸಹ ಇವರೊಂದಿಗೆ ಸಹಜೀವನದಲ್ಲಿರುವುದು ಈ ಕೂಡು ಕುಟುಂಬದ ವಿಶೇಷತೆ. ಮಹಾದೇವಪ್ಪ ಚೆನ್ನಮ್ಮ ದಂಪತಿಯರಿಗೆ ಮಗ ಅಳಿಯ, ಮಗಳು ಸೊಸೆ ಎಂಬ ಭೇದ ಭಾವವಿರಲಿಲ್ಲ. ಎಲ್ಲರೂ ಮನೆ ಮಕ್ಕಳು ಎಂಬಂತಿದ್ದರು.





