ಕಥೆ - ಅನಿತಾ ಹೆಗಡೆ
ಹೊಸದಾಗಿ ಮದುವೆಯಾಗಿದ್ದ ರಾಘವಿಗೆ ತನ್ನ ವೈವಾಹಿಕ ಜೀವನ ಕುರಿತಾಗಿ ನೂರಾರು ಹೊಂಗನಸು ಮೂಡಿತ್ತು. ಆ ಕನಸು ನನಸಾಗಲೆಂದು ಪತಿ ಅಮಿತ್ ನೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆದಳು.......!
`ಕನಸ ಕುದುರೆಯನೇರಿ ಸಪ್ತ ಸಾಗರದಾಚೆ ಹಾರಲೇ ನಿನ್ನೊಂದಿಗೆ.....!
ಬಳಿ ನಿಂತ ನಿನ್ನೊಂದಿಗೆ ನನ್ನ ಕೈಯ ಬೆಸೆಯಲೇ?
ಒಳಗೊಳಗೇ ನಾಚುತ್ತಾ ನಿನ್ನೆಡೆಗೆ ಕುಡಿನೋಟ ಬೀರಲೇ....?' ಅವನನ್ನೇ ನೋಡುತ್ತಿದ್ದ ರಾಘವಿಯ ಮನದೊಳಗಿನ ಸಾಲುಗಳು ಹೀಗೆ ಸಾಗಿತ್ತು.
``ಓಯ್ ಏನಾಯ್ತು....? ಎಲ್ಲೋ ಕಳೆದೋಗಿದೀಯಾ....? ಹಳೆ ಪ್ರೇಮಿಯ ನೆನಪಲ್ಲಿ ಅಲ್ಲ ತಾನೇ....?'' ಅವಳತ್ತಲೇ ದಿಟ್ಟಿಸಿ ತುಂಟ ನಗೆಯೊಂದಿಗೆ ಪ್ರಶ್ನಿಸಿದವನ ಮಾತು ಅವಳನ್ನು ಎಚ್ಚರಿಸಿತು. ಏನೂ ಇಲ್ಲ ಎಂಬಂತೆ ಕತ್ತು ಅಲ್ಲಾಡಿಸಿದವಳ ನೋಟ ಬಾಗಿತ್ತು
`ಅವನ ಸಪ್ತಸಾಗರಕೆ ನನ್ನನ್ನು ಜೊತೆಯಾಗಿ ಕರೆದೊಯ್ಯುವನೇ....?
ನಾ ಬೆಸೆದ ಕೈಗೆ ಪ್ರತಿಯಾಗಿ ಬೆಸೆವುದೇ ಅವನ ಕೈ?
ನನ್ನ ನೋಟಕ್ಕೆ ಉತ್ತರವಾಗಿ ಒಲುಮೆಯ ಸೂಸುವವೇ ಅವನ ಕಂಗಳು.....?
ನನ್ನೆದೆ ಬಡಿತಕ್ಕೆ ತಾಳವಾಗಿ ಅನೆದೆಯು ಮಿಡಿವುದೇ....?' ಈಗ ಇನ್ನೊಂದು ತೆರನಾಗಿ ಓಡಿತ್ತು ರಾಘವಿಯ ಮನಸ್ಸು.
ದೇವಸ್ಥಾನದ ಕಡೆ ಹೊರಟಿತ್ತು ಹೊಸ ವಧೂವರರ ಜೋಡಿ.
``ರಾಘವಿ....'' ಮುಗಿದ ಕೈಯಿಂದಲೇ ಅವಳನ್ನು ಮೆಲುವಾಗಿ ತಿವಿದ ಅಮಿತ್.
``ಏನು....'' ಎಂಬಂತೆ ಹುಬ್ಬು ಸಂಕುಚಿಸಿ ಅವನೆಡೆಗೊಂದು ನೋಟ ಹರಿಸಿದಳು. ಅವಳ ಕಲ್ಪನಾ ಲೋಕಕ್ಕೆ ಚ್ಯುತಿಯಾಯಿತೇನೋ....?
`ಪಕ್ಕದಲ್ಲಿ ಅವಳ ಗಂಡ ನಾನಿದ್ದೀನೀ ಅನ್ನೋದನ್ನೂ ಮರೆತು ಕಳೆದುಹೋಗಿದ್ದ ಇವಳು, ಈಗ ನೋಡಿದ್ರೆ ನನ್ನನ್ನೇ ಗುರಾಯಿಸ್ತಿದ್ದಾಳೆ......!' ಎಂದು ಮನದಲ್ಲೇ ಹೇಳಿಕೊಂಡ ಅಮಿತ್ ಮತ್ತೆ ದೇವರ ಕಡೆಗೆ ಮುಖ ಮಾಡಿ ನಿಂತ.
ಇವಳದ್ದು ಮತ್ತೆ ಶುರುವಾಯಿತು....`ನನ್ನಂತೆ ಅವನು, ಅವನಂತೆ ನಾನು. ಬೆಸೆದ ಕೈಗಿಲ್ಲ ಯಾವುದೇ ಅಡೆತಡೆ. ತುಟಿಯಂಚು ಹಸಿಯಾಗಿ, ಕಣ್ಣಂಚು ಗೆಲುವಾಗಿ, ನಿಂತ ನೀರಂಥ ಬದುಕು.....' ಕೊನೆಯ ಸಾಲು ತಲೆಯಲ್ಲಿ ಮೂಡಿದಾಗ ಥಟ್ಟನೆ ನಿಂತಿತು ರಾಘವಿಯ ಲಹರಿ.
`ನಿಂತ ನೀರಾದರೆ ಬದುಕುವ ಗತಿ ಎಂತು? ಹರಿವ ನೀರ ಸ್ವಚ್ಛಂದತೆ ಇರಲಾರದಲ್ಲ.....! ಹಾಗಂತ ನಮ್ಮ ಬಾಳಲ್ಲಿ ಸೀರಿಯಲ್ ನಂತೆ ಬರೀ ಸಮಸ್ಯೆಯೇ ಇರಬೇಕೇ....? ಅಯ್ಯೋ..... ಇದಕ್ಕೆಲ್ಲ ದೇವರು ಅಸ್ತು ಅಂದುಬಿಟ್ರೆ....' ಎಂದು ತಡವರಿಸಿ, ತಡೆಯಿಲ್ಲದೇ ಸಾಗಿದ್ದ ಹುಚ್ಚು ಯೋಚನೆಗಳಿಗೆ ತಲೆಕೊಡವಿ, `ತಪ್ಪಾಯಿತು.... ತಪ್ಪಾಯಿತು. ದೇವರೇ ಕ್ಷಮಿಸು, ಅಮ್ಮ ತಾಯೇ ಮಾತೇ, ನನ್ನ ಮಾತನ್ನು ಹಿಂತೆಗೆದು, ನಮ್ಮಿಬ್ಬರ ಬಾಳನ್ನು ಹಸನಾಗಿಸು. ನಮ್ಮಿಬ್ಬರ ಬಂಧ ಗಟ್ಟಿಯಾಗಿ ನೂರ್ಕಾಲ ಖುಷಿಯಾಗಿ ಬಾಳುವಂತೆ ಹರಸು,' ಎಂದು ತನ್ನ ಕೆನ್ನೆಗೆ ತಪ್ಪಾಯಿತು ಎಂಬಂತೆ ಎರಡು ಬಾರಿ ಬಡಿದುಕೊಂಡು ಕೈಯೆತ್ತಿ ಮುಗಿದಳು.
ಓರೆಗಣ್ಣಿನಲ್ಲಿಯೇ ಅವಳೆಡೆ ನೋಡಿದವನಿಗೆ ಅವಳ ನಡೆ ವಿಚಿತ್ರವೆನಿಸಿತು. ಈಗಷ್ಟೇ ತನ್ನಷ್ಟಕ್ಕೆ ತಾನೇ ಯೋಚಿಸುತ್ತಿದ್ದವಳಿಗೆ ಇದ್ದಕ್ಕಿದ್ದಂತೆ ಏನಾಯ್ತು ಎಂದು ಅವನಿಗೆ ತಿಳಿಯಲಿಲ್ಲ.
ಅವಳು ದೇವರೊಂದಿಗೆ ಕೊಟ್ಟು ತೆಗೆದುಕೊಳ್ಳುವ ನೇರ ಮಾತುಕತೆಯಲ್ಲಿದ್ದಾಳೆ ಎಂದು ಅವನಿಗೇನು ಗೊತ್ತು?
``ರಾಘವೀ....'' ಮತ್ತೆ ಎಚ್ಚರಿಸಿದ.
``ಹ್ಞಾಂ......'' ಎನ್ನುತ್ತ ಅವನೆಡೆಗೆ ತಿರುಗಿದಳು.
``ಆರ್ ಯು ಓಕೆ....?'' ಕಾಳಜಿ ಮಿಶ್ರಿತ ಆತಂಕದಿಂದ ಕೇಳಿದ.
``ಹ್ಞೂಂ.... ಹ್ಞೂಂ.....'' ಎಂದು ತಲೆಯಾಡಿಸಿದಳು.





