ಕಥೆ - ಭೋಜರಾಜ ಸೊಪ್ಪಿಮಠ
ಒಬ್ಬಳೇ ಮಗಳೆಂದು ಪದ್ಮನಾಭ, ತಾಯಿಯಿಲ್ಲದ ನೀತಾಳನ್ನು ಅತಿ ಮುದ್ದಿನಿಂದ ಸಾಕಿ ಬೆಳೆಸಿದ್ದ. ತಾನಂದುಕೊಂಡಿದ್ದೇ ಸರಿ, ಎನ್ನುವ ಹಠಮಾರಿ ಸ್ವಭಾವದ ನೀತಾ ಮುಂದೆ ತಂದೆಗೆ ಮಾಡಿದ್ದೇನು........?
``ನಿನ್ನ ಸಾಯಿಸಿ ಬಿಡ್ತೀನಿ!'' ಮನೆಯೇ ಮಾರ್ದನಿಸುವಂತೆ ಪದ್ಮನಾಭ ಜೋರಾಗಿ ಕೂಗಿದ.
``ಡ್ಯಾಡಿ, ನೀವು ಹಾಗೆಲ್ಲಾ ಮಾತನಾಡಬಾರದು. ಅಷ್ಟಕ್ಕೂ ನೀವು ಪ್ರಶಾಂತ್ ನನ್ನು ಸಾಯಿಸುವಂತಹ ಕೆಲಸ ಅವನೇನು ಮಾಡಿದ?'' ಅಷ್ಟೇ ಜೋರಾಗಿ ನೀತಾ ಅಬ್ಬರಿಸಿದಳು.
``ಮಧ್ಯ ಮಾತನಾಡಬೇಡ ನೀನು. ನಿನ್ನಿಂದೇ ಇದೆಲ್ಲಾ ಆಗಿರೋದು.... ನೀನು ಸರಿಯಾಗಿದ್ದರೆ ಈ ಸಂದರ್ಭವೇ ಬರುತ್ತಿರಲಿಲ್ಲ....'' ಪದ್ಮನಾಭ ನೀತಾಳನ್ನು ಗದರಿದ.
``ಹೌದು ಡ್ಯಾಡಿ, ಇದೆಲ್ಲಾ ನನ್ನಿಂದಲೇ ಆಗಿರೋದು. ನಾನು ಪ್ರಶಾಂತನನ್ನು ಪ್ರೀತಿಸ್ತಿದ್ದೀನಿ. ಅವನೂ ಕೂಡ ನನ್ನನ್ನು ಪ್ರೀತಿಸ್ತಿದ್ದಾನೆ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಮದುವೆ ಕೂಡ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ಹಿರಿಯರಾದ ನೀವು ನಮ್ಮನ್ನು ಅರ್ಥ ಮಾಡಿಕೊಂಡು ಆಶೀರ್ವಾದ ಮಾಡಿ. ಬೇಡವೆಂದರೆ ನಮ್ಮಷ್ಟಕ್ಕೆ ನಮ್ಮನ್ನು ಇರಲು ಬಿಡಿ. ಅದು ಬಿಟ್ಟು ಸಾಯಿಸ್ತೀನಿ ಅಂದರೆ ಸರಿ ಇರಲ್ಲ.....'' ನೀತಾ ಕಟುವಾಗಿ ಹೇಳಿದಳು.
``ಅದೇನು ನೋಡಿ ನೀನು ಇವನನ್ನು ಪ್ರೀತಿಸ್ತಿದ್ದೀಯಾ...? ಇವನು ಸರಿ ಇಲ್ಲ. ಇವನ್ಯಾರು..... ಇವನ ಫ್ಯಾಮಿಲಿ ಎಂಥದ್ದು....? ಎಲ್ಲಾ ನನಗೆ ಗೊತ್ತು. ದುಡ್ದಿನ ಆಸೆಗೆ ಎಂತಹ ಹೀನಾಯ ಕಾರ್ಯ ಬೇಕಾದರೂ ಮಾಡಲು ಹಿಂಜರಿಯದ ನೀಚ ಇವನು. ಬರೀ ಇವನಲ್ಲ, ಇವನ ಫ್ಯಾಮಿಲಿಯೇ ಅಂತಹದ್ದು. ಇವನನ್ನು ಮರೆತುಬಿಡು. ಸುಮ್ಮನೆ ನಾನು ಹೇಳಿದಂತೆ ಕೇಳು. ನಿನ್ನ ಜೀವನ ಒಳ್ಳೆಯದಾಗುತ್ತೆ,'' ಪದ್ಮನಾಭ ಮಗಳ ಮುಂದೆ ಗೋಗರೆಯುತ್ತಿದ್ದ.
``ನೋಡಿ ಸರ್, ನಿಮಗೆ ನಾನು ಬೇಡವಾಗಿದ್ದರೆ ನನ್ನ ಬಗ್ಗೆ ಮಾತ್ರ ಮಾತನಾಡಿ. ನನ್ನ ಫ್ಯಾಮಿಲಿಯವರೆಲ್ಲಾ ಅಯೋಗ್ಯರು ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದೀರಲ್ಲ. ಇದನ್ನು ನಾನು ಸಹಿಸೋಲ್ಲ.....'' ಈ ಬಾರಿ ಪ್ರಶಾಂತ್ ಪದ್ಮನಾಭನ ಮಾತನ್ನು ವಿರೋಧಿಸಿದ.
``ನಿನ್ನ ಬಾಯಲ್ಲಿಯೇ ಆ ಮಾತು ಬಂತಲ್ಲ..... ನೀವೆಲ್ಲರೂ ಅಯೋಗ್ಯರು! ನನ್ನ ಮಗಳಿಗೆ ಪ್ರೀತಿ, ಪ್ರೇಮ ಅಂತೆಲ್ಲಾ ತಲೆ ಕೆಡಿಸಿ ನನ್ನ ಆಸ್ತಿಯನ್ನು ಹೊಡೋ ಪ್ಲಾನ್ ನಿನ್ನದು. ನನ್ನ ಮಗಳ ಮೂಲಕ ನಾನು ಒಪ್ಪುವಂತೆ ಮಾಡಿ, ಅವಳ ಬಾಳು ಹಾಳು ಮಾಡುದೊಂದೇ ನಿನ್ನ ಗುರಿ. ನೀನೆಂಥ ಹಲ್ಕಾ ಅಂತ ನನಗೆ ಗೊತ್ತು. ನನ್ನ ಮನೆಯ ಹೊಸ್ತಿಲು ದಾಟಿ ಬರುವ ಯೋಗ್ಯತೆಯೂ ನಿನಗಿಲ್ಲ. ತೊಲಗಾಚೆ ನಾಯಿ,'' ಪದ್ಮನಾಭ ಮತ್ತೆ ಕಿರುಚಿದ.
``ತಪ್ಪು ಮಾಡ್ತಿದ್ದೀರಾ ಸರ್ ನೀವು, ನನಗೆ ನೀತಾ ಇಷ್ಟ ಆದಳು. ಪ್ರಪೋಸ್ ಮಾಡಿದೆ. ಅದಕ್ಕೆ ಅವಳೂ ಒಪ್ಪಿಕೊಂಡಳು. ಇದರಲ್ಲಿ ತಪ್ಪೇನಿದೆ....? ನಾನೇನು ನಿಮ್ಮ ಆಸ್ತಿ ನೋಡಿದ ಮೇಲೆ ಪ್ರೀತಿಸಿದ್ದೀನಾ....?
``ನೀತಾಳನ್ನು ಪ್ರೀತಿಸಿದ ಮೇಲೆಯೇ ನಿಮ್ಮನ್ನೂ, ನಿಮ್ಮ ಮನೆಯನ್ನೂ ನೋಡ್ತಿದ್ದೀನಿ. ಆದರೆ ನೀವು ನನ್ನೊಂದಿಗೆ ನಮ್ಮ ಮನೆಯವರನ್ನೂ ಅವಮಾನಿಸ್ತಿದ್ದೀರಿ. ಇದು ಸರಿಯಲ್ಲ,'' ಪ್ರಶಾಂತ್ ಕೋಪದಿಂದ ಹೇಳಿದ.
``ಡ್ಯಾಡಿ, ನಾವು ಸುಮ್ಮನಿದ್ದಂತೆ ನೀವು ಯಾಕೋ ಅತಿಯಾಗಿ ಮಾತನಾಡುತ್ತಿದ್ದೀರಿ. ಪ್ರಶಾಂತ್ ನಿಮಗೆ ತಪ್ಪಾಗಿ ಕಂಡಿರಬಹುದು. ಅದಕ್ಕೆ ಅವನ ಮನೆಯವರನ್ನು ಏಕೆ ಅವಮಾನ ಮಾಡ್ತಿದ್ದೀರಾ....?'' ನೀತಾ ಜೋರಾಗಿ ಕಿರುಚಿದಳು.





