ಕನ್ನಡ ಚಿತ್ರರಂಗದ ದಿಗ್ಗಜರುಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮತ್ತು ಅನಂತ್ ನಾಗ್ ಈ ಎಲ್ಲಾ ನಟರುಗಳ ನಡುವೆ ಒಂದು ಸಾಮ್ಯವಾದ ಅಂಶವಿದೆ ಎಂದರೆ ಅಶ್ವರ್ಯವಾಗುತ್ತದೆಯಲ್ಲವೇ? ಹೌದು ಎಲ್ಲಾ ನಟರುಗಳ ಹೆಮ್ಮೆಯ ಚಿತ್ರಗಳು ಇಲ್ಲವೇ ಅವರ ಮೊದಲ ಚಿತ್ರದ ಕಥೆಗಳು ಒಬ್ಬನೇ ಮಹಾನ್ ಲೇಖಕನ ಕಾದಂಬರಿಯನ್ನು ಆಧರಿದ್ದಾಗಿದೆ. ಹಾಗಾದರೇ ಆ ಮಹಾನ್ ಲೇಖಕರು ಯಾರು ಎಂದರೆ, ಅವರೇ, ನಮ್ಮೆಲ್ಲರ ಹೆಮ್ಮೆಯ ಲೇಖಕ ಶ್ರೀ ತಳುಕು ರಾಮಸ್ವಾಮಯ್ಯ ಸುಬ್ಬರಾಯ. ಎಲ್ಲರೂ ಅವರನ್ನು ಪ್ರೀತಿಯಿಂದ ತರಾಸು ಎಂದೇ ಕರೆಯುತ್ತಿದ್ದರು.
21 ಏಪ್ರಿಲ್ 1920 ರಂದು ಅಂದಿನ ಚಿತ್ರದುರ್ಗ ಜಿಲ್ಲೆಯ ಮಲೆಬೆನ್ನೂರು ಎಂಬ ಗ್ರಾಮದಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು ಶ್ರೀ ಸುಬ್ಬರಾಯರು. ಅವರ ಹಿರೀಕರು ಮೂಲತಃ ಆಂಧ್ರದಿಂದ ಕರ್ನಾಟಕಕ್ಕೆ ಬಂದವರಾದ್ದರಿಂದ ಮನೆಯ ಆಡು ಭಾಷೆ ತೆಲುಗು. ಆದರೆ ಕಲಿತದ್ದು ಮತ್ತು ಬರೆದದ್ದು ಎಲ್ಲವೂ ಕನ್ನಡವೇ. ಓದಿನಲ್ಲಿ ಎಷ್ಟು ಚುರುಕೋ ಹಾಗೆಯೇ ತುಂಟತನದಲ್ಲಿಯೂ ಒಂದು ಕೈ ಹೆಚ್ಚೇ ಎಂದರೂ ತಪ್ಪಾಗಲಾರದು. ಬಹುಶಃ ಮುಂದೇ ಸುಬ್ಬರಾಯರೇ ಬರೆದ, ಪುಟ್ಟಣ್ಣನವರು ನಿರ್ದೇಶಿಸಿದ ನಾಗರಹಾವು ಚಿತ್ರದ ವಿಷ್ಣುವರ್ಧನ್ ಅವರ ರಾಮಾಚಾರಿ ಪಾತ್ರ ಸುಬ್ಬರಾಯರ ಬಾಲ್ಯದ ತುಂಟತನ, ಹುಂಬತನ ಮತ್ತು ಛಲವಂತಿಕೆಯ ತದ್ರೂಪು ಎಂದರೂ ಅತಿಶಯೋಕ್ತಿಯೇನಲ್ಲ. ಅಂದೆಲ್ಲಾ ದೇಶಾದ್ಯಂತ ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಹಬ್ಬಿತ್ತು. ಗಾಂಧಿಯವರ ಸ್ವಾತಂತ್ರ ಚಳುವಳಿಯಿಂದ ಪ್ರೇರಿತರಾಗಿ ಲಕ್ಷಾಂತರ ಯುವಕರುಗಳು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುತ್ತಿದ್ದರು. ಅದಕ್ಕೆ ನಮ್ಮ ಸುಬ್ಬರಾಯರೂ ಹೊರತಾಗಿರಲಿಲ್ಲ. ತಮ್ಮ ಇಂಟರ್ ಮುಗಿಯುತ್ತಿದ್ದಂತೆಯೇ ಓದಿಗೆ ಸಲಾಂ ಹೇಳಿ, ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಸ್ವಪ್ರೇರಣೆಯಿಂದ ಧುಮುಕುತ್ತಾರೆ.

ಈ ಹೋರಾಟದ ಕಿಚ್ಚು ನಂತರ ನಾನಾ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕ ಏಕೀಕರಣದತ್ತ ತಿರುಗಿ ಏಕೀಕರಣದ ಪಿತಾಮಹಾ ಆಲೂರು ವೆಂಕಟರಾಯರು, ತಮ್ಮ ಗುರುಗಳಾದ ಅ.ನ.ಕೃಷ್ಣರಾಯರು, ಕನ್ನಡದ ಹೋರಾಟಗಾರರಾಗಿದ್ದ ಮ.ರಾಮಮೂರ್ತಿಗಳ ಜೊತೆಗೂಡಿ ರಾಜ್ಯಾದ್ಯಂತ ಸುತ್ತಾಡಿ ಕನ್ನಡಿಗರಲ್ಲಿ ಕನ್ನಡದ ಅಸ್ಮಿತೆ ಮತ್ತು ಕನ್ನಡಿಗರ ಒಗ್ಗೂಡಿಗೆಯ ಬಗ್ಗೆ ಜಾಗೃತಿ ಮೂಡಿಸಲು ಬಹಳಷ್ಟು ಶ್ರಮವಹಿಸುತ್ತಾರೆ.
ಇವೆಲ್ಲದರ ಮಧ್ಯೆಯೇ ತಮ್ಮ ಸಂಬಂಧಿಗಳೇ ಆಗಿದ್ದ ಅಂಬುಜ ಅವರನ್ನು ವರಿಸಿ ನಾಗಪ್ರಸಾದ್, ಪೂರ್ಣಿಮಾ ಮತ್ತು ಪ್ರದೀಪ ಎಂಬ ಮುದ್ದಾದ ಮೂರು ಮೂವರು ಮಕ್ಕಳ ತಂದೆಯೂ ಆಗುತ್ತಾರೆ. ತಮ್ಮ ಹೋರಾಟದ ನಡುವೆಯೂ ಮೈಸೂರಿನ ಯಾದವಗಿರಿಯಲ್ಲಿ ಗಿರಿಕನ್ಯಕಾ ಎಂಬ ಮನೆಯೊಂದನ್ನು ಕಟ್ಟಿಸಿ ಅಲ್ಲಿ ತಮ್ಮ ಸಂಸಾರವನ್ನಿರಿಸಿ ಯಥಾ ಪ್ರಕಾರ ಕನ್ನಡ ಪರ ಹೋರಾಟ, ಸಂಘಟನೆಗಳು ಮತ್ತು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಈ ರೀತಿಯ ಚಳುವಳಿಗಳು ಮತ್ತು ಜನರ ಪರ ಹೋರಾಟಗಳ ಮಧ್ಯೆಯೇ ಹಲವಾರು ಕಾದಂಬರಿಗಳನ್ನು ಬರೆಯುತ್ತಾರೆ. ಆರಂಭದಲ್ಲಿ ಅವರು ಹೆಚ್ಚಾಗಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದರೆ ನಂತರದ ದಿನಗಳಲ್ಲಿ ಅನೇಕ ಸಾಮಾಜಿಕ ಕಳಕಳಿಯ ವಿಷಯದ ಕಾದಂಬರಿಗಳತ್ತ ಹರಿಸುತ್ತಾರೆ ತಮ್ಮ ಚಿತ್ತ. ಇನ್ನೂ ವಿಶೇಷವೆಂದರೆ, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕಥೆಗಳೇ ಇಲ್ಲಾ ಎನ್ನುವ ಕೊರಗು ಈಗ ಇರುವಂತೆ ಅಂದೆಯೂ ಇತ್ತು. ಅಂತಹ ಒಳ್ಳೆಯ ಕಥೆಗಳ ಬರದ ಸಮಯದಲ್ಲಿ ತರಾಸು ಅವರ ಕಾದಂಬರಿಗಳು ಬಹುತೇಕ ಚಿತ್ರ ನಿರ್ದೇಶಕರುಗಳಿಗೆ ಚಿನ್ನದ ಗಣಿಯಂತೆ ಕಂಡು ಅವರ ಬಹುತೇಕ ಕಾದಂಬರಿಗಳು ಚಲನಚಿತ್ರವಾಗಿ ನಿರ್ದೇಶಕರಿಗೆ, ಕಲಾವಿದರಿಗೆ ಮತ್ತು ನಿರ್ಮಾಪಕರಿಗೆ ಒಳ್ಳೆಯ ಹೆಸರು ಮತ್ತು ಹಣ ಗಳಿಸಿ ಕೊಟ್ಟಿತೇ ಹೊರತು ತರಾಸು ಅವರಿಗೆ ಅದರಿಂದ ಹೆಚ್ಚಿನ ಲಾಭ ಸಿಗಲಿಲ್ಲವಾದರೂ ಅಂದಿಗೂ, ಇಂದಿಗೂ ಮತ್ತು ಮುಂದೆಂದಿಗೂ ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಹ ಸಾಹಿತ್ಯವನ್ನು ಕೊಟ್ಟಿರುವ ಹೆಗ್ಗಳಿಗೆ ತರಾಸು ಅವರದ್ದು ಎಂಬುದನ್ನು ಯಾರೂ ಅಲ್ಲಗಳಿಯಲು ಸಾಧ್ಯವಿಲ್ಲ.





