ಜೀ ಕನ್ನಡ ತನ್ನ ಪ್ರೇಕ್ಷಕರಿಗಾಗಿ 'ಹಳ್ಳಿ ಪವರ್ ರಿಲೋಡೆಡ್' ಎಂಬ ವಿನೂತನ ರಿಯಾಲಿಟಿ ಶೋವನ್ನು ಪರಿಚಯಿಸಲು ಸಜ್ಜಾಗಿದೆ.
ಗ್ರಾಮೀಣ ಕರ್ನಾಟಕದ ಸಂಸ್ಕೃತಿ, ಬದುಕಿನ ಸೊಗಡು ಮತ್ತು ಸವಾಲುಗಳನ್ನು ಪರಿಚಯಿಸುವ ಈ ಕಾರ್ಯಕ್ರಮವು ಆತ್ಮವಿಶ್ವಾಸ, ಒಗ್ಗಟ್ಟು ಹಾಗೂ ಜೀವನದ ಹೊಸ ಅನುಭವಗಳನ್ನು ಅನಾವರಣಗೊಳಿಸಲಿದೆ. ಆಗಸ್ಟ್ 8ರಿಂದ ಈ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ರಾತ್ರಿ 9:00 ಗಂಟೆಗೆ ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30 ಗಂಟೆಗೆ ಪ್ರಸಾರವಾಗಲಿದೆ.
ಕರ್ನಾಟಕದ ಪ್ರಸಿದ್ಧ ಮತ್ತು ಐತಿಹಾಸಿಕ ಸ್ಥಳವಾದ ಐಹೊಳೆಯ ಸುಂದರ ಪರಿಸರದಲ್ಲಿ ಹಳ್ಳಿ ಪವರ್ ರಿಲೋಡೆಡ್ ಶೂಟ್ ನಡೆಯಲಿದೆ. ಈ ಕಾರ್ಯಕ್ರಮವು ಸಿಟಿ ಜೀವನದ ಸೌಕರ್ಯಗಳನ್ನು ಸಂಪೂರ್ಣವಾಗಿ ತೊರೆದು, ಗ್ರಾಮೀಣ ಕರ್ನಾಟಕದ ನೈಜ ಬದುಕನ್ನು ಅನುಭವಿಸುವ ಅಪರೂಪದ ಅವಕಾಶವನ್ನು ಸ್ಪರ್ಧಿಗಳಿಗೆ ಒದಗಿಸುತ್ತದೆ.
ಈ ಸ್ಪರ್ಧಿಗಳಿಗೆ ಟೆಲಿವಿಷನ್, ಮೊಬೈಲ್, ಇಂಟರ್ನೆಟ್ ಸೇರಿದಂತೆ ಯಾವುದೇ ಐಷಾರಾಮಿ ಸೌಲಭ್ಯಗಳು ಸಿಗುವುದಿಲ್ಲ ಮತ್ತು ಹಳ್ಳಿಯ ಸರಳ ಜೀವನಕ್ಕೆ ಒಗ್ಗಬೇಕು ಹಾಗು ಕುಟುಂಬದವರಿಂದ ದೂರವಿರಬೇಕು. ಕೃಷಿ ಕೆಲಸ, ಜಾನುವಾರುಗಳ ಆರೈಕೆ, ಅಡುಗೆ, ಮನೆಯ ಜವಾಬ್ದಾರಿಗಳು, ಹಳ್ಳಿಯ ದಿನನಿತ್ಯದ ಕಠಿಣ ಕೆಲಸಗಳು... ಹೀಗೆ ಪ್ರತಿಯೊಂದು ಸವಾಲೂ ಸ್ಪರ್ಧಿಗಳ ದೈಹಿಕ ಸಾಮರ್ಥ್ಯ ಹಾಗು ಮಾನಸಿಕ ಸ್ತಿಮಿತತೆಯನ್ನು ಪರೀಕ್ಷಿಸಲಿದೆ.
ಅಷ್ಟೇ ಅಲ್ಲ, ಹಳ್ಳಿ ಬದುಕಿನಲ್ಲಿ ಎದುರಾಗುವ ಕಷ್ಟಕರ ಸವಾಲುಗಳನ್ನು ಎದುರಿಸುತ್ತಾ, ಮಾನಸಿಕ ಸ್ಥೈರ್ಯ, ಸಹಾನುಭೂತಿ, ತಾಳ್ಮೆ ಮತ್ತುಅವರು ಒಗ್ಗಟ್ಟು ಹೀಗೆ ಜೀವನದ ಮೌಲ್ಯಗಳನ್ನು ಇವರುಗಳು ಇಲ್ಲಿ ಅರಿತುಕೊಳ್ಳಲಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ಹೊಸ ಹೊಸ ಕೆಲಸಗಳನ್ನು ಕಲಿಯುತ್ತಾ, ಬಾಂಧವ್ಯಗಳನ್ನು ಬೆಳೆಸಿಕೊಳ್ಳುತ್ತಾ, ಸ್ಪರ್ಧಿಗಳು ತಮ್ಮ ನಗರ ಜೀವನಶೈಲಿಯನ್ನು ಮರೆತು ಹಳ್ಳಿ ಜೀವನದ ಅನುಭವವನ್ನು ಪಡೆದುಕೊಳ್ಳಲಿದ್ದಾರೆ. ಹಳ್ಳಿ ಸೊಗಡು, ಜೀವನದ ಸವಾಲುಗಳು ಹಾಗೂ ಅಮೂಲ್ಯ ಮಾನವೀಯ ಮೌಲ್ಯಗಳನ್ನು ಅನಾವರಣಗೊಳಿಸುವ ಈ ಪಯಣವು ವೀಕ್ಷಕರಿಗೂ ಮರೆಯಲಾಗದ ಅನುಭವವನ್ನು ನೀಡಲಿದೆ.
ಅಕುಲ್ ಬಾಲಾಜಿ ಅವರು ಹಳ್ಳಿ ಪವರ್ ಶೋ ನ ನಿರೂಪಣಾ ಜವಾಬ್ದಾರಿ ಹೊತ್ತಿದ್ದಾರೆ. ತಮ್ಮ ಹಾಸ್ಯಪ್ರಜ್ಞೆ, ನಿರೂಪಣಾ ಶೈಲಿ ಮತ್ತು ಆಕರ್ಷಕ ವ್ಯಕ್ತಿತ್ವದ ಮೂಲಕ ಈ ಶೋ ಗೆ ಅಕುಲ್ ಬಾಲಾಜಿ ಮತ್ತಷ್ಟು ರಂಗು ಮತ್ತು ಚೈತನ್ಯ ತುಂಬಲಿದ್ದಾರೆ. ಸ್ಪರ್ಧಿಗಳ ಪ್ರತಿಯೊಂದು ಸವಾಲಿನಲ್ಲೂ ಅವರಿಗೆ ಮಾರ್ಗದರ್ಶನ ನೀಡುತ್ತಾ, ಅವರ ಗೆಲುವಿನ ಕ್ಷಣಗಳನ್ನು ಸಂಭ್ರಮಿಸಿ, ಕಠಿಣ ಸಂದರ್ಭಗಳಲ್ಲಿ ಆತ್ಮವಿಶ್ವಾಸ ತುಂಬುತ್ತಾ, ತಮ್ಮ ಹಾಸ್ಯಪ್ರಜ್ಞೆ ಮೂಲಕ ಪ್ರತಿಯೊಂದು ಸಂಚಿಕೆಯನ್ನು ಇನ್ನಷ್ಟು ಮನರಂಜನಾತ್ಮಕವಾಗಿಸಲಿದ್ದಾರೆ. ಸ್ನೇಹ ಹೆಚ್, ಬಿಬಿ ಹಾಜಿರಾ, ಏಂಜೆಲೀನ್, ರಿಗ್ಮ್ಯಾ ರಾಜಶ್ರೀ, ದರ್ಶಿನಿ ಗೌಡ, ಪೂಜಾ ಚಂದ್ರಶೇಖರ್, ಅನಿಷಾ ಲಕ್ಷ್ಮಣ್, ಸುಷ್ಮಾ ತೊಗರೆ, ತೇಜಸ್ವಿನಿ, ಅಂಕಿತ ದೇವ್, ಪೂರ್ವಿಕ ಆರ್ ಕೆ, ಚಿತ್ರಶ್ರೀ, ಪೂರ್ವ ವೈ, ರಚನಾ, ನಿಖಿತಾ ಸ್ವಾಮಿ, ನಿವೇದಿತಾ ರೈ ಹೀಗೆ ಸಿಟಿ ಯಲ್ಲಿ ಬೆಳೆದ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಹೊಸ ಬದುಕಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ, ಸ್ಪರ್ಧಿಗಳ ನಡುವಿನ ಸ್ನೇಹ, ಎದುರಾಗುವ ಸವಾಲುಗಳು, ಗೆಲುವು-ಸೋಲು, ಆತ್ಮವಿಶ್ವಾಸ ಹಾಗೂ ಅವರ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಲಿದ್ದಾರೆ. 'ಹಳ್ಳಿ ಪವರ್' ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಗುರಿಯೊಂದಿಗೆ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿದ್ದು, ಅವರ ಈ ರೋಚಕ ಪಯಣ ಮನರಂಜನೆಯ ಜೊತೆಗೆ ಪ್ರೇಕ್ಷಕರಿಗೆ ಸ್ಫೂರ್ತಿಯನ್ನೂ ಸಹ ನೀಡಲಿದೆ.





