2 ಸಾವಿರ ವರ್ಷಗಳಷ್ಟು ಪುರಾತನವಾದ ಮಹಾರಾಷ್ಟ್ರದ ಪೈಠಣೀ ಸೀರೆಯನ್ನು `ಸೀರೆಗಳ ರಾಣಿ' ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬ ಮದುಮಗಳ ಬಳಿಯೂ ಈ ಸೀರೆ ಇರುವುದನ್ನು ನೋಡುತ್ತೇವೆ. ಪ್ರತಿಯೊಬ್ಬ ಮಹಿಳೆಗೂ ಇದು ಮೆಚ್ಚಿನ ಸೀರೆ. ಕಾಲ ಬದಲಾವಣೆಯ ಜೊತೆಗೆ ಇದರ ಬಣ್ಣ, ವಿನ್ಯಾಸಗಳೂ ಬದಲಾಗಿವೆ. ಆದರೂ ಸಹ ಈ ಸೀರೆಯು ತನ್ನ ಹಿಂದಿನ ಗೌರವ, ಮರ್ಯಾದೆಗಳನ್ನು ಉಳಿಸಿಕೊಂಡಿದೆ.
ನಮ್ಮಲ್ಲಿ ಮೈಸೂರು ಸಿಲ್ಕ್ಸ್, ಕೊಳ್ಳೇಗಾಲ, ಇಳಕಲ್ ಸೀರೆಗಳ ತರಹ ಪೈಠಣೀ ಸೀರೆಯ ಒಂದು ವೆರೈಟಿಯು ಔರಂಗಾಬಾದ್‌ನ ಪೈಠಣ್ ಪಟ್ಟಣದಲ್ಲಿ ತಯಾರಾಗುತ್ತದೆ. ಇದು ಕೈಮಗ್ಗದಿಂದ ನೇಯಲ್ಪಟ್ಟ `ಫೈನ್ ಸಿಲ್ಕ್' ಆಗಿದ್ದು, ಭಾರತದ ಒಂದು ಉತ್ತಮ ಬಗೆಯ ಸೀರೆ ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಂಚು ಮತ್ತು ಸೆರಗು ವಿಶೇಷ ಡಿಸೈನ್‌ಗೆ ಪ್ರಸಿದ್ಧವಾಗಿದೆ. ಇದರ ಸೆರಗಿನಲ್ಲಿ ಗಿಣಿ, ಮೈನಾ, ಹಂಸ, ನವಿಲು ಮುಂತಾದ ಡಿಸೈನ್‌ಗಳು ಬಗೆಬಗೆಯ ಆಕಾರದಲ್ಲಿ ಶೋಭಿಸುತ್ತವೆ.
ಇತರೆ ಸೀರೆಗಳಿಗಿಂತ ಪ್ರತ್ಯೇಕ
ಹಿಂದೆ ಈ ಸೀರೆಗಳಿಗೆ ಅಪ್ಪಟ ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ಬಳಸಲಾಗುತ್ತಿತ್ತು. 1 ಕಿಲೋ ಗ್ರಾಮ್ ಚಿನ್ನಕ್ಕೆ 1 ತೊಲ ತಾಮ್ರವನ್ನು ಸೇರಿಸಿ ಸೀರೆಯನ್ನು ನೇಯಲಾಗುತ್ತಿತ್ತು. `ನಾಲೀ' ಮತ್ತು `ಪಾಂಖೀ' ಸೆರಗುಗಳು ಆ ಕಾಲದಲ್ಲಿ ಹೆಚ್ಚು ಪ್ರಚಲಿತವಾಗಿದ್ದವು. ಅಂತಹ ಸೀರೆಗಳು ಸಾಕಷ್ಟು ತೂಕವಾಗಿರುತ್ತಿದ್ದಲ್ಲದೆ ಬೆಲೆಯೂ ಹೆಚ್ಚಾಗಿರುತ್ತಿತ್ತು. ಅವುಗಳನ್ನು ನೇಯಲು 6 ತಿಂಗಳಿನಿಂದ 1 ವರ್ಷದ ಸಮಯ ಬೇಕಾಗುತ್ತಿತ್ತು. ಪೇಶ್ವೆಗಳು ಇಂತಹ ಸೀರೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.
ಕಾಲದೊಂದಿಗೆ ಮಹಿಳೆಯರ ಅಭಿರುಚಿಯೂ ಬದಲಾಗುತ್ತಿದೆ. ಇಂದು ಹತ್ತಿಯಿಂದ ಸಿಲ್ಕ್ ವರೆಗೆ ನೇಯ್ದಿರುವ ಈ ಸೀರೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. 200-250 ಗ್ರಾಂ ಜರಿ ಮತ್ತು 700 ಗ್ರಾಂ ಸಿಲ್ಕ್ ನಿಂದ ತಯಾರಾಗುವ ಈ ಸೀರೆಗಳು 800-700 ಗ್ರಾಂ ತೂಕ ಹೊಂದಿದ್ದು, ಹೆಚ್ಚು ಹೆವಿ ಅನ್ನಿಸುವುದಿಲ್ಲ. ಸೀರೆಯ ಅಂಚು ಮತ್ತು ಸೆರಗಿನಲ್ಲಿರುವ ವಿನ್ಯಾಸಗಳು ಚೆನ್ನಾಗಿ ಗೋಚರಿಸುವಂತೆ ಸೀರೆಯನ್ನು ನೇಯಲಾಗುತ್ತದೆ. ಇವು ಇತರೆ ಸೀರೆಗಳಿಗಿಂತ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತವೆ.
ಹೆಚ್ಚುತ್ತಿರುವ ಬೇಡಿಕೆ
ಈ ಸೀರೆಗಳ ಬಗ್ಗೆ ಡಿಸೈನರ್ ಶೃತಿ ಹೀಗೆ ಹೇಳುತ್ತಾರೆ, ``ಬದಲಾಗುತ್ತಿರುವ ಕಾಲದೊಂದಿಗೆ ಈ ಸೀರೆಗಳ ರೂಪ ಬದಲಾಗಿದೆ. ಇವುಗಳನ್ನು ನೇಯುವುದು ಕಷ್ಟದ ಕೆಲಸ. ಬೇರೆ ಬೇರೆ ಬಣ್ಣಗಳ ದಾರಗಳನ್ನು ಸೇರಿಸಿ ನೇಯುವುದರಿಂದ ಡೈಮೆನ್ಶನ್ ಲುಕ್‌ದೊರೆಯುತ್ತದೆ. ಇಂದಿನ ಮಹಿಳೆಯರು ಹೆಚ್ಚು ತೂಕದ ಸೀರೆಗಳನ್ನು ಉಡಲು ಇಷ್ಟಪಡುವುದಿಲ್ಲ, ಮತ್ತು ಬೆಲೆ ಹೆಚ್ಚಿದ್ದರೆ ಕೊಳ್ಳುವುದಿಲ್ಲ. ಆದ್ದರಿಂದ ನಾನು ಜರಿಯ ಬದಲು `ಟೆಸ್ಟೆಡ್ ಗೋಲ್ಡ್' ಬಳಸಿ ಪೈಠಣೀ ಡಿಸೈನ್ ರೂಪಿಸಿದೆ. ಇಂತಹ ಸೀರೆಗಳು ಅಗ್ಗವಾಗಿರುವುದಲ್ಲದೆ ಗ್ಲಾಮರಸ್ ಮತ್ತು ಎಲಿಗೆಂಟ್ ಸಹ ಆಗಿರುತ್ತವೆ. ಇಂತಹ ಡಿಸೈನ್‌ನ ಸೀರೆಗಳಿಗೆ ಇಂದು ಹೆಚ್ಚಿನ ಬೇಡಿಕೆ ಇದೆ.
``ಹತ್ತಿ ಮತ್ತು ಸಿಲ್ಕ್ ಎರಡು ರೀತಿಯ ಸೀರೆಗಳನ್ನು ಒಂದೇ ರೀತಿಯ ಡಿಸೈನ್‌ನಲ್ಲಿ ತಯಾರಿಸಲಾಗುತ್ತದೆ. ಜೊತೆಗೆ ಹಿಂದೆ 6-7 ಅಂಗುಲವಿರುತ್ತಿದ್ದ ಬಾರ್ಡರ್‌ನ್ನು ಈಗ 3 ಅಂಗುಲದಷ್ಟು ಕಡಿಮೆಗೊಳಿಸಲಾಗಿದೆ. ಸೀರೆಗಳು ಹಗುರವಾಗಿರಲೆಂದು ನವಿರಾದ `ಕಾಂಪೆಂಟರರಿ ಮೋಟಿಫ್ಸ್' ಬಳಸಲಾಗುತ್ತಿದೆ. ಹೀಗಾಗಿ ಈ ಸೀರೆಯನ್ನು ಒಮ್ಮೆ ಕೊಂಡ ನಂತರ ಎಲ್ಲ ರೀತಿಯ ಸಮಾರಂಭಗಳಿಗೂ ಬೇರೆ ಬೇರೆ ರೀತಿಯಾಗಿ `ಮಿಕ್ಸ್ಡ್ ಅಂಡ್ ಮ್ಯಾಚ್' ಮಾಡಿ ಉಡಬಹುದಾಗಿದೆ. ಮ್ಯಾಚಿಂಗ್ ಬ್ಲೌಸ್ ಅಥವಾ ಕಾಂಟ್ರಾಸ್ಟ್ ಬ್ಲೌಸ್ ಬಳಸಬಹುದಲ್ಲದೆ, ಸೀರೆಯನ್ನು ಬೇರೆ ಬೇರೆ ಸ್ಟೈಲ್‌ನಲ್ಲೂ ಉಟ್ಟುಕೊಳ್ಳಬಹುದು. ಈ ಸೀರೆಗಳು ಹೆಚ್ಚಾಗಿ ಡಾರ್ಕ್ ಕಲರ್‌ನಲ್ಲಿ ಬರುತ್ತವೆ. ಅದರಲ್ಲಿ ಕೆಲವು ನೀಲಿ, ಕೇಸರಿ, ಗುಲಾಬಿ, ಹಳದಿ, ನವಿಲು ಬಣ್ಣಗಳು ಹೆಚ್ಚು ಪಾಪ್ಯುಲರ್ ಆಗಿವೆ.''