ಬನಾನಾ ಕಚೋಡಿ
ಸಾಮಗ್ರಿ : 1 ಕಪ್ ಮೈದಾ, 1 ದೊಡ್ಡ ಬಾಳೇಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಹಿಂಗು, ಗರಂಮಸಾಲ, ಅಮ್ಚೂರ್‌ಪುಡಿ, ತುಸು ಬೆಣ್ಣೆ-ತುಪ್ಪ, ಕರಿಯಲು ರೀಫೈಂಡ್ ಎಣ್ಣೆ.
ವಿಧಾನ : ಮೊದಲು ಬಾಳೇಕಾಯಿ ಇಡಿಯಾಗಿ ಬೇಯಿಸಿ. ಇದರ ಸಿಪ್ಪೆ ಹೆರೆದು ಹೋಳು ಮಾಡಿ, ಚೆನ್ನಾಗಿ ಮಸೆದಿಡಿ. ಒಂದು ಬೇಸನ್ನಿಗೆ ಮೈದಾ, ಉಪ್ಪು, ಬೆಣ್ಣೆ ಹಾಕಿ ನೀರು ಚಿಮುಕಿಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ನಾದಿಕೊಳ್ಳಿ ಒಂದು ಚಿಕ್ಕ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಅದಕ್ಕೆ ಎಲ್ಲಾ ಮಸಾಲೆ, ಮಸೆದ ಬಾಳೆ ಹಾಕಿ ಮಂದ ಉರಿಯಲ್ಲಿ ಕೆದಕಿ ಕೆಳಗಿಳಿಸಿ. ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ, 2-2 ಚಮಚ ಬಾಳೆ ಹೂರಣ ತುಂಬಿಸಿ, ಚಿತ್ರದಲ್ಲಿರುವಂತೆ ಸಜ್ಜಪ್ಪಕ್ಕೆ ಮಾಡುವ ಹಾಗೆ ಕ್ಲೋಸ್ ಮಾಡಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿಯಾಗಿ ಚಟ್ನಿ, ಸಾಸ್ ಜೊತೆ ಸವಿಯಲು ಕೊಡಿ.
ಪೊಟೇಟೋ ಚಿಪ್ಸ್ ಚೀಸ್ ಬೌಲ್
ಸಾಮಗ್ರಿ : 1 ಪ್ಯಾಕೆಟ್ ಚಿಪ್ಸ್, 4 ಚಮಚ ತುರಿದ ಚೀಸ್, 2 ಈರುಳ್ಳಿ, ಒಂದಿಷ್ಟು ಹೆಚ್ಚಿದ ಕ್ಯಾಪ್ಸಿಕಂ, ತುಸು ಟೊಮೇಟೊ ಸಾಸ್, ಪಿಜ್ಜಾ ಸೀಸನಿಂಗ್.
ವಿಧಾನ : ಒಂದು ತಟ್ಟೆಗೆ ಚಿಪ್ಸ್ ಹರಡಿ. ಇದರ ಮೇಲೆ ಚೀಸ್, ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ ಹರಡಿಕೊಳ್ಳಿ. ಅದರ ಮೇಲೆ ಟೊಮೇಟೊ ಸಾಸ್, ಸೀಸ್‌ನಿಂಗ್ ಹರಡಿ. ಮೊದಲೇ ಬಿಸಿ ಮಾಡಿದ ಓವನ್‌ನಲ್ಲಿ ಚೀಸ್ ಕರಗಿಸಿ, ಸವಿಯಲು ಕೊಡಿ.
ಕ್ರೀಂ ಚೀಸ್ ಲೇಟೋನ್ಸ್
ಸಾಮಗ್ರಿ : 4-5 ಸ್ಪ್ರಿಂಗ್ ರೋಲ್ ಶೀಟ್ಸ್, 150 ಗ್ರಾಂ ತುರಿದ ಪನೀರ್, 1 ಈರುಳ್ಳಿ, 1-2 ಹಸಿಮೆಣಸು, ತುಸು ತಾಜಾ ಗಾಢ ಕ್ರೀಂ, 4 ಚಮಚ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.
ವಿಧಾನ : ಹೆಚ್ಚಿದ ಹಸಿಮೆಣಸು, ಈರುಳ್ಳಿ, ತುರಿದ ಪನೀರ್, ಕ್ರೀಂ, ಉಪ್ಪು, ಮೆಣಸು ಸೇರಿಸಿ ಹೂರಣ ಮಾಡಿ. ಇದನ್ನು ಎಲ್ಲಾ ಸ್ಪ್ರಿಂಗ್ ರೋಲ್ ಶೀಟ್ಸ್ ಗೂ ಸಮನಾಗಿ ಹರಡಿ, ರೋಲ್ ಮಾಡಿ. ಇದರ ಮೇಲೆ ಎಣ್ಣೆ ಹಚ್ಚಿ, 180 ಡಿಗ್ರಿ ಶಾಖದಲ್ಲಿ ಓವನ್‌ನಲ್ಲಿ 7-8 ನಿಮಿಷ ಬೇಕ್ ಮಾಡಿ. ಅದನ್ನು ತಿರುವಿ ಹಾಕಿ, ಬೆಣ್ಣೆ ಹಚ್ಚಿ ಮತ್ತೆ ಬೇಕ್ ಮಾಡಿ. ಇದನ್ನು ಬಿಸಿಯಾಗಿ ಸವಿಯಿರಿ.
ಪಾಲಕ್ ಕಾರ್ನ್ ಟಿಕ್ಕಿ
ಸಾಮಗ್ರಿ : 1 ಕಂತೆ ಹೆಚ್ಚಿದ ಪಾಲಕ್‌ಸೊಪ್ಪು, ಅರ್ಧರ್ಧ ಕಪ್ ಫ್ರೆಶ್ ಕಾರ್ನ್, ಅವಲಕ್ಕಿ, 1 ಕಪ್ ಹೆಸರುಬೇಳೆ, 1 ದೊಡ್ಡ ಈರುಳ್ಳಿ, 2-3 ಟೊಮೇಟೊ, 1-2 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲ, ತುಸು ಬೆಣ್ಣೆ, ಕರಿಯಲು ಎಣ್ಣೆ.
ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸು, ಪಾಲಕ್, ಟೊಮೇಟೊ, ಕಾರ್ನ್, ಉಪ್ಪು, ಖಾರ ಸೇರಿಸಿ ಚೆನ್ನಾಗಿ ಕೈಯಾಡಿಸಿ, ಬೇಯಿಸಿ. ನೆನೆಸಿಟ್ಟ ಹೆಸರುಬೇಳೆಯನ್ನು ಆವಿಯಲ್ಲಿ ಲಘುವಾಗಿ ಬೇಯಿಸಿ. ಅವಲಕ್ಕಿ ತೊಳೆದು ನೀರು ಸೋರುವಂತೆ ಸ್ಟೀಲ್ ಜರಡಿಗೆ ಹಾಕಿಡಿ. ಇದಕ್ಕೆ ಬೆಂದ ಬೇಳೆ, ಉಪ್ಪು ಬೆರೆಸಿ ವಡೆ ಹಿಟ್ಟಿನ ತರಹ ಕಲಸಿಡಿ. ಇದನ್ನು ಅಂಗೈ ಮೇಲೆ ತಟ್ಟಿಕೊಂಡು, ಮಧ್ಯೆ ಪಾಲಕ್ ಮಿಶ್ರಣ ತುಂಬಿಸಿ, ಗುಂಡಗೆ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಸಾಸ್, ಚಟ್ನಿ ಜೊತೆ ಸವಿಯಲು ಕೊಡಿ.