ಸಿಹಿಗೆಣಸಿನ ಖೀರು

ಸಾಮಗ್ರಿ :  500 ಗ್ರಾಂ ಬೇಯಿಸಿ ಮಸೆದ ಸಿಹಿಗೆಣಸು, 1 ಲೀ. ಗಟ್ಟಿ ಹಾಲು, 1 ಕಪ್‌ ಮಿಲ್ಕ್ ಮೇಡ್‌, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಖರ್ಜೂರದ ಚೂರು (ಒಟ್ಟಾರೆ ಅರ್ಧ ಕಪ್‌), 2-3 ಚಿಟಕಿ ಏಲಕ್ಕಿಪುಡಿ, 2 ಹನಿ ಗುಲಾಬಿ ಎಸೆನ್ಸ್, ಅಲಂಕರಿಸಲು ತಾಜಾ ಗುಲಾಬಿ ದಳ, ಪಿಸ್ತಾ ಚೂರು, ತುಸು ತುಪ್ಪ.

ವಿಧಾನ : ಒಂದು ದಪ್ಪ ತಳದ ಸ್ಟೀಲ್‌ ಪಾತ್ರೆಯಲ್ಲಿ ಹಾಲು ಕಾಯಿಸಿ ಚೆನ್ನಾಗಿ ಕುದಿಸಿರಿ. ಮಂದ ಉರಿಯಲ್ಲಿ ಇದು ಅರ್ಧದಷ್ಟು ಹಿಂಗಿದಾಗ ಇದಕ್ಕೆ ಮಸೆದ ಗೆಣಸು ಸೇರಿಸಿ ಕೈಯಾಡಿಸುತ್ತಿರಿ. ಆಮೇಲೆ ಏಲಕ್ಕಿಪುಡಿ, ಎಸೆನ್ಸ್, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಮಿಲ್ಕ್ ಮೇಡ್‌ ಎಲ್ಲಾ ಬೆರೆಸಿ ಹಾಲು ಮತ್ತಷ್ಟು ಗಟ್ಟಿಯಾಗುವಂತೆ ಮಾಡಿ. ಚೆನ್ನಾಗಿ ಕುದಿ ಬಂದಾಗ ಕೆಳಗಿಳಿಸಿ, ಸರ್ವಿಂಗ್‌ ಡಿಶ್ಶಿಗೆ ರವಾನಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಆರಿದ ನಂತರ ಫ್ರಿಜ್‌ನಲ್ಲಿ 1 ಗಂಟೆ ಕಾಲ ಇರಿಸಿ ನಂತರ ಸವಿಯಲು ಕೊಡಿ.

 

ಗೋಲ್ಡನ್‌ ಓರಿಯೋ ಬೂಂದಿ ಕೇಕ್‌

ಸಾಮಗ್ರಿ : 5-6 ಮೋತಿಚೂರು ಬೂಂದಿ ಲಡ್ಡು, 18-20 ಗೋಲ್ಡನ್‌ ಓರಿಯೋ ಬಿಸ್ಕತ್ತು, 50 ಗ್ರಾಂ ಬೆಣ್ಣೆ, ಅಲಂಕರಿಸಲು ತುಸು ಚಾಕಲೇಟ್‌ ಸಾಸ್‌, ಒಂದಿಷ್ಟು ಸಿಲ್ವರ್‌ ಬಾಲ್ಸ್.

ವಿಧಾನ : ಬೂಂದಿ ಲಡ್ಡು ಮುರಿದು ಚೂರಾಗಿಸಿ. ಬಿಸ್ಕತ್ತನ್ನು ಡ್ರೈ ಮಿಕ್ಸಿಯಲ್ಲಿ ತರಿಯಾಗಿಸಿ. ಒಂದು ಬಟ್ಟಲಿಗೆ ಕರಗಿದ ಬೆಣ್ಣೆ ಹಾಕಿ. ಇದಕ್ಕೆ ಬಿಸ್ಕತ್ತಿನ ತರಿ ಹಾಕಿ ಚೆನ್ನಾಗಿ ಕಲಸಿಡಿ. ಒಂದು ಚೌಕಾಕಾರದ ಟ್ರೇ ತೆಗೆದುಕೊಂಡು ಅಡಿಭಾಗಕ್ಕೆ ಜಿಡ್ಡು ಸವರಿಡಿ. ಬಿಸ್ಕತ್ತಿನ ಮಿಶ್ರಣವನ್ನು 2 ಭಾಗ ಮಾಡಿ. ಒಂದು ಭಾಗವನ್ನು ಟ್ರೇನಲ್ಲಿ ಅಗಲವಾಗಿ ಹರಡಿರಿ. ಇದರ ಮೇಲೆ ಬೂಂದಿ ಕಾಳನ್ನು ಹರಡಿರಿ. ಇದರ ಮೇಲೆ ಮತ್ತೊಂದು ಪದರ ಬಿಸ್ಕತ್ತಿನ ಮಿಶ್ರಣ ಬರಲಿ. ಚಾಕು ನೆರವಿನಿಂದ ಮೇಲ್ಫಾಗದಲ್ಲಿ ಸಪಾಟಾಗಿ ಮಾಡಿ. ಈ ಟ್ರೇಯನ್ನು 2 ತಾಸು ಫ್ರಿಜ್‌ನಲ್ಲಿಡಿ. ಇದು ಚೆನ್ನಾಗಿ ಸೆಟ್‌ ಆದ ನಂತರ, ಮೇಲ್ಭಾಗದಲ್ಲಿ ಸಿಲ್ವರ್‌ ಬಾಲ್ಸ್, ಚಾಕಲೇಟ್‌ ಸಾಸ್‌ನಿಂದ ಅಲಂಕರಿಸಿ. ವಜ್ರಾಕೃತಿಯಲ್ಲಿ ಕತ್ತರಿಸಿ ಸವಿಯಲು ಕೊಡಿ.

ಚಾಕೋ ಛೇನಾ ಬಾಲ್ಸ್

ಸಾಮಗ್ರಿ : 18-20 ಸಣ್ಣ ಬಿಳಿಯ ರಸಗುಲ್ಲ, 100 ಗ್ರಾಂ ಚಾಕಲೇಟ್‌ ಶ್ಯಾವಿಗೆ, 100 ಗ್ರಾಂ ಕುಕಿಂಗ್‌ ಚಾಕಲೇಟ್‌, ಅಲಂಕರಿಸಲು ಒಂದಿಷ್ಟು ಜೆಲ್ಲಿ ಬಾಲ್ಸ್.

ವಿಧಾನ : ರಸಗುಲ್ಲಾಗಳನ್ನು ಒಂದು ಸ್ಟೀಲ್ ಜರಡಿಗೆ ಹಾಕಿಟ್ಟು ನೀರಿನಿಂದ ಚೆನ್ನಾಗಿ ತೊಳೆದು ಒಣಗಿಸಿ. ಚಾಕಲೇಟ್‌ ಬಿಸಿ ಮಾಡಿ ಕರಗಿಸಿ. ಚಾಕಲೇಟ್‌ ಶ್ಯಾವಿಗೆ (ರೆಡಿಮೇಡ್‌ ಲಭ್ಯ)ಯನ್ನು ಒಂದು ಟ್ರೇನಲ್ಲಿ ಹರಡಿರಿ. ರಸಗುಲ್ಲಾಗಳನ್ನು ಒಂದೊಂದಾಗಿ ಈ ಕರಗಿದ ಚಾಕಲೇಟ್‌ನಲ್ಲಿ ಅದ್ದಿ, ಚಾಕಲೇಟ್‌ ಶ್ಯಾವಿಗೆಯಲ್ಲಿ ಹೊರಳಿಸಿ, ಬಟರ್‌ ಪೇಪರ್‌ ಹರಡಿರುವ ಟ್ರೇನಲ್ಲಿ ಜೋಡಿಸಿ. ಆಮೇಲೆ ಇದು ಚೆನ್ನಾಗಿ ಸೆಟ್‌ ಆಗುವಂತೆ ಫ್ರಿಜ್‌ನಲ್ಲಿಡಿ. ಚಿತ್ರದಲ್ಲಿರುವಂತೆ ಜೆಲ್ಲಿ ಬಾಲ್ಸ್ ನಿಂದ ಅಲಂಕರಿಸಿ ಸವಿಯಲು ಕೊಡಿ.

ಮಾರ್ಬಲ್ ರಸಮಲಾಯಿ

ಸಾಮಗ್ರಿ : 2 ಲೀ. ಗಟ್ಟಿ ಹಾಲು, 2 ಚಮಚ ಕಸ್ಟರ್ಡ್‌ ಪೌಡರ್‌, ತುಸು ಕೇಸರಿ (ಹಾಲಲ್ಲಿ ನೆನೆಸಿಡಿ), ಅರ್ಧ ಕಪ್‌ ಸಕ್ಕರೆ,  2 ಚಿಟಕಿ ಏಲಕ್ಕಿ ಪುಡಿ, ಒಂದಿಷ್ಟು ಪಿಸ್ತಾ ಚೂರು, ಇಡೀ ಬಾದಾಮಿ, 8-10 ಮಾರ್ಬಲ್ ಕೇಕ್‌ ಪೀಸ್‌, ಅರ್ಧ ಕಪ್‌ ಮಲಾಯಿ.

ವಿಧಾನ : ಹಾಲನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಕಾಯಲು ಇಡಿ. ಇದು ಅರ್ಧದಷ್ಟು ಹಿಂಗಿದಾಗ, ತುಸು ಬೆಚ್ಚನೆ ಹಾಲಿಗೆ ಕಸ್ಟರ್ಡ್‌ ಪೌಡರ್‌ ಹಾಕಿ ಕದಡಿಕೊಂಡು, ಕುದಿ ಹಾಲಿಗೆ ಬೆರೆಸಿ. ಇದನ್ನು ಮಂದ ಉರಿಯಲ್ಲಿ ಸತತ ಕೈಯಾಡಿಸಿ, ಗಂಟಾಗದಂತೆ ನೋಡಿಕೊಳ್ಳಿ. ಕ್ರಮೇಣ ಇದು ಗಟ್ಟಿಯಾದಂತೆ ಇದಕ್ಕೆ ಕೇಸರಿ, ಸಕ್ಕರೆ, ಏಲಕ್ಕಿ ಹಾಕಿ ಮತ್ತಷ್ಟು ಕುದಿಸಿ, ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಇದನ್ನು ಫ್ರಿಜ್‌ನಲ್ಲಿರಿಸಿ. ಮಾರ್ಬಲ್ ಕೇಕ್‌ ಸ್ಲೈಸ್‌ನ್ನು ಒಂದು ಟ್ರೇಗೆ ಹಾಕಿಡಿ. ಗಾಢವಾದ ಮಲಾಯಿಯನ್ನು ಚೆನ್ನಾಗಿ ಕದಡಿಕೊಂಡು. ಅರ್ಧದಷ್ಟು ಭಾಗವನ್ನು ಈ ಕೇಕ್‌ ಸ್ಲೈಸ್‌ ಮೇಲೆ ಹರಡಿರಿ, ಉಳಿದದ್ದನ್ನು ಇದರ ಮೇಲಿರಿಸಿ ಸ್ಯಾಂಡ್‌ವಿಚ್‌ ತರಹ ಮಾಡಿ. ಇವನ್ನು ಬೇಕಾದ ಆಕಾರದಲ್ಲಿ ಕತ್ತರಿಸಿ. ಚಿಕ್ಕ ಬಟ್ಟಲುಗಳಿಗೆ ಉಳಿದ ಹಾಲನ್ನು ಹಾಕಿಡಿ. ಅದರ ಮೇಲೆ ಮಾರ್ಬಲ್ ಕೇಕ್‌ ತುಂಡುಗಳನ್ನಿರಿಸಿ. ಇದರ ಮೇಲೆ ಬಾದಾಮಿ, ಬದಿಯಲ್ಲಿ ಪಿಸ್ತಾ ತೇಲಿಬಿಟ್ಟು  ಚಿತ್ರದಲ್ಲಿರುವಂತೆ ಅಲಂಕರಿಸಿ. ಇದೀಗ ಮಾರ್ಬಲ್ ರಸಮಲಾಯಿ ರೆಡಿ, ತಕ್ಷಣ ಸವಿಯಲು ಕೊಡಿ.

ಫ್ರೂಟ್‌ ಲಡ್ಡು

ಸಾಮಗ್ರಿ : 1 ಕಪ್‌ ಸನ್‌ಡ್ರೈ ಫ್ರೂಟ್ಸ್ (ರೆಡಿಮೆಡ್‌ ಲಭ್ಯ), 2 ಕಪ್‌ ಖೋವಾ, ಅರ್ಧ ಕಪ್‌ ಸಕ್ಕರೆ.

ವಿಧಾನ : ಖೋವಾ ಚೆನ್ನಾಗಿ ಮಸೆದಿಡಿ. ಇದನ್ನು ಭಾರಿ ಬಾಣಲೆಯಲ್ಲಿ ತುಸು ತುಪ್ಪದೊಂದಿಗೆ ಗುಲಾಬಿ ಬಣ್ಣಕ್ಕೆ ತಿರುಗುವಂತೆ ಬಾಡಿಸಿ ಕೆಳಗಿಳಿಸಿ. ಇದಕ್ಕೆ ಸನ್‌ಡ್ರೈ ಫ್ರೂಟ್ಸ್ ಬೆರೆಸಿ ಚೆನ್ನಾಗಿ ಕಲಸಿಡಿ. ಇದಕ್ಕೆ ಪುಡಿ ಸಕ್ಕರೆ ಬೆರೆಸಿ ಕಲಸಿಡಿ. ತುಸು ಆರಿದ ನಂತರ ಚಿತ್ರದಲ್ಲಿರುವಂತೆ ಇದರಿಂದ ಲಡ್ಡು ಮಾಡಿಡಿ. ಇದನ್ನು ಸರ್ವಿಂಗ್‌ ಡಿಶ್‌ನಲ್ಲಿರಿಸಿ, ಬಣ್ಣದ ಕ್ಯಾಂಡಿಗಳಿಂದ ಸಿಂಗರಿಸಿ ಸವಿಯಲು ಕೊಡಿ.

ಚಾಕೋ ಚಿಪ್ಸ್ ಡಿಲೈಟ್

ಸಾಮಗ್ರಿ : 1 ಕಪ್‌ ಚಾಕೋ ಚಿಪ್ಸ್, 1 ಮಧ್ಯಮ ಗಾತ್ರದ ಚಾಕಲೇಟ್‌ ಸ್ಪಾಂಜ್‌ ಕೇಕ್‌, ಅರ್ಧ ಕಪ್‌ ಮಿಕ್ಸ್ಡ್ ಫ್ರೂಟ್‌ ಜ್ಯಾಂ, ಅಗತ್ಯವಿದ್ದಷ್ಟು ಹಾಲು, ಸಿಲ್ವರ್‌ ಬಾಲ್ಸ್, ತುಸು ತುರಿದ ಚಾಕಲೇಟ್‌.

ವಿಧಾನ : ಕೇಕ್‌ನ್ನು ಒಂದು ಬಟ್ಟಲಿನಲ್ಲಿ ಕಿವುಚಿಡಿ. ಇದಕ್ಕೆ ಜ್ಯಾಂ ಬೆರೆಸಿ ಮಿಶ್ರಣ ಸಿದ್ಧಪಡಿಸಿ. ನಂತರ ತುಸು ಹಾಲು ಬೆರೆಸಿ, ಮಿಶ್ರಣವನ್ನು ಉಂಡೆ ಕಟ್ಟುವಂತೆ ಮಾಡಿಡಿ. ಈ ಮಿಶ್ರಣವನ್ನು ಒಂದು ಟ್ರೇನಲ್ಲಿ ಅರ್ಧ ಇಂಚು ದಪ್ಪ ಬರುವಂತೆ ಜಿಡ್ಡು ಸವರಿದ ಟ್ರೇನಲ್ಲಿ ಹರಡಿರಿ. ಇದರ ಮೇಲೆ ಚೆನ್ನಾಗಿ  ಚಾಕೋ ಚಿಪ್ಸ್ ಹರಡಬೇಕು. ಅದನ್ನು ಅದುಮಿ ಮಿಶ್ರಣಕ್ಕೆ ಮೆತ್ತಿಕೊಳ್ಳುವಂತೆ ಮಾಡಿ. ಆಮೇಲೆ ಚೆನ್ನಾಗಿ ಕೂಲ್ ಆಗಲು 2 ತಾಸು ಫ್ರಿಜ್‌ನಲ್ಲಿಡಿ. ಈ ಮಿಶ್ರಣ ಹೀಗೆ ಚೆನ್ನಾಗಿ ಸೆಟ್‌ ಆದಮೇಲೆ ಹೊರಗೆ ತೆಗೆದು, ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಪ್ರತಿಯೊಂದನ್ನೂ ಚಿತ್ರದಲ್ಲಿರುವಂತೆ ಕ್ಯಾಂಡಿ ರಿಬ್ಬನ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

ಕೋಕೋನಟ್‌ ಲಾಲಿಪಾಪ್‌

ಸಾಮಗ್ರಿ : 1 ಟಿನ್‌ ಮಿಲ್ಕ್ ಮೇಡ್‌, 1 ಗಿಟುಕು ಕೊಬ್ಬರಿ ತುರಿ, ಅಲಂಕರಿಸಲು ಒಂದಿಷ್ಟು ಬಣ್ಣಬಣ್ಣದ ಕ್ಯಾಂಡಿ ಬಾಲ್ಸ್, ಸಿಲ್ವರ್‌ ಬಾಲ್ಸ್, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ 1 ಕಪ್‌), ಅಗತ್ಯವಿದ್ದಷ್ಟು ಲಾಲಿಪಾಪ್‌ ಸ್ಟಿಕ್ಸ್.

ವಿಧಾನ : ದಪ್ಪ ತಳವುಳ್ಳ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ಮಿಲ್ಕ್ ಮೇಡ್‌ ಹಾಕಿ ಬಿಸಿ ಮಾಡಿ. ಮಂದ ಉರಿಯಲ್ಲಿ ಇದನ್ನು ಕೆದಕುತ್ತಾ ಕುದಿಸಬೇಕು. ಆಮೇಲೆ ಕೊಬ್ಬರಿ ತುರಿ, ಗೋಡಂಬಿ, ದ್ರಾಕ್ಷಿ ಸೇರಿಸಿ ಕೈಯಾಡಿಸಿ. ಇದು ಗಟ್ಟಿಯಾಗಿ ಉಂಡೆ ಕಟ್ಟುವ ಹದಕ್ಕೆ ಬರುವಂತಿರಬೇಕು. ಅಗತ್ಯ ಎನಿಸಿದರೆ ಇನ್ನಷ್ಟು ತುರಿ ಸೇರಿಸಿ. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಆಮೇಲೆ ಚಿತ್ರದಲ್ಲಿರುವಂತೆ ಉಂಡೆ ಕಟ್ಟಿ, ಮೇಲಿನಿಂದ ಸ್ಟಿಕ್‌ ಸಿಗಿಸಿಡಿ. ಇದನ್ನು ಟ್ರೇನಲ್ಲಿ ಜೋಡಿಸಿ 1-2 ತಾಸು ಫ್ರಿಜ್‌ನಲ್ಲಿರಿಸಿ. ಹೊರತೆಗೆದ ಮೇಲೆ ಚಿತ್ರದಲ್ಲಿರುವಂತೆ ಬಣ್ಣದ ಕ್ಯಾಂಡಿ, ಸಿಲ್ವರ್‌ ಬಾಲ್ಸ್ ನಿಂದ ಅಲಂಕರಿಸಿ ಸವಿಯಲು ಕೊಡಿ.

ಕ್ಯಾರೆಮಲ್ ಫ್ರೂಟ್‌ ಮ್ಯಾಜಿಕ್‌

ಸಾಮಗ್ರಿ : 2-2 ಕಪ್‌ ಸಕ್ಕರೆ, ಮಿಶ್ರ ಹಣ್ಣುಗಳ ಹೋಳು (ಮಾವು, ಸೇಬು, ಬಾಳೆ, ಅನಾನಸ್‌, ಸಪೋಟ), ನೈಲಾನ್‌ ಎಳ್ಳು, ಮೈದಾ, ಅಕ್ಕಿಹಿಟ್ಟು, ಕಾರ್ನ್‌ಫ್ಲೋರ್‌ (ತಲಾ ಅರ್ಧರ್ಧ ಕಪ್‌), 1 ನಿಂಬೆಹಣ್ಣು, 2 ಚಮಚ ಬೆಣ್ಣೆ, 2 ಚಿಟಕಿ ಉಪ್ಪು, ಕರಿಯಲು ರೀಫೈಂಡ್‌ ಎಣ್ಣೆ.

ವಿಧಾನ : ಮೊದಲು ಒಂದು ಬಟ್ಟಲಿಗೆ ಮೈದಾ, ಅಕ್ಕಿಹಿಟ್ಟು, ಕಾರ್ನ್‌ಫ್ಲೋರ್‌, ಉಪ್ಪು ಸೇರಿಸಿ ಇದಕ್ಕೆ ನಿಂಬೆಹಣ್ಣು ಹಿಂಡಿಕೊಳ್ಳಿ. ತುಸು ನೀರು ಬೆರೆಸಿ ಗಟ್ಟಿಯಾದ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಹಣ್ಣಿನ ಹೋಳನ್ನು ಒಂದೊಂದಾಗಿ ಇದರಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಬಟರ್‌ ಪೇಪರ್‌ ಮೇಲೆ ಹರಡಿರಿ. ಒಂದು ಪ್ಯಾನಿನಲ್ಲಿ ಮಂದ ಉರಿಯಲ್ಲಿ ಸಕ್ಕರೆ ಹಾಕಿ ಹುರಿಯಿರಿ. ಅದು ಗುಲಾಬಿ ಬಣ್ಣಕ್ಕೆ ತಿರುಗಿದಂತೆ ತಕ್ಷಣ ಬೆಣ್ಣೆ, ಎಳ್ಳು ಹಾಕಿ ಬೆರೆಸಿರಿ. ಕೆಳಗಿಳಿಸಿದ ನಂತರ (ಕಲಸುವ ಹದಕ್ಕೆ ಬಂದಾಗ) ಕರಿದ ತುಂಡುಗಳನ್ನು ಇದರಲ್ಲಿ ಚೆನ್ನಾಗಿ ಹೊರಳಿಸಿ, ಫ್ರಿಜ್‌ನಲ್ಲಿರಿಸಿ ತಣ್ಣಗೆ ಮಾಡಿ. ನಂತರ ಸವಿಯಲು ಕೊಡಿ.

ಸ್ಪೆಷಲ್ ಪಾನ್‌ ಬೀಡಾ

ಸಾಮಗ್ರಿ : 2 ಕಪ್‌ ತುರಿದ ಖೋವಾ, ತುಸು ಹಸಿರು ಬಣ್ಣ, ಅರ್ಧ ಕಪ್‌ ಗುಲಕಂದ್‌, 2-3 ಚಮಚ ಬೂರಾ ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ (ಒಟ್ಟಾಗಿ ಅರ್ಧ ಕಪ್‌), ಒಂದಿಷ್ಟು ಕೊಬ್ಬರಿ ತುರಿ, ಒಂದಿಷ್ಟು ಕ್ಯಾಂಡಿ ಶುಗರ್‌, ಟೂಟಿಫ್ರೂಟಿ, ತುಸು ಹಾಲು, 3-4 ಬೆಳ್ಳಿ ರೇಕು.

ವಿಧಾನ : ಮೊದಲು ದಪ್ಪ ತಳದ ಬಾಣಲೆಯಲ್ಲಿ ಖೋವಾ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಇದಕ್ಕೆ 1-2 ಚಮಚ ಹಾಲಿನಲ್ಲಿ ಕದಡಿಕೊಂಡ ಹಸಿರು ಬಣ್ಣ ಬೆರೆಸಿರಿ. ಇದಕ್ಕೆ ಬೂರಾ ಸಕ್ಕರೆ ಸೇರಿಸಿ. ಸ್ವಲ್ಪ ಹೊತ್ತು ಹಾಗೆ ಕೆದಕುತ್ತಿರಿ. ಒಂದು ಬೇರೆ ಬಟ್ಟಲಿಗೆ ಗುಲಕಂದ್‌, ಗೋಡಂಬಿ, ದ್ರಾಕ್ಷಿ, ಕೊಬ್ಬರಿ ತುರಿ ಹಾಕಿ ಕಲಸಿಡಿ. ಖೋವಾ ಮಿಶ್ರಣದಿಂದ ಸಮಾನ ಗಾತ್ರದ ಉಂಡೆ ಕಟ್ಟಿ ಪುಟ್ಟ ಪೂರಿಗಳಾಗಿ ಲಟ್ಟಿಸಿ. ಇದನ್ನು ಅರ್ಧ ಚಂದ್ರಾಕಾರವಾಗಿ ಕತ್ತರಿಸಿ, ಕೋನ್‌ ಆಕಾರದಲ್ಲಿ ಮಡಿಚಿ, ಬಿಟ್ಟುಕೊಳ್ಳದಂತೆ ಅಂಟಿಸಿ. ಎಲ್ಲಾ ಕೋನ್‌ಗಳಿಗೂ 3-4 ಚಮಚ ಗುಲ‌ಕಂದ್‌ ಮಿಶ್ರಣ ತುಂಬಿಸಿ. ಇದರ ಮೇಲ್ಭಾಗದಲ್ಲಿ ಚಿತ್ರದಲ್ಲಿರುವಂತೆ ಬೆಳ್ಳಿ ರೇಕಿನಿಂದ ಅಲಂಕರಿಸಿ ಸವಿಯಲು ಕೊಡಿ.

ಬೇಸನ್‌ ಬರ್ಫಿ

ಸಾಮಗ್ರಿ : 2 ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ತುಪ್ಪ, 2 ಚಿಟಕಿ ಏಲಕ್ಕಿಪುಡಿ, 1 ಗಿಟುಕು ಕೊಬ್ಬರಿ ತುರಿ, ಅರ್ಧ ಕಪ್‌ ಬೂರಾ ಸಕ್ಕರೆ, 2 ಚಮಚ ಬೆಣ್ಣೆ, ಅಲಂಕರಿಸಲು ಚಾಕಲೇಟ್‌ ಬಾಲ್ಸ್, ಅರ್ಧ ಕಪ್‌ ಕ್ರೀಂ (ಹಾಲಿನ ಕೆನೆ), ಒಂದಿಷ್ಟು ಕರ್ಬೂಜಾ ಬೀಜ.

ವಿಧಾನ :  ಮೊದಲು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಮಂದ ಉರಿಯಲ್ಲಿ ಇದಕ್ಕೆ ಕಡಲೆಹಿಟ್ಟು ಹಾಕಿ ಹುರಿಯಿರಿ. ಆಮೇಲೆ ಇದಕ್ಕೆ ಕರ್ಬೂಜಾ ಬೀಜ, ಏಲಕ್ಕಿ, ಬೂರಾ ಸಕ್ಕರೆ ಹಾಕಿ ಕೈಯಾಡಿಸಿ. ಇದನ್ನು ಕೆಳಗಿಳಿಸಿ. ಒಂದು ಅಗಲವಾದ ಟ್ರೇಗೆ ತುಪ್ಪ ಸವರಿಡಿ. ಕೆದಕಿದ ಮಿಶ್ರಣವನ್ನು ಇದಕ್ಕೆ ಸುರಿದು ಸಮತಲ ಮಾಡಿ. ಇದರ ಮೇಲೆ ಮಕಮಲ್ ಬಟ್ಟೆ ಕಟ್ಟಿ  1 ತಾಸು ಹಾಗೇ ಬಿಡಿ. ಗಾಢ ಕ್ರೀಮಿಗೆ ಕೊಬ್ಬರಿ ತುರಿ, ಬೂರಾ ಸಕ್ಕರೆ ಸೇರಿಸಿ. ಈ ಮಿಶ್ರಣವನ್ನು ಹಿಟ್ಟಿನ ಮೇಲೆ ಸಮಾನವಾಗಿ ಹರಡಿರಿ. ಚಿತ್ರದಲ್ಲಿರುವಂತೆ ಚಾಕಲೇಟ್‌ ಬಾಲ್ಸ್, ತುರಿದ ಚಾಕಲೇಟ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

ಕ್ಯಾಶ್ಯು ಮ್ಯಾಂಗೋ ಫಡ್ಜ್

ಸಾಮಗ್ರಿ : 1 ಕಪ್‌ ಗೋಡಂಬಿ ತುರಿ (ತುಪ್ಪದಲ್ಲಿ ಹುರಿದು ತರಿ ಮಾಡಿದ್ದು), 100 ಗ್ರಾಂ ಸಿಹಿ ಆಮ್ ಪಾಪಡ್‌  (ರೆಡಿಮೇಡ್‌ ಲಭ್ಯ), ಅರ್ಧ ಕಪ್‌ ಸಕ್ಕರೆ, 1 ಸಣ್ಣ ಗಿಟುಕು ಕೊಬ್ಬರಿ ತುರಿ, ಅಲಂಕರಿಸಲು ಒಂದಿಷ್ಟು ಬಣ್ಣ ಬಣ್ಣದ ಶುಗರ್‌ ಬಾಲ್ಸ್.

ವಿಧಾನ : ಒಂದು ಬಾಣಲೆಗೆ ಸಕ್ಕರೆ ಹಾಕಿ ಬಿಸಿ ಮಾಡಿ. ಇದನ್ನು ಮಂದ ಉರಿಯಲ್ಲಿ ಕೆದಕಬೇಕು. ಆಮ್ ಪಾಪಡ್‌ (ಮಾವಿನ ದಪ್ಪ ಹಪ್ಪಳ)ನ್ನು ಸಣ್ಣ ತುಂಡುಗಳಾಗಿಸಿ ಈ ಮಿಶ್ರಣಕ್ಕೆ ಸೇರಿಸಿ, ಜೊತೆಗೆ ಗೋಡಂಬಿ ಸಹ. ಇದನ್ನು ಚೆನ್ನಾಗಿ ಕೆದಕಬೇಕು. ತುಪ್ಪ ಹಚ್ಚಿದ ಒಂದು ಅಗಲ ತಟ್ಟೆಗೆ ಇದನ್ನು ಹರಡಿಕೊಳ್ಳಿ. ಸ್ವಲ್ಪ ಆರಿದ ನಂತರ , ಚಿತ್ರದಲ್ಲಿರುವಂತೆ ಸಣ್ಣ ಉಂಡೆಗಳಾಗಿಸಿ, ಚಾಕಲೇಟ್‌ ಪೇಪರ್‌ನಲ್ಲಿರಿಸಿ. ಇದರ ಮೇಲೆ ಕೊಬ್ಬರಿ ತುರಿ, ಶುಗರ್‌ ಬಾಲ್ಸ್ ಉದುರಿಸಿ ಸವಿಯಲು ಕೊಡಿ.

ಮಲಾಯಿ ಪ್ಯಾಕೆಟ್

ಸಾಮಗ್ರಿ : ಮೈದಾ-ಅಕ್ಕಿಹಿಟ್ಟು, ತುಪ್ಪ (ಅರ್ಧರ್ಧ ಕಪ್‌), 1 ಕಪ್‌ ಮಸೆದ ಖೋವಾ, 2 ಚಿಟಕಿ ಏಲಕ್ಕಿ ಪುಡಿ, ಪಚ್ಚಕರ್ಪೂರ, ಒಂದಿಷ್ಟು ಗೋಡಂಬಿ, ಪಿಸ್ತಾ ಚೂರು, ಅರ್ಧ ಕಪ್‌ ಪುಡಿ ಸಕ್ಕರೆ, ಪಾಕಕ್ಕಾಗಿ 2 ಕಪ್‌ ಸಕ್ಕರೆ, 1 ಗಿಟುಕು ಕೊಬ್ಬರಿ ತುರಿ, ಕರಿಯಲು ಎಣ್ಣೆ.

ವಿಧಾನ : ಒಂದು ದಪ್ಪ ತಳದ ಬಾಣಲೆಯನ್ನು ಬಿಸಿ ಮಾಡಿ, ಅದಕ್ಕೆ ಖೋವಾ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಗೋಡಂಬಿ, ಪಿಸ್ತಾ, ಏಲಕ್ಕಿ, ಪಚ್ಚಕರ್ಪೂರ, ಪುಡಿ ಸಕ್ಕರೆ ಹಾಕಿ ಕೆದಕಬೇಕು. ಆಮೇಲೆ ಈ ಮಿಶ್ರಣವನ್ನು ಕೆಳಗಿಳಿಸಿ ಆರಲು ಬಿಡಿ. ಒಂದು ಬೇಸನ್ನಿಗೆ ಮೈದಾ, ಅಕ್ಕಿಹಿಟ್ಟು, ಚಿಟಕಿ ಉಪ್ಪು ಹಾಕಿ. ಬಿಸಿ ಮಾಡಿದ ತುಪ್ಪವನ್ನು ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ಬೆರೆಸುತ್ತಾ, ಮೈದಾ ಮಿಶ್ರಣ ಬ್ರೆಡ್‌ ಕ್ರಂಬ್ಸ್ ಆಗುವಂತೆ ಮಾಡಿ. ಇದಕ್ಕೆ ತುಸು ನೀರು ಚಿಮುಕಿಸುತ್ತಾ ಮೃದುವಾದ ಪೂರಿ ಹಿಟ್ಟು ಕಲಸಿಡಿ. ಇದನ್ನು ಒಂದು ತೆಳು ಒದ್ದೆ ಬಟ್ಟೆಯಲ್ಲಿ ಸುತ್ತಿಡಿ. ಒಂದು ಪ್ಯಾನಿನಲ್ಲಿ ಸಕ್ಕರೆ ಪಾಕಕ್ಕಾಗಿ 1 ಕಪ್‌ ನೀರಿಟ್ಟು, ಸಕ್ಕರೆ ಹಾಕಿ, ಒಂದೆಳೆ ಪಾಕ ತಯಾರಿಸಿ. ಪಾಕ ತಣ್ಣಗಾದಾಗ ಇದಕ್ಕೆ ಗುಲಾಬಿ ಜಲ ಬೆರೆಸಿರಿ. ನೆನೆಸಿದ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ. ಇದನ್ನು ಪೂರಿಗಳಾಗಿ ಲಟ್ಟಿಸಿ. ಮಧ್ಯೆ 1-2 ಚಮಚ ಖೋವಾ ಮಿಶ್ರಣವಿರಿಸಿ. ಇದನ್ನೂ ಎಲ್ಲಾ ಬದಿಯಿಂದ ಕವರ್‌ ಮಾಡಿ, ನೀಟಾಗಿ (ಚಿತ್ರದಲ್ಲಿರುವಂತೆ) ಪ್ಯಾಕೆಟ್‌ ಮಾಡಿ, ಬಿಟ್ಟುಕೊಳ್ಳದಂತೆ ಒಂದೊಂದು ಲವಂಗ ಸಿಗಿಸಿಡಿ. ಬಾಣಲೆಯಲ್ಲಿ ರೀಫೈಂಡ್‌ ಎಣ್ಣೆ ಬಿಸಿ ಮಾಡಿ, ಇದನ್ನು ಕರಿದು ತೆಗೆಯಿರಿ. ನಂತರ ಪಾಕಕ್ಕೆ ಹಾಕಿ, 2 ನಿಮಿಷ ಬಿಟ್ಟು ಬಟರ್‌ ಪೇಪರ್‌ ಮೇಲೆ ಹರಡಿರಿ. ಚಿತ್ರದಲ್ಲಿರುವಂತೆ ಇದರ ಮೇಲೆ ಡ್ರೈಫ್ರೂಟ್ಸ್ ಉದುರಿಸಿ ಸವಿಯಲು ಕೊಡಿ.

Tags:
COMMENT