ಹಬ್ಬದ ಸಂದರ್ಭದಲ್ಲಿ ಹೊರಗಿನಿಂದ ಏನೇ ಸಿಹಿ ಅಥವಾ ಬೇರೆ ಐಟಂ ತಂದಿರಲಿ, ಮನೆಯ ಶುಚಿ ರುಚಿಯಾದ ವ್ಯಂಜನಗಳಿಗೆ ಅವೆಂದೂ ಸರಿಸಮ ಎನಿಸವು. ಪ್ರತಿಯೊಬ್ಬ ಗೃಹಿಣಿಗೂ ಹಬ್ಬ ಬಂದಾಗ ಎದುರಾಗುವ ಧರ್ಮಸಂಕಟ ಎಂದರೆ ಬೇಗ ಬೇಗ ಯಾವ ಐಟಂ ತಯಾರಿಸಬಹುದು? ಇಂದು ಗೃಹಿಣಿ ಮಲ್ಟಿಟಾಸ್ಕಿಂಗ್ ಮಾಡಬಲ್ಲಳು. ಹೀಗಾಗಿ ಆಕೆ ಸುಲಭವಾಗಿ ಬೇಗಬೇಗ ತಯಾರಿಸಬಹುದಾದ ಸ್ವಾದಿಷ್ಟ, ಪೌಷ್ಟಿಕ ವ್ಯಂಜನಗಳ ಕಡೆ ಗಮನಹರಿಸಿ, ಉಳಿದ ಸಮಯವನ್ನು ಮನೆಮಂದಿ ಜೊತೆ ಹಬ್ಬ ಆಚರಿಸುವುದರಲ್ಲಿ ಕಳೆಯಬಹುದು. ಇಡೀ ದಿನ ಅಡುಗೆಮನೆಯಲ್ಲೇ ಬೇಯುತ್ತಾ ಇರಲು ಯಾರಿಗೆ ತಾನೇ ಇಷ್ಟವಾಗುತ್ತದೆ? ಇದಕ್ಕಾಗಿ ತುಸು ಪ್ಲಾನಿಂಗ್ ಮಾಡಿಕೊಂಡರೆ ಎಲ್ಲ ಸಲೀಸು!
ಮರುದಿನದ ಅಡುಗೆಯ ತಯಾರಿಯನ್ನು ರಜೆ ದಿನವೇ ಮಾಡಿಕೊಂಡರೆ ವಾರದ ದಿನಗಳಿಗೆ ಅನುಕೂಲ. ಉದಾ: ತರಕಾರಿ ಹೆಚ್ಚಿ ಫ್ರಿಜ್‌ನಲ್ಲಿಡುವುದು, ಚಪಾತಿ ಹಿಟ್ಟು ಕಲಸಿಡುವುದು, ಇಡ್ಲಿ-ದೋಸೆಗೆ ಹಿಟ್ಟು ತಯಾರಿ ಇತ್ಯಾದಿ. ಹೀಗಾಗಿ ರಜೆಯ ಮುಂದಿನ 2-3 ದಿನಗಳು ಸಲೀಸಾಗಿ ಕಳೆಯುತ್ತವೆ. ಮಲ್ಲಿಗೆ ಅಥವಾ ಕಾಂಚೀಪುರಂ ಇಡ್ಲಿ, ದಾವಣಗೆರೆ ಬೆಣ್ಣೆದೋಸೆ, ಚೈನೀಸ್/ಸ್ಕ್ರೇಬನ್ ದೋಸೆ.... ಇತ್ಯಾದಿ ಯಾವುದು ಬೇಕೋ ಅದರ ಪೂರ್ಣ ತಯಾರಿಯಿಂದ ವಾರದ ದಿನಗಳಲ್ಲೂ ಸುಲಭ ಎನಿಸುತ್ತದೆ. ಪರೋಟಾ ಸ್ಟಫಿಂಗ್‌ಗೆ ಬೇಕಾಗುವ ವಿವಿಧ ಪಲ್ಯಗಳ ಹೂರಣವನ್ನು ಬೇರೆ ಬೇರೆ ಏರ್‌ಟೈಟ್ ಡಬ್ಬಗಳಲ್ಲಿರಿಸಿ ಬೇಕಾದಾಗ ಆಲೂ, ಮೂಲಂಗಿ ಪರೋಟ ತಯಾರಿಸಿಕೊಳ್ಳಬಹುದು.
ಬ್ರೆಡ್ ಅಂತೂ ಮನೆಯಲ್ಲಿ ಇದ್ದೇ ಇರುತ್ತದೆ. ಇದರಿಂದ ಸ್ಯಾಂಡ್‌ವಿಚ್, ಓಪನ್ ಟೋಸ್ಟ್, ಚೀಸ್ ಟೋಸ್ಟ್, ಬ್ರೆಡ್ ಪೌಚ್, ಕಟ್‌ಲೆಟ್ಸ್, ಬ್ರೆಡ್ ಪಕೋಡ ಇತ್ಯಾದಿ ತಯಾರಿಸಬಹುದು. ಇದೇ ತರಹ ಓಟ್ಸ್ ಸಹ ಮಾಮೂಲು ಎನಿಸಿದೆ. ರೆಡಿ ಟು ಈಟ್ ಓಟ್ಸ್ ಅಲ್ಲದೆ ಪ್ಲೇನ್ ಓಟ್ಸ್ ನಿಂದಲೂ ಬೇಕಾದ ವ್ಯಂಜನಗಳನ್ನು ತಯಾರಿಸಿಕೊಳ್ಳಬಹುದು.
ವೇಫರ್ ಬಾಲ್ಸ್
ಸಾಮಗ್ರಿ : 1 ಪ್ಯಾಕೆಟ್ ವೇಫರ್ ಬಿಸ್ಕೆಟ್, ಅರ್ಧರ್ಧ ಕಪ್ ಕೊಬ್ಬರಿ ತುರಿ, ಕಂಡೆನ್ಸ್ಡ್ ಮಿಲ್ಕ್, 2 ಚಮಚ ಕೋಕೋ ಪುಡಿ, 4 ಚಮಚ ಕ್ರೀಂ.
ವಿಧಾನ : ಮಿಕ್ಸಿಗೆ ಕೊಬ್ಬರಿ ಹೊರತುಪಡಿಸಿ ಬಾಕಿ ಎಲ್ಲಾ ಸಾಮಗ್ರಿ ಸೇರಿಸಿ ಒಟ್ಟಿಗೆ ಬ್ಲೆಂಡ್ ಮಾಡಿಕೊಳ್ಳಿ. ಇದನ್ನು ತುಪ್ಪ ಬಿಸಿ ಮಾಡಿದ ಬಾಣಲೆಯಲ್ಲಿ 2 ನಿಮಿಷ ಕೆದಕಬೇಕು. ಆಮೇಲೆ ಸಣ್ಣ ಉಂಡೆಗಳಾಗಿಸಿ, ಕೊಬ್ಬರಿ ತುರಿಯಲ್ಲಿ ಹೊರಳಿಸಿ ಸವಿಯಲು ಕೊಡಿ.
ಬ್ರೆಡ್ ಪೇಡಾ ಪೌಚ್
ಸಾಮಗ್ರಿ : 4-5 ಬ್ರೆಡ್ ಸ್ಲೈಸ್, 5-6 ಪೇಡಾ, 1-2 ಚಮಚ ಬಾದಾಮಿ, ದ್ರಾಕ್ಷಿ, ಗೋಡಂಬಿ ಚೂರು, 2-3 ಚಮಚ ಬೆಣ್ಣೆ, ತುಸು ಚಾಕಲೇಟ್ ಸಾಸ್.
ವಿಧಾನ : ಬ್ರೆಡ್‌ನ ಅಂಚು ಕತ್ತರಿಸಿ ಲಟ್ಟಣಿಗೆಯಿಂದ ಇದನ್ನು ತೆಳುವಾಗಿ ಲಟ್ಟಿಸಿ. ಇದರ ಮಧ್ಯೆ ಪುಡಿ ಮಾಡಿದ ಪೇಡಾ ಜೊತೆ ನಟ್ಸ್ ಬೆರೆಸಿ ಇರಿಸಿ. ಪೌಚ್ ತರಹ ಬರುವಂತೆ ಮಡಿಚಿ, ನೀರು ಸಿಂಪಡಿಸಿ ಅಂಚು ಒತ್ತಿಬಿಡಿ. ಒಂದು ಪ್ಯಾನಿನಲ್ಲಿ ಬೆಣ್ಣೆ ಬಿಸಿ ಮಾಡಿ, ಇನ್ನು ಹಾಕಿ ಶ್ಯೋಲೊ ಫ್ರೈ ಮಾಡಿ. ಇದನ್ನು ಚಾಕಲೇಟ್ ಸಾಸ್ ಜೊತೆ ಸರ್ವ್ ಮಾಡಿ.