ಸ್ಡೀಮ್ಡ್ ರೈಸ್‌ಫ್ಲೇಕ್ಸ್
ಸಾಮಗ್ರಿ : 2-2 ಕಪ್ ಅವಲಕ್ಕಿ-ಮೊಸರು, ಉದ್ದಿನಬೇಳೆ, ಕಡಲೆಬೇಳೆ, ಹೆಸರುಬೇಳೆ (ಅರ್ಧರ್ಧ ಕಪ್), 3-4 ಹಸಿಮೆಣಸು, 2-3 ಎಸಳು ಬೆಳ್ಳುಳ್ಳಿ, 1 ಸಣ್ಣ ತುಂಡು ಹಸಿಶುಂಠಿ, ಅರ್ಧ ಚಮಚ ಬೇಕಿಂಗ್ ಸೋಡ, ಅರ್ಧ ಕಪ್ ರವೆ, ರುಚಿಗೆ ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸುವೆ, ಉದ್ದಕ್ಕೆ ಹೆಚ್ಚಿದ ಹಸಿಮೆಣಸು, ಒಂದಿಷ್ಟು ತೆಂಗಿನ ತುರಿ.
ವಿಧಾನ : ಎಲ್ಲಾ ಬೇಳೆಗಳನ್ನೂ 2-3 ಗಂಟೆ ಕಾಲ ನೆನೆಹಾಕಿಡಿ. ಅವಲಕ್ಕಿ ಬೇರೆ ನೆನೆಹಾಕಿ. ಇವೆಲ್ಲವನ್ನೂ ಒಟ್ಟಾಗಿ ರುಬ್ಬಿಕೊಳ್ಳಿ. ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ ಸೇರಿಸಿ ಬೇರೆ ರುಬ್ಬಿಡಿ. ರವೆಯನ್ನು ಲಘುವಾಗಿ ಹುರಿದು ಸೋಡ, ಉಪ್ಪು, ಮೊಸರು ಮತ್ತಿತರ ಎಲ್ಲವನ್ನೂ ಬೆರೆಸಿಡಿ. ಈ ಮಿಶ್ರಣವನ್ನು 2 ಗಂಟೆ ಕಾಲ ನೆನೆಯಲು ಬಿಡಿ. ನಂತರ ಇಡ್ಲಿ ತಟ್ಟೆಗೆ ಜಿಡ್ಡು ಸವರಿ ಇದರಿಂದ ಅರ್ಧರ್ಧ ಸೌಟು ಮಿಶ್ರಣ ತುಂಬಿಸಿ. 15-20 ನಿಮಿಷ ಬಿಸಿ ಬಿಸಿಯಾಗಿ ಹಬೆಯಲ್ಲಿ ಬೇಯಿಸಿ. ನಂತರ ಇವನ್ನು ಒಂದು ತಟ್ಟೆಯಲ್ಲಿ ಹರಡಿ, ಮೇಲೆ ತೆಂಗಿನ ತುರಿ ಉದುರಿಸಿ, ಸಾಸುವೆ ಮತ್ತಿತರ ಸಾಮಗ್ರಿ ಹಾಕಿ ಒಗ್ಗರಣೆ ಕೊಡಿ. ಇದನ್ನು ಪುದೀನಾ ಚಟ್ನಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಸ್ಟಫ್ಡ್ ಬ್ರೆಡ್ ಲಾಗ್
ಸಾಮಗ್ರಿ : 2 ಡಿನ್ನರ್ ರೋಲ್ ಬ್ರೆಡ್, ಅರ್ಧ ಕಪ್ ಬೆಂದ ಕಡಲೆಕಾಳು, 1 ಬೆಂದ ಆಲೂಗಡ್ಡೆ, 2 ಚಮಚ ಹುರಿದ ರವೆ, 1-2 ಹಸಿ ಮೆಣಸಿನಕಾಯಿ, 1-2 ಈರುಳ್ಳಿ, 2 ಚಮಚ ಬೆಣ್ಣೆ, ಕರಿಯಲು ಎಣ್ಣೆ, ರುಚಿಗೆ ಉಪ್ಪು.
ವಿಧಾನ : ಒಂದು ಬಟ್ಟಲಿಗೆ ಬೆಂದ ಕಾಳು, ಆಲೂ, ಹೆಚ್ಚಿದ ಹಸಿಮೆಣಸು, ಈರುಳ್ಳಿ, ರವೆ, ಉಪ್ಪು ಸೇರಿಸಿ ಚೆನ್ನಾಗಿ ಮ್ಯಾಶ್ ಮಾಡಿ. ಇದನ್ನು ರೋಲ್ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಡಿನ್ನರ್ ರೋಲ್ ಬ್ರೆಡ್‌ನ್ನು ಉದ್ದಕ್ಕೆ ಹೆಚ್ಚಿ ಅದನ್ನು ಟೊಳ್ಳು ಮಾಡಿ, ಮಧ್ಯೆ ರೋಲ್ಸ್ ಇರಿಸಿ. ಬಿಸಿ ತವಾ ಮೇಲೆ ಬೆಣ್ಣೆ ಸವರಿ ಈ ರೋಲ್ಸ್ ನ್ನು ತಿರುವಿ ಹಾಕುತ್ತಾ ಬಿಸಿ ಮಾಡಿ. ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಎಗ್‌ಪ್ಲಾಂಟ್ ಪಾಸ್ತಾ
ಸಾಮಗ್ರಿ: ಅರ್ಧ ಸೌಟು ಆಲಿವ್ ಎಣ್ಣೆ, 1 ಕಪ್ ಪಾಸ್ತಾ, 650 ಗ್ರಾಂ ಗುಂಡು ಬದನೆ, 1-2 ಈರುಳ್ಳಿ, 2-3 ಹುಳಿ ಟೊಮೇಟೊ, 2-3 ಹಸಿಮೆಣಸು, 4-5 ಎಸಳು ಬೆಳ್ಳುಳ್ಳಿ, 2 ಚಮಚ ವಿನಿಗರ್, ರುಚಿಗೆ ತಕ್ಕಷ್ಟು ಉಪ್ಪು, ಟೊಮೇಟೊ ಪ್ಯೂರಿ.
ವಿಧಾನ : ಗುಂಡು ಬದನೆ ಶುಚಿಗೊಳಿಸಿ, ಒರೆಸಿಕೊಂಡು ಗ್ಯಾಸ್ ಒಲೆ ಅಥವಾ ಕೆಂಡದಲ್ಲಿ ಲಘು ಸುಡಬೇಕು. ಇದರ ಸಿಪ್ಪೆ ಸುಲಿದು ಒಳಭಾಗ ಮಸೆದಿಡಿ. 2 ಕಪ್ ನೀರು ಕುದಿಸಿ. ಅದಕ್ಕೆ ಪಾಸ್ತಾ, ತುಸು ಉಪ್ಪು ಸೇರಿಸಿ ಬೇಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು ನಂತರ ಟೊಮೇಟೊ ಹಾಕಿ ಬಾಡಿಸಿ. ನಂತರ ಟೊಮೇಟೊ ಪ್ಯೂರಿ, ಉಪ್ಪು ಹಾಕಿ ಕೆದಕಬೇಕು. 2 ನಿಮಿಷ ಬಿಟ್ಟು ವಿನಿಗರ್ ಹಾಕಿ, ಪಾಸ್ತಾ ಮತ್ತು ಮಸೆದ ಬದನೆ ಸೇರಿಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ, ಬಿಸಿಬಿಸಿಯಾಗಿ ಸವಿಯಲು ಕೊಡಿ.